Published On: Sat, Feb 3rd, 2018

ಶ್ರೀ ಕ್ಷೇತ್ರ ಕುಡುಪು: “ಭೂಪುರ” ಆಕೃತಿಯ ನೂತನ ಭದ್ರಾ ಸರಸ್ವತಿ ತೀರ್ಥ ಸರೋವರ ಲೋಕಾರ್ಪಣೆ

ಪುರಾಣ ಪ್ರಸಿದ್ಧವಾದ ಹಾಗೂ ದಕ್ಷಿಣಭಾರತದ ಪ್ರಸಿದ್ಧ ನಾಗರಾಧಾನ ಕ್ಷೇತ್ರವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೊದ್ಧಾರದ ಪ್ರಯುಕ್ತ ನೂತನ ವಿಶಿಷ್ಠ ದಾರುಶಿಲ್ಪವನ್ನೊಳಗೊಂಡ ಗರ್ಭಗುಡಿಯು ಅತ್ಯಂತ ವಿಶಿಷ್ಟವಾಗಿ ಮೂಡಿ ಬಂದಿದ್ದು, ಪ್ರಸ್ತುತ ಈ ನವೀಕರಣ ಕಾರ್ಯಕ್ಕೆ ಇನ್ನೊಂದು ಅತೀ ವಿಶಿಷ್ಟವಾದ ಭೂಪುರಾಕಾರದ ನೂತನ ಭದ್ರಾ ಸರಸ್ವತಿ ತೀರ್ಥ ಸರೋವರದ ನವೀಕರಣ ಕಾರ್ಯವು ಪೂರ್ಣಗೊಂಡು ಸೇರ್ಪಡೆಯಾಗಿದ್ದು ಇದೇ ನವೆಂಬರ್ 22ರಂದು ಶ್ರೀ ದೇವರಿಗೆ ಅರ್ಪಣೆಗೊಳ್ಳಲಿದೆ.

ಕ್ಷೇತ್ರ ಪುರಾಣದ ಪ್ರಕಾರ ಸುಮಾರು 2000 ವರ್ಷ ಇತಿಹಾಸವಿರುವ ಈ ಪವಿತ್ರ ಕ್ಷೇತ್ರವು ಕೃತಯುಗದಲ್ಲಿ ಅವಿರ್ಭಾವ ಹೊಂದಿದೆ ಎಂದು ತಿಳಿದು ಬಂದಿದೆ. ಕ್ಷೇತ್ರದಲ್ಲಿ ಪ್ರಧಾನ ಆರಾಧ್ಯ ದೇವರಾಗಿ ಶ್ರೀ ಅನಂತ ಪದ್ಮನಾಭ, ಶ್ರೀ ಮಹಾಶೇಷ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರು ತ್ರಿಕಾಲ ಪೂಜೆಯೊಂದಿಗೆ ಆರಾಧನೆಗೊಳ್ಳುತ್ತಿದ್ದಾರೆ. ಸುಮಾರು 9 ಕೋಟಿ ರೂಪಾಯಿಯ ಸಮಗ್ರ ಯೋಜನೆ ಹಾಕಿಕೊಂಡಿದ್ದು ಪ್ರಸ್ತುತ ಕ್ಷೇತ್ರದ ಜೀರ್ಣೊದ್ಧಾರ ಕಾರ್ಯಕ್ಕೆ ಪ್ರಥಮ ಹಂತದ ಕಾಮಗಾರಿಗಳಲ್ಲಿ ಅಂದಾಜು 2 ಕೋಟಿ ವೆಚ್ಚದ ವಿಶೇಷ ದಾರು ಶಿಲ್ಪವನ್ನೊಳಗೊಂಡ ಗರ್ಭಗುಡಿ ಹಾಗೂ ಅಂದಾಜು ಸುಮಾರು 75 ಲಕ್ಷ ರೂಪಾಯಿ ವೆಚ್ಚದ ಭೂಪುರಾಕಾರದ ನೂತನ ಭದ್ರಾ ಸರಸ್ವತಿ ತೀರ್ಥ ಸರೋವರದ ಕಾರ್ಯ ಪೂರ್ಣಗೊಂಡಿದ್ದು, ಮುಂದೆ ಸುತ್ತ ಪೌಳಿ ಹಾಗೂ ಜಾರಂದಾಯ ದೈವಸ್ಥಾನದ ನವೀಕರಣ ಕಾರ್ಯ ನಡೆಯಲಿದೆ.

ಭದ್ರಾ ಸರಸ್ವತಿ ತೀರ್ಥ ಸರೋವರದ ವಿಶೇಷತೆ:
ಕ್ಷೇತ್ರ ಪುರಾಣದ ಇತಿಹಾಸದ ಪ್ರಕಾರ ಪುತ್ರ ಸಂತಾನವಿಲ್ಲದೆ ಕಂಗೆಟ್ಟಿದ್ದ ಕೇದಾರನೆಂಬ ವಿಪ್ರೋತ್ತಮರು ಚಿಂತಾಕ್ರಾಂತರಾಗಿ ಅಲೆದಾಡುತ್ತಾ ಭೂಲೋಕದ ದಶಾರಣ್ಯಗಳಲ್ಲಿ ಒಂದಾದ ಕದಳೀ ವನಕ್ಕೆ ಬಂದು ಪವಿತ್ರ ಭದ್ರಾ ಸರಸ್ವತಿ ಪುಣ್ಯ ತೀರ್ಥದ ತಟದಲ್ಲಿ ತಪೋನಿರತರಾಗಿದ್ದ ಪೂಜ್ಯ ಋಷ್ಯ ಶೃಂಗ ಮುನಿಯನ್ನು ಕಂಡು ಪ್ರಾರ್ಥಿಸತೊಡಗಿದರು. ಕೇದಾರನ ಚಿಂತೆಯರಿತ ಮುನಿವರ್ಯರು ನೀನು ಈ ಪುಣ್ಯ ಪ್ರದವಾದ ಭದ್ರಾ ಸರಸ್ವತಿ ಸರೋವರ ತಟದಲ್ಲಿ ಕುಳಿತು ಶ್ರೀ ಸುಬ್ರಹ್ಮಣ್ಯ ದೇವರನ್ನು ಭಕ್ತಿಯಿಂದ ಧ್ಯಾನಿಸಿದರೆ, ನಿನ್ನ ಮನಸ್ಸಿನ ಅಭಿಷ್ಟದಂತೆ ನಿನಗೆ ಶ್ರೀ ದೇವರು ಸಂತಾನಭಾಗ್ಯ ಕರುಣಿಸುವರು ಎಂಬ ಅಭಯ ನೀಡಿದರು. ಕೇದಾರನು ಪತ್ನಿ ಸಮೇತ ನಿತ್ಯವೂ ಈ ಪವಿತ್ರ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ಮಿಂದು ಸರೋವರದ ತಟದಲ್ಲಿ ಕುಳಿತು ತಪಸ್ಸು ಮಾಡಿದಾಗ, ಶ್ರೀ ಸುಬ್ರಹ್ಮಣ್ಯ ದೇವರು ಈ ಸರೋವರ ತಟದಲ್ಲಿ ಪ್ರತ್ಯಕ್ಷರಾಗಿ ಕೇದಾರ ಎಂಬ ವಿಪ್ರೋತ್ತಮರಿಗೆ ಸಂತಾನಭಾಗ್ಯ ಅನುಗ್ರಹಿಸುದರ ಪರಿಣಾಮ ಕೇದಾರನ ಧರ್ಮಪತ್ನಿ ಗರ್ಭವತಿಯಾಗಿ ಸರ್ಪದ ಮೂರು ಅಂಡಗಳನ್ನು ಪ್ರಸವಿಸುತ್ತಾಳೆ. ಚಿಂತಾಕ್ರಾಂತರಾದ ವಿಪ್ರೋತ್ತಮರು, ದೇವರಲ್ಲಿ ಸಂತಾನಭಾಗ್ಯವನ್ನು ಬೇಡಿದ್ದಕ್ಕೆ ತನಗೇ ಇದೇ ಫಲವೇ ಎಂದು ದುಃಖಿಸಿಕೊಂಡಾಗ, ಆಕಾಶ ಮಾರ್ಗದಿಂದ ಒಂದು ಅಶರೀರವಾಣಿಯೊಂದು ಕೇಳಿಸಿತು. “ಈ ಉರಗಾಂಡಗಳು ಸಾಮಾನ್ಯವಲ್ಲ, ಮಹಾಶೇಷ, ಮಹಾವಿಷ್ಣು, ಸುಬ್ರಹ್ಮಣ್ಯ ದೇವರು ಲೋಕ ಕಲ್ಯಾಣಕ್ಕಾಗಿ ಈ ರೂಪದಲ್ಲಿ ನಿನ್ನ ಪತ್ನಿಯ ಗರ್ಭದಲ್ಲಿ ಅವತರಿಸಿರುವರು. ಭದ್ರಾಸರಸ್ವತಿ ತೀರ್ಥ ಸರೋವರದ ಯಾವ ಸ್ಥಳದಲ್ಲಿ ನೀನು ಸ್ಕಂದೋಪಾಸನೆ ಮಾಡಿದೆಯೋ ಅದೇ ಸ್ಥಳದಲ್ಲಿ ಈ ಮೂರು ಉರಗಾಂಡಗಳನ್ನು ಗುಪ್ತವಾಗಿ ಪ್ರತಿಷ್ಟೆ ಮಾಡು, ಮುಂದೆ ಈ ಕ್ಷೇತ್ರವು ತ್ರಿಮೂರ್ತಿಗಳ ಸಾನಿಧ್ಯ ಪಡೆದ ವಿಶೇಷ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯುವುದು” ಎಂಬ ಅಭಯವಾಗುತ್ತದೆ. ಅಂತೆಯೇ ಕೇದಾರನು ಈ ಮೂರು ಮೊಟ್ಟೆಗಳನ್ನು ಕಾಡುಬಳ್ಳಿಗಳಿಂದ ಹೆಣೆದ (ಕುಡುಪು) ಬುಟ್ಟಿಯಲ್ಲಿ ಜೋಪಾನವಾಗಿಟ್ಟು ತಾನು ತಪಸ್ಸು ಮಾಡಿದ ಸ್ಥಳದಲ್ಲಿ ರಹಸ್ಯವಾಗಿ ಪ್ರತಿಷ್ಠೆ ಮಾಡಿದನು. ಈ ಕ್ಷೇತ್ರವು ಕುಡುಪು ಎಂದು ಪ್ರಸಿದ್ದಿಯಾಗಿದೆ. ಅಂತಹ ಪವಿತ್ರ, ಪಾವನ ಈ ಭದ್ರಾ ಸರಸ್ವತಿ ತೀರ್ಥ ಸರೋವರವು ಸುಮಾರು 75 ಲಕ್ಷಕ್ಕೂ ಮಿಕ್ಕಿದ ಹಣದಲ್ಲಿ ಸಮಗ್ರವಾಗಿ ಜೀರ್ಣೊದ್ಧಾರಗೊಂಡಿದೆ. ಇಂದಿಗೂ ಈ ಭದ್ರಾ ಸರಸ್ವತಿ ತೀರ್ಥದಲ್ಲಿ ಮಿಂದು ಭಕ್ತಿಯಿಂದ ಯಾರು ಶ್ರೀ ದೇವರನ್ನು ಪ್ರಾರ್ಥಿಸುತ್ತಾರೋ ಅವರ ಪಾಪ ಪರಿಹಾರಗೊಂಡು ಸಂತಾನ ಪ್ರಾಪ್ತಿಯಾಗುವುದು ಹಾಗೂ ಸಕಲ ಕಾಯಿಲೆಗಳೂ ವಾಸಿಯಾಗುವುದು. ಭಕ್ತರ ಅಭೀಷ್ಟಗಳೆಲ್ಲವೂ ಕೈಗೂಡುವುದು ಎಂಬ ಬಲವಾದ ನಂಬಿಕೆಯಿದೆ. ಕ್ಷೇತ್ರ ಪುರಾಣದ ಇತಿಹಾಸವನ್ನು ಅವಲೋಕಿಸಿದರೆ ಈ ದೇವಸ್ಥಾನಕ್ಕಿಂತಲೂ ಪ್ರಾಚೀನ ಕಾಲದಲ್ಲಿ ಪೂಜ್ಯ ಋಷ್ಯಶೃಂಗ ಮುನಿಗಳಿಂದ ಕೇದಾರ ಎಂಬ ವಿಪ್ರೋತ್ತಮರಿಗೆ ಮಂತ್ರೋಪದೇಶವಾದ ಪವಿತ್ರಸ್ಥಳ ಈ ಭದ್ರಾಸರಸ್ವತಿ ತೀರ್ಥ ಸರೋವರವಾಗಿದೆ. ಕೇದಾರ ಎಂಬ ವಿಪ್ರೋತ್ತಮರಿಗೆ ಶ್ರೀ ಅನಂತ ಪದ್ಮನಾಭ ಹಾಗೂ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷವಾದ ಸ್ಥಳ. ಈ ಕೆರೆಯ ತಟದಲ್ಲಿ ಶ್ರೀ ಅನಂತ ಪದ್ಮನಾಭ ಹಾಗೂ ಸುಬ್ರಹ್ಮಣ್ಯ ದೇವರನ್ನು ಗುಪ್ತವಾಗಿ ವಿಪ್ರೋತ್ತಮ ಇರಿಸಿದ ಪವಿತ್ರ ಜಾಗವಾದ ಕಾರಣ ಶ್ರೀ ದೇವರಿಗೆ ಹಾಗೂ ಭದ್ರಾ ಸರಸ್ವತಿ ತೀರ್ಥ ಸರೋವರಕ್ಕೆ ಅವಿನಾಭಾವ ಸಂಬಂಧ. ಈ ಪವಿತ್ರ ಸರೋವರದ ಒಳಗೆ ತೀರ್ಥೊದ್ಭವವಾಗುವ ಎರಡು ತೀರ್ಥ ಕುಂಡಗಳಿದ್ದು, ಈ ತೀರ್ಥಕುಂಡಕ್ಕೂ ಗರ್ಭಗುಡಿಗೂ ನಿಕಟ ಸಂಬಂಧವಿದೆ. ಪ್ರಸ್ತುತ ಈ ಭದ್ರಾ ಸರಸ್ವತಿ ತೀರ್ಥ ಸರೋವರವು ಪಾರಂಪಾರಿಕ ರಚನಾಕ್ರಮದಲ್ಲಿ ಪುನರ್ ರಚನೆಗೊಂಡಿದ್ದು, ಹಿಂದಿನ ಇತಿಹಾಸದ ರಾಜರ ಕಾಲದಲ್ಲಿ ಕಂಡು ಬರುವ ಪಾರಂಪರಿಕ ಸರೋವರ ವಿನ್ಯಾಸದ ರಚನೆಯು ಭಕ್ತ ಜನರಿಗೆ ತೃಪ್ತಿ ನೀಡಿದೆ. ಪ್ರಸ್ತುತ ಸರೋವರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೂ ಕಂಡು ಬರದ “ಭೂಪುರ” ಆಕೃತಿಯ ವಿನ್ಯಾಸದ ಕೆರೆಯಾಗಿದ್ದು ಕೆಂಪು ಕಲ್ಲಿನಿಂದ ಕೆರೆಯನ್ನು ನಿರ್ಮಿಸಲಾಗಿದೆ. ಸುಮಾರು 12 ಅಡಿಯಷ್ಟು ಆಳವನ್ನು ಹೊಂದಿರುವ ಈ ಸರೋವರದ ಮಧ್ಯ ಭಾಗದಲ್ಲಿ ವಿಶಿಷ್ಟ ಕೆತ್ತನೆಯನ್ನೊಳಗೊಂಡ ಶಿಲೆಕಲ್ಲಿನಿಂದ ರಚಿತವಾದ “ಅಲ್ಪ ವಿಮಾನ” ರೀತಿಯ ಮಂಟಪವಿದ್ದು, ಈ ಮಂಟಪವು 4 ವಿಶಿಷ್ಟ ಆಕಾರದ ಕಂಬ ಹೊಂದಿದ್ದು ಈ ನಾಲ್ಕು ಕಂಬಗಳಿಗೆ ಹೆಡೆಬಿಚ್ಚಿದ ನಾಗನ ಆಕಾರ ಸುತ್ತಿಕೊಂಡಿದ್ದು, ಕಂಬದ ಮೇಲಿನ ಮುಚ್ಚಿಗೆ ಆಕಾರ ಹೊಯ್ಸಳ ಶೈಲಿಯ ಕೆತ್ತನೆಯನ್ನು ನೆನಪಿಸುವಂತಿದೆ. ಈ ಮಂಟಪವನ್ನು ಪೂಜ್ಯ ಋಷ್ಯಶೃಂಗ ಮುನಿ ಮಂಟಪ ಎಂದು ಹೆಸರಿಸಲಾಗಿದ್ದು ಈ ಮಂಟಪದ ಒಳಗೆ ಸುಮಾರು 6 ಅಡಿ ಎತ್ತರದ ಐದು ಹೆಡೆಯ ವಾಸುಕೀ ನಾಗರಾಜ ದೇವರ ಏಕ ಶಿಲಾ ಕೆತ್ತನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸರೋವರದ ಸುತ್ತಲಿನ ಆಕರ “ಭೂಪುರಾಕಾರ” ರೀತಿಯಲ್ಲಿದ್ದು ಸುತ್ತಲೂ 4 ಅಂಕಣ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನ ಅಂಕಣದಲ್ಲಿ ಇಳಿಯುವ ಮೆಟ್ಟಿಲುಗಳು “ಭೂಪುರ” ಆಕಾರದ 4 ಅಂಕಣದ ಸುತ್ತುಭಾಗ ಕೆಂಪುಕಲ್ಲಿನಿಂದ ಮಾಡಿದ ಪ್ರಾಚೀನ ರೀತಿಯ ಪ್ರಾಕಾರ ಗೋಡೆ ಹೊಂದಿದೆ. ಪೂರ್ವ ದಿಕ್ಕಿನ ಅಂಕಣದ ಎದುರು 8 ಶಿಲಾ ಕೆತ್ತನೆಯ ಕಂಬಗಳಿಂದ ರಚಿತವಾದ ಪ್ರಾಚೀನ ರೀತಿಯ ಅವಭೃತ ಮಂಟಪವಿದ್ದು ವಿಶಿಷ್ಟ ವಿನ್ಯಾಸ ಹೊಂದಿದೆ. ಸುಮಾರು ಒಂದು ವರ್ಷದ ಅವಧಿಯೊಳಗೆ ಈ ಭದ್ರಾ ಸರಸ್ವತಿ ತೀರ್ಥ ಸರೋವರದ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಈ ಪುನರ್ ನಿರ್ಮಾಣಕಾರ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ. ಕೆ. ಕೃಷ್ಣರಾಜ ತಂತ್ರಿ, ಉಪಾಧ್ಯಕ್ಷರುಗಳಾದ ಶ್ರೀ ಭಾಸ್ಕರ್ ಕೆ., ಶ್ರೀ ಮನೋಹರ್ ಭಟ್, ಜತೆ ಕಾರ್ಯದರ್ಶಿಗಳಾದ ಶ್ರೀ ಸುಜನ್‍ದಾಸ್ ಕುಡುಪುರವರು ಹಗಲಿರುಳು ದುಡಿದು ತಮ್ಮ ವಿಶಿಷ್ಟ ಸೇವೆಯನ್ನು ಶ್ರೀ ದೇವರಿಗೆ ಸಲ್ಲಿಸಿರುವರು. ಇಂದಿಗೂ ಅನೇಕ ಭಕ್ತಾದಿಗಳು ಈ ಪವಿತ್ರ ಸರೋವರದಲ್ಲಿ ಮಿಂದು ತಮ್ಮ ಪಾಪ ಪರಿಹಾರ ಮಾಡಿ, ಶ್ರೀ ದೇವರಿಗೆ ಸೇವೆ ಸಲ್ಲಿಸಿರುವರು. ಈ ಸರೋವರದ ತೀರ್ಥಸ್ನಾನವು ರೋಗ ಪರಿಹಾರಕ್ಕೆ ಪ್ರಸಿದ್ದಿ ಪಡೆದಿದ್ದು ಷಷ್ಠಿ ಮಹೋತ್ಸವದ ಸಂದರ್ಭ ಹಾಗೂ ಸ್ಕಂದ ಪಂಚಮಿಯ ಮುಂಜಾನೆ ಹಾಗೂ ಷಷ್ಠಿ ಬ್ರಹ್ಮರಥೋತ್ಸವದಂದು ತೀರ್ಥಸ್ನಾನ ಮಾಡಿ ಶ್ರೀ ದೇವರಿಗೆ ಹರಿಕೆ ಸಲ್ಲಿಸುವರು. ಸ್ಕಂದ ಪಂಚಮಿಯಂದು ರಾತ್ರಿ ಅತೀ ವಿಶಿಷ್ಠವಾದ ತೇಪೋತ್ಸವವು ಶ್ರೀ ದೇವರಿಗೆ ಇದೇ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ಜರಗಲಿದ್ದು ಅಂದು ರಾತ್ರಿ ಸಹಸ್ರಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ದೇವರ ಉತ್ಸವ ದರ್ಶನ ಮಾಡುವರು. ದ್ವಜಾರೋಹಣ ಉತ್ಸವದ ಸಂದರ್ಭ ಅವಭೃತೋತ್ಸವದಂದು ಶ್ರೀ ದೇವರ ಅವಭೃತ ಸ್ನಾನ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ವೈಭವದಿಂದ ಜರಗುತ್ತದೆ. ದೇವಳದ ಆಡಳಿತ ಮಂಡಳಿ, ಜೀರ್ಣೊದ್ಧಾರ ಸಮಿತಿ, ಕಾರ್ಯನಿರ್ವಹಣಾಧಿಕಾರಿ ಹಾಗೂ ಊರ-ಪರವೂರ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮುಂದೆ ನಡೆಯಲಿರುವ ಸುತ್ತ ಪೌಳಿ, ನಾಗಬನ ನವೀಕರಣ, ಜಾರಂದಾಯ ದೈವಸ್ಥಾನದ ನವೀಕರಣ ಕಾರ್ಯದಲ್ಲಿ ಭಕ್ತಜನರು ಪೂರ್ಣಸಹಕಾರ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕೆಂದು ವಿನಂತಿಸುತ್ತಿದ್ದೇವೆ.

|ಓಂ ಶ್ರೀ ಅನಂತ ಪದ್ಮನಾಭ ಪ್ರಸನ್ನ||

ಶ್ರೀ ಕ್ಷೇತ್ರ ಕುಡುಪು
ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಡುಪು, ಮಂಗಳೂರು, 575028   ದ.ಕ.ಜಿಲ್ಲೆ

ಲೇಖನ: ವಾಸುದೇವ ರಾವ್ ಕುಡುಪು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter