Published On: Mon, Jan 1st, 2018

ತುಳುನಾಡಿನ ಜೀವನ ಶೈಲಿಗೆ ಮರುಹುಟ್ಟು ನೀಡುವ ‘ಪರ್ಬೊದ ಸಿರಿ’

gur-dec-31-golidadiguttu-1

ಗುರುಪುರ: ಹಿಂದೆ ಯಾವುದೋ ದೂರದ ಭಾಗದಲ್ಲಿ ಗಂಟೆ-ಜಾಗಟೆ ಧ್ವನಿ ಕೇಳಿಸಿದರೆ ಅಲ್ಲೊಂದು ಮಂದಿರ ಅಥವಾ ಚರ್ಚ್ ಇರಬಹುದೆಂದು ಜನ ಯೋಚಿಸುತ್ತಿದ್ದರು. ಆದರೆ ಈ ಕಾಲಕ್ಕೆ ನಿಮ್ಮ ಆ ನಂಬಿಕೆ ಹುಸಿಯಾಗಬಹುದು. ಯಾಕೆಂದರೆ ಇದು ಯಾಂತ್ರಿಕ ಕಾಲಮಾನ. ಹೌದು, ಇಂದು ಜನ ಆಧುನಿಕ ಜಗತ್ತಿನ ವಿಚಾರಗಳಿಗೆ ಮಾರು ಹೋಗಿ, ದುಬಾರಿ ಎಂದಾದರೂ ತಮ್ಮ ಜೀವನ ಶೈಲಿ ಬದಲಿಸಲು ಪ್ರಯತ್ನಿಸುತ್ತ, `ತಮ್ಮತನ’ ಕಳೆದುಕೊಳ್ಳುವ ಹಂತ ತಲುಪಿದ್ದುಂಟು.

ಬದಲಾವಣೆ ಬೇಕೆನ್ನುವುದು ಸರಿಯಾಗಿದ್ದರೂ, ಈ ಧಾವಂತದಲ್ಲಿ `ಹಳೆ ಬೇರು, ಹೊಸ ಚಿಗುರು’ ನೀತಿ ಮರೆತಲ್ಲಿ ಎಡವಟ್ಟುಗಳು ಸಂಭವಿಸದೆ ಇರದು. ಅಂತಹ ಸನ್ನಿವೇಶಗಳಿಗೆ ಈ ಸಮಾಜದಲ್ಲಿ ಕೊರತೆ ಇಲ್ಲ. ಇದಕ್ಕೆ ಅಪವಾದ ಎಂಬಂತೆ ಪ್ರತಿ ವರ್ಷ ಇಲ್ಲೊಂದು ಸಾಮಾಜಿಕ ಸುಧಾರಣೆ ಧ್ಯೇಯೋಕ್ತಿಯ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಗತಕಾಲದ ನಮ್ಮ ಜೀವನ ಶೈಲಿಗೆ ಮರುಹುಟ್ಟು ನೀಡುವ ಪ್ರಯತ್ನವೊಂದು ನಡೆಯಲಿದೆ. ಇದು ನಿಜಕ್ಕೂ ಸ್ವಾರಸ್ಯಕರ ಹಾಗೂ ಸಂರ್ಭೋಚಿತ ಕಾರ್ಯಕ್ರಮ.

ತುಳುನಾಡಿನ ಗತಕಾಲದ ಜೀವನ ಶೈಲಿ ನಮ್ಮ ಸುಂದರ ಮತ್ತು ನೈಜ ಬದುಕಿಗೆ ಸಾಕ್ಷಿಯಾಗಿದ್ದರೆ, ಅದು ಇಂದು ಮಾಯವಾಗಿ ಜನ ಪರಕೀಯ ಜೀವನ ಶೈಲಿಯೇ ಶ್ರೇಷ್ಠ ಎನ್ನುವ ಬರೀ ಕಲ್ಪನಾ ಲೋಕದಲ್ಲಿ ವಿವರಿಸುತ್ತಿದ್ದಾರೆ.

ಈ ಹಂತದಲ್ಲಿ, ಹಲವು ವರ್ಷಗಳಿಂದೀಚೆಗೆ ನಮ್ಮೂರ ಜಾತ್ರೆ, ಉತ್ಸವ, ಬಂಡಿ…ಮೊದಲಾದ ಮಣ್ಣಿನ ಮೆರಗು ಮರೆಯಾಗಿ ನಮ್ಮ ಸಂಸ್ಕೃತಿಯೇ ನೀರಸ ಎನ್ನುವ ಹಂತಕ್ಕೆ ಜನಮನ ತಲುಪಿದೆ. ತತ್ಪರಿಣಾಮವಾಗಿ ಜಾತ್ರೆಗಳು ಫಿಲ್ಮಿ ಡಾನ್ಸ್, ಐಶಾರಾಮಿ ಶೋಗಳಿಗೆ ಸೀಮಿತವಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ. ಇದು ನಮ್ಮ-ನಿಮ್ಮೆಲ್ಲರ ಪ್ರಸಕ್ತ ಅನುಭವವೂ ಆಗಿದೆ. ಇದರಿಂದ ಹೊರ ಬಂದು, ನಮ್ಮ ನೈಜ ಜೀವನ ಶೈಲಿಗೆ ಹಿಂದಿರುಗಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಎದುರಾದರೆ, ಖಂಡಿತವಾಗಿಯೂ `ಇದೆ’ ಎಂಬ ಉತ್ತರ ಸಿಗುತ್ತದೆ.

ಈ `ಇದೆ’ ಎಂಬ ಸಕಾರಾತ್ಮಕ ನಿಲುವಿನೊಂದಿಗೆ ನಮ್ಮ ಗತಕಾಲದ ಜೀವನ ಶೈಲಿಯ ಮೆರಗನ್ನು ಮೆಲುಕು ಹಾಕಿ, ಗ್ರಾಮೀಣ ಜನರಿಗೆ ಉಣ ಬಡಿಸುವ ಅತಿ ಸಾಹಸ ಮತ್ತು ಅಗತ್ಯದ ಕೆಲಸಕ್ಕೆ ಗುರುಪುರ ಗೋಳಿದಡಿ ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.

ಪರ್ಬೊದ ಸಿರಿ: ನಮ್ಮ ಭಾರತ ಹಳ್ಳಿಗಳಿಂದ ಜೋಡಿಸಲ್ಪಟ್ಟ ಅತಿ ಸುಂದರ ದೇಶವಾಗಿದೆ. ಗ್ರಾಮೀಣ ಜೀವನವೇ ಈ ದೇಶದ ಜೀವಾಳ. ಇಲ್ಲಿನ ನಾಗರಿಕತೆಯ ಬೇರಿರುವುದೇ ಗ್ರಾಮ ಜೀವನದಲ್ಲಿ. ಇದರಲ್ಲಿರುವ ಆತ್ಮೀಯತೆ, ಸಹೋದರತೆ, ಸೌಹಾರ್ದತೆ, ಸಹಕಾರ ಜೀವನ, ಭಾವನೆಗಳ ಅನುಸಂಧಾನತೆ ಪ್ರಪಂಚದ ಯಾವುದೇ ದೇಶದಲ್ಲಿಯೂ ಕಾಣಸಿಗದು. ಇದುವೇ ಭಾರತೀಯ ಗ್ರಾಮ ಜೀವನ ಸೊಗಡಾಗಿದೆ.

90ರ ದಶಕದಲ್ಲಿ ಆರಂಭವಾದ ಆರ್ಥಿಕ ಸುಧಾರೀಕರಣ ನೀತಿ ಕ್ರಮೇಣ ಗ್ರಾಮ ಜೀವನ ನುಂಗಲಾರಂಭಿಸಿತು. ನಗರೀಕರಣವೆಂಬುದು ಹುಚ್ಚು ಭ್ರಮೆ. ಮಾಲ್ ಸಂಸ್ಕೃತಿಗೆ ಗ್ರಾಮ ಜನರು ಮಾರು ಹೋದರು. ಆಗ ಗ್ರಾಮದಲ್ಲಿ ಜರುಗುತ್ತಿದ್ದ ಜಾತ್ರೆ, ನೇಮ, ಕೋಲ, ನಡಾವಳಿ, ಉತ್ಸವಗಳು ಸೊರಗಲಾರಂಭಿಸಿ, ಈ ಬಗೆಗಿನ ಗ್ರಾಮವಾಸಿಗಳ ಆಸಕ್ತಿ ಕಡಿಮೆಯಾಯಿತು.

ಜಾತ್ರೆಗಳು, ಉತ್ಸವ, ನೇಮಗಳು ವರ್ಷಕ್ಕೊಂದು ಬಾರಿ ಎಲ್ಲರೂ ಒಂದೆಡೆ ಸೇರಿ ತಮ್ಮ ಕಷ್ಟ, ಸುಖವನ್ನು ಪರಸ್ಪರರು ಹಂಚಿಕೊಳ್ಳುವ ಸುದಿಮನ. ಆಗ ಇಲ್ಲಿ ನಡೆಯುತ್ತಿದ್ದ ಸಂತೆಗಳಲ್ಲಿ ಅದೆಷ್ಟೋ ಆರ್ಥಿಕ ವ್ಯವಹಾರ ನಡೆಯುತ್ತಿತ್ತು.

ನಗರೀಕರಣದ ಪ್ರಭಾವದಿಂದ ಇವೆಲ್ಲವುಗಳ ಓಘ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರೆ, ಉತ್ಸವ, ನೇಮ, ಕೋಲಗಳು ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿವೆ. ಗ್ರಾಮ ಜೀವನವೇ ಸಿನಿಕವಾಗಿದೆ. ಮಾನವೀಯತೆ, ಪ್ರೀತಿ, ಸೌಹಾರ್ದತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಅದು ಪುನರಪಿ ರೂಪಿತವಾದಾಗ ಮಾತ್ರ ಭಾರತ ಮತ್ತೊಂದು ಬಾರಿ ವಿಶ್ವಗುರು ಸ್ಥಾನ ಪಡೆಯಬಲ್ಲುದು.

ಗ್ರಾಮೀಣ ಜಾತ್ರೆಗಳು ಸಂಬಂಧಗಳ ಬೆಸೆಯುವ ಸೇತು ಅಥವಾ ಸಂಸ್ಕೃತಿ ಸಾರುವ ಪ್ರತೀಕ. ಮರೆಯಾಗಿರುವ ಈ ಪ್ರತೀಕದ ಪುನರುತ್ಥಾನ ಅವಶ್ಯ. ತುಳುನಾಡಿನ ಉದ್ದಗಲಕ್ಕೆ ಹರಡಿರುವ ಗುತ್ತಿನ ಮನೆಗಳು ಈ ಕೆಲಸ ಮಾಡುವುದರೊಂದಿಗೆ ನಮ್ಮ ‘ಗ್ರಾಮ ಜೀವನ’ ಸಂಪ್ರದಾಯ ಜಗತ್ತಿಗೆ ಎತ್ತಿ ಹಿಡಿಯಬೇಕು” ಎಂದು ಆಶಯ ಈ `ಪರ್ಬೊ'(ಹಬ್ಬ) ಹಾಗೂ ಈ ಬಾರಿಯ `ಪರ್ಬೊದ ಸಿರಿ’ಯದ್ದಾಗಿದೆ.

gur-de-31-vardhaman shetty

ಸಂತೆಯಲ್ಲಿ 25ಕ್ಕೂ ಹೆಚ್ಚು ಅಂಗಡಿಗಳು ಇರುತ್ತವೆ. ಅಂಗಡಿಗಳನ್ನಿಡುವ ಮಂದಿಗೆ ವ್ಯಾಪಾರವಾಗದ್ದಿದ್ದರೆ ಅವರಿಗೆ ಅಗತ್ಯ ಸಹಾಯ ಮಾಡಲಾಗುವುದು. ನಾವೀಗ ನಗರೀಕರಣದಿಂದ ಮರಳಿ ಗ್ರಾಮೀಣ ಜೀವನ ಶೈಲಿಯತ್ತ ಮರಳಬೇಕು. ಸಮುದಾಯದ ವೃತ್ತಿ ಕಸುಬಿಗೆ ಜೀವ ತುಂಬುವ ಪ್ರಯತ್ನವಾಗಬೇಕು. ಈ ನಿಟ್ಟಿನಲ್ಲಿ ನಾವು ಗ್ರಾಮೀಣ ಜನರಲ್ಲಿ ಕುಲಕಸುಬಿನ ಸಿರಿವಂತಿಕೆ ಬಿಂಬಿಸಿ, ನಮ್ಮೆಲ್ಲರ ಜೀವನ ಕುಲಕಸುಬಿನಲ್ಲೇ ಶ್ರೀಮಂತಗೊಳ್ಳುವಂತಾಗಬೇಕು. ಇಂಜಿನಿಯರ್ ಅಥವಾ ಇನ್ನಿತರ ಒಂದೆರಡು ಪದವಿ ಪಡೆದು ತಿಂಗಳಿಗೆ ಕೆಲವು ಸಾವಿರ ಇಲ್ಲವೇ ಲಕ್ಷಗಳಲ್ಲಿ ಸಂಬಳ ಪಡೆಯುವ ಕೆಲಸ ಮಾಡುವ ಬದಲಿಗೆ, ಸರ್ಕಾರದ ಸಹಾಯ ಪಡೆದು ವೃತ್ತಿ ಕಸುಬಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳುತ್ತಾರೆ ಗೋಳಿದಡಿ ಗುತ್ತಿನಲ್ಲಿ ನಿರಂತರ ನ್ಯಾಯದಾನ ಮಾಡುತ್ತಿರುವ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ.

“ಆಧುನಿಕ ಸೋಗು ಮತ್ತು ರಾಜಕೀಯ ಉದ್ದೇಶಗಳಿಂದಾಗಿ ಸಮುದಾಯಗಳು ಒಡೆದು ಹೋಗುತ್ತಿದ್ದು, ಪಿರ್ಬೊದ ಸಿರಿಯ ಈ ವಿನೂತನ ಕಲ್ಪನೆಯ ಮೂಲಕ ಸಮುದಾಯ ಬೆಸೆಯುವ ಸಣ್ಣ ಪ್ರಯತ್ನ ಇದಾಗಿದೆ. ಇದು ಇತರ ಕಡೆಗಳಲ್ಲೂ ಪಸರಿಸಬೇಕು. ಈ ಮೂಲಕ ನಮ್ಮವರ ಜೀವನದಲ್ಲಿ ಹೊಸ ಚೈತನ್ಯ ಮೂಡಬೇಕೆಂಬ ಆಸೆ ನನ್ನದಾಗಿದೆ.”

-ರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಸಿರಿಯ ರುವಾರಿ

gur-dec-31-shakthi kallu

 

ಜ. 20ರಂದು ‘ಪರ್ಬೊದ ಸಿರಿ': ಜ.19ರಂದು ಗುತ್ತುದ ವಾರ್ಷಿಕ ‘ಪರ್ಬೊ’ದಲ್ಲಿ ಬ್ರಹ್ಮಶ್ರೀ ಶಿರೋಮಣಿ ಕೆ. ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಶ್ರೀ ಚಂಡಿಕಾ ಹೋಮ ಮತ್ತು ಮೂಡುಗಣಪತಿ ಸೇವೆ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜ. 20ರಂದು ‘ಪರ್ಬೊದ ಸಿರಿ’ ಜರಗಲಿದೆ.

ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ಆಯೋಜಿಸಲಾಗುವ ‘ಪರ್ಬೊದ ಸಿರಿ’ಯನ್ನು ಗ್ರಾಮೀಣ ಜಾತ್ರೆ ನೆನಪಿಸುವ ಸಂತೆ, ಗ್ರಾಮೀಣ ಕುಲ ಕಸುಬದಾರ ಹಿರಿಯರಿಂದ(ಲಕ್ಷ್ಮಣ ಆಚಾರ್ಯ ಚಿಲಿಂಬಿಗುಡ್ಡೆ, ತಿಮ್ಮಪ್ಪ ಪೂಜಾರಿ ಕಾಜಿಲ, ಗಂಗಾಧರ ಸಪಲಿಗ ಬಾರಿಕೆ, ಹುಸೈನಬ್ಬ ತಾರಿಕರಿಯ, ಮೌರಿಸ್ ಡಿ’ಸೋಜ ಗುರುಪುರ, ಕಾವೇರಿ ಪೂಜಾರ್ತಿ ಗುರುಪುರ ಮತ್ತು ರಾಮ ಗುರಿಕಾರ ಬಡಕರೆ) ಉದ್ಘಾಟನೆ ಗೊಳ್ಳಲಿದೆ.

ಜ. 19 ಮತ್ತು 20ರಂದು ನಡೆಯಲಿರುವ ಶಕ್ತಿ ಕಲ್ಲುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸುತ್ತಲ 10 ಗ್ರಾಮದವರು ಆಧಾರ್ ಕಾರ್ಡು ಮಂಡಿಸಬೇಕು. ಎರಡೂ ದಿನವೂ ಊಟೋಪಚಾರವಿದೆ.

ಜ. 19ರಂದು ಸಂಜೆ ‘ಗುತ್ತಿನ ವರ್ಷದ ಒಡ್ಡೋಲಗ’ ಜರುಗಲಿದ್ದು, ಇದರಲ್ಲಿ ಗಣ್ಯರಾದ ಚಿಕ್ಕಮಗಳೂರಿನ ಕೆ ಎಸ್ ನಿತ್ಯಾನಂದ, ತಂತ್ರಿಗಳಾದ ಜಿ ಟಿ ಅಣ್ಣು ಭಟ್, ಮುಲ್ಕಿಯ ಅರಸರಾದ ಎಂ ದುಗ್ಗಣ್ಣ ಸಾವಂತ, ಡಾ. ಕೋಟೆಕುಂಜ ಲತಾ ಶೆಟ್ಟಿ, ಗುರುರಾಜ ಮಾಡ, ಸದಾಶಿವ ಶೆಟ್ಟಿ, ಭಾಗ್ಯರಾಜ ಆಳ್ವ, ರಾಜೀವ ಅಂಚನ್ ಪಾಲ್ಗೊಳ್ಳುವರು.

ಸಂಜೆ 7-7.30ರವರೆಗೆ ಮಾಲೆಮಾರ್ ಫೈನ್ ಆಟ್ರ್ಸ್ ಅಕಾಡಮಿ ಮಂಗಳೂರು ಇವರಿಂದ ‘ಗತ ವೈಭವ’, ರಾತ್ರಿ 11ರಿಂದ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದಲ್ಲಿ ‘ಕಡಲ ಮಗೆ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಜ. 20ರಂದು ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ‘ಪುಣ್ಯ ಲಹರಿ(ಶಬರಿ)’ ಸಮೂಹ ಗೀತ ನೃತ್ಯ ರೂಪಕ ಜರಗಲಿದೆ.

ಬಳಿಕ, 8.15ರಿಂದ ರಾತ್ರಿ 11 ಗಂಟೆಯವರೆಗೆ ಪ್ರತಿ ವರ್ಷದಂತೆ ಟಾಗೋರ್ ದಾಸ ಬಳಗದವರಿಂದ ‘ಯಾದೋಂಕಿ ಶ್ಯಾಮ್’ ಸಂಗೀತ ರಸಮಂಜರಿ ಪ್ರಸ್ತುತಗೊಳ್ಳಲಿದೆ.

ವರದಿ:ಧನಂಜಯ, ಗುರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter