Published On: Thu, Apr 26th, 2018

ಕರ್ನಾಟಕದಲ್ಲಿ ರಂಗೇರಿದ ಚುನಾವಣೆ ಕಾವು: ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲವೇಕೆ ಪ್ರಧಾನಿ ಮೋದಿ?

170602130045-narendra-modi-file-exlarge-169

ಮಂಗಳೂರು:ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿ ಪ್ರಧಾನ ಮಂತ್ರಿಯಾದಾಗಿನಿಂದಲೂ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ  ಪ್ರಚಾರ ಮಾಡುತ್ತಿದ್ದ ಪ್ರಧಾನಿ, ದಕ್ಷಿಣ ಭಾರತದಲ್ಲಿಯೇ ಬಿಜೆಪಿಗೆ ಅತ್ಯಂತ ಪ್ರಮುಖವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಹತ್ತಾರು ಅನುಮಾನಗಳು ಮೂಡುತ್ತಿವೆ.

ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಕಾಂಗ್ರೆಸ್ ಮುಕ್ತ ಭಾರತವೇ ನನ್ನ ಗುರಿ ಎಂದು ಹೇಳಿದ್ದರು. ಅದರಂತೆ ದೇಶದ ಯಾವ ರಾಜ್ಯದಲ್ಲಿ ಚುನಾವಣೆ ನಡೆದರೂ ತಾವೇ ಖುದ್ದಾಗಿ ಪ್ರಚಾರದ ಅಖಾಡಕ್ಕೆ ಇಳಿದು ಹತ್ತಾರು ಸಮಾವೇಶಗಳಲ್ಲಿ ಭಾಗವಹಿಸಿ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿದ್ದರು. ಹಲವೆಡೆ ಚುನಾವಣೆ ಪೂರ್ವವೇ ಮೈತ್ರಿ ಮಾಡಿಕೊಂಡು ಗೆಲುವಿನ ತಂತ್ರ ಹೆಣೆಯುತ್ತಿದ್ದರು. ಆದರೆ, ಕರ್ನಾಟಕದಲ್ಲಿ ಮಾತ್ರ ಮೋದಿ ಅವರಿಂದ ಇಂತಹ ಯಾವುದೇ ತಂತ್ರ ಗಾರಿಕೆ ನಡೆಯುತ್ತಿಲ್ಲ ಎನ್ನುವುದು ರಾಜ್ಯದ ಜನತೆಯಷ್ಟೇ ಅಲ್ಲ, ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿಯೂ ಅನುಮಾನ ಮೂಡಿಸುತ್ತಿದೆ.

ಪ್ರಧಾನಿ ಹಲವೆಡೆ ನಡೆದ ಉಪ ಚುನಾವಣೆಯಲ್ಲಿಯೂ ಮತ ಬೇಟೆಯಾಡಿದ್ದಾರೆ. ಆದರೆ, ಕರ್ನಾಟಕ್ಕೆ ಮಾತ್ರ ಚುನಾವಣೆ ಘೋಷಣೆಯಾಗಿ ಪ್ರತಿಯೊಂದು ಪಕ್ಷಗಳು ಟಿಕೆಟ್ ಪಟ್ಟಿ ಬಿಡುಗಡೆ ಮಾಡಿದರೂ ಪ್ರಧಾನಿಯ ಸುಳಿವೇ ಇಲ್ಲ. ಇದು ಸಹಜವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ಲಾಭ ಮಾಡಿಕೊಡುತ್ತಿದೆ ಎನ್ನುತ್ತಿದೆ ಚುನಾವಣೆಯ ವಿಶ್ಲೇಷಣೆಯೊಂದು.

ಈ ಹಿಂದೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು. ಆದರೆ, ಸದ್ಯ ಪ್ರಧಾನಿ ಮೋದಿ ಅವರ ಆಗಮನದ ಕುರಿತು ಬಿಸಿಬಿಸಿ ಚರ್ಚೆಗಳು ಹೆಚ್ಚಾಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಈ ತಿಂಗಳ ಅಂತ್ಯದಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಕಾರ್ಯ ಪ್ರಾರಂಭಿಸಲಿದ್ದಾರೆ ಎಂಬ ಮಾತುಗಳನ್ನು ಹೇಳಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವರ್ತನೆ ಗಮನಿಸಿದರೆ, ರಾಜ್ಯ ನಾಯಕರ ಸಂಘಟನೆ ಹಾಗೂ ಪ್ರಚಾರ ಮಾರ್ಗದ ಕುರಿತು ಅಸಮಾಧಾನಗೊಂಡಿದ್ದಾರೆ ಎಂಬ ಸಂಶಯವೂ ವ್ಯಕ್ತವಾಗುತ್ತಿದೆ. ಅದೇನೆ ಇರಲಿ, ಕಾಂಗ್ರೆಸ್ ಮುಕ್ತ ಬಿಜೆಪಿಯ ಕನಸು ನನಸಾಯಿತೊ ಅಥವಾ ಬಿಜೆಪಿಯೇ ಕಾಂಗ್ರೆಸ್ ಗೆ ಬಲಿಯಾಯಿತೊ ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter