Published On: Tue, Nov 28th, 2017

ಕಟೀಲು ಆರು ಮೇಳದ ಕಲಾವಿದರ ಬಹಿರಂಗ ಹೇಳಿಕೆ…

ಕಟೀಲು: ಯಕ್ಷಗಾನ ಎಂಬುದು ಶ್ರೀಮಂತ ಕಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಕ್ಷಗಾನ ಕಲಾವಿದರ ಬದುಕು ಯಾರಿಗೂ ಬೇಡ ಎಂಬ ಸ್ಥಿತಿ ಇತ್ತು. ಕಲೆಯ ಮೇಲಿನ ಪ್ರೀತಿಯಿಂದಲೋ ಬದುಕು ನಿರ್ವಹಣೆಗಾಗಿಯೋ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದ ಕಲಾವಿದನ ಬದುಕಿಗೆ ಮೊದಲಿನಿಂದಲೂ ಭದ್ರತೆ ಎಂಬುದು ಇರಲಿಲ್ಲ. ಯಾವುದೇ ವೃತ್ತಿಪರ ಮೇಳಗಳು ಆರು ತಿಂಗಳಷ್ಟೇ ತಿರುಗಾಟ ಮಾಡುತ್ತಿದ್ದು ಮಳೆಗಾಲದಲ್ಲಿ ಯಾವುದೇ ಉತ್ಪತ್ತಿ ಇಲ್ಲದೆ ಕಲಾವಿದನ ಬದುಕು ಅತಂತ್ರವಾಗುತ್ತಿತ್ತು.download

ಈಗಲೂ ಮೇಳ ತಿರುಗಾಟ ಎಂಬುದು ಆರು ತಿಂಗಳು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಬಿಡಿ ಪ್ರದರ್ಶನಗಳು ನಡೆಯುತ್ತಿವೆಯಾದರೂ ಬದುಕಿನ ಸುಭದ್ರತೆಗೆ ಬೇಕಾದ ಸಂಪನ್ಮೂಲ ಅದರಿಂದ ಲಭ್ಯವಿಲ್ಲ. ಅದರಲ್ಲಿಯೂ ಕೆಲವು ಕಲಾವಿದರಿಗೆ ಮಾತ್ರ ಮಳೆಗಾಲದ ಪ್ರದರ್ಶನದಲ್ಲಿ ಅವಕಾಶ ಸಿಗುತ್ತಿದ್ದು ಬಹಳಷ್ಟು ಕಲಾವಿದರು ಅಜ್ಞಾತರಾಗಿಯೇ ಇರುತ್ತಾರೆ. ಕಟೀಲು ಕ್ಷೇತ್ರದ ಕುರಿತಾದ ಭಕ್ತಿಯಿಂದಲೋ ಕಟೀಲು ಮೇಳಗಳಲ್ಲಿ ವೃತ್ತಿನಿರತರಾದ ಕಲಾವಿದರ ಪ್ರೀತಿಯಿಂದಲೂ ಯಕ್ಷಗಾನದ ಕುರಿತಾದ ಆಸ್ಥೆಯಿಂದಲೂ ಕಟೀಲು ಮೇಳಗಳ ಸೇವಾದಾರರ ಹಿತವನ್ನು ಸಾಧಿಸುವ ಧ್ಯೇಯದಿಂದಲೂ ಕಟೀಲು ಕ್ಷೇತ್ರದ ಘನತೆಗೆ ಕುಂದಾಗದಂತೆ ಕಾರ್ಯವನ್ನು ಎಸಗುತ್ತಿರುವ ಸಂಸ್ಥೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷ ಧರ್ಮಬೋಧಿನಿ ಚಾರಿಟೇಬಲ್ ಟ್ರಸ್ಟ್ (ರಿ.) ನೇತೃತ್ವದಲ್ಲಿ ಕಟೀಲು ಮೇಳಗಳಿಗೆ ಅನೇಕ ಅನುಕೂಲಗಳು ಒದಗುತ್ತಿವೆ. ನಿಯತ್ತಿನಿಂದಿದ್ದರೆ ಕಟೀಲು ಮೇಳದ ಕಲಾವಿದರಿಗೆ ಅಭದ್ರತೆ ಎದುರಾಗದು.
ಕಲಾವಿದರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ಟ್ರಸ್ಟ್ ಯಕ್ಷಗಾನ ನಡೆಯುವ ಸ್ಥಳಕ್ಕೆ ಕಲಾವಿದರು ಹಾಗೂ ಸಿಬ್ಬಂದಿಗಳು ಸಂಚರಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ , ಸೇವಾದಾರರಿಗೆ ಅನುಕೂಲವಾಗುವಂತೆ ವೇದಿಕೆ ಸಹಿತವಾದ ರಂಗಸ್ಥಳ, ದೇವಿ ಮಹಾತ್ಮೆ ಪ್ರದರ್ಶನಕ್ಕೆ ಮಿತದರ, ಆರೂ ಮೇಳಗಳಲ್ಲಿ ಏಕಪ್ರಕಾರ ಸ್ವರೂಪದ ಬೆಳ್ಳಿಯ ತೂಗುಯ್ಯಾಲೆ ಅವೆಲ್ಲವನ್ನು ಮಿತದರದಲ್ಲಿ ಸೇವಾಭಾವದಿಂದ ಸದ್ರಿ ಟ್ರಸ್ಟ್ ಒದಗಿಸುತ್ತಿದೆ.
ಇದರಿಂದ ಕಲಾವಿದರಿಗೂ ಸೇವಾದಾರಿಗೆ ತುಂಬ ಅನುಕೂಲವಾಗಿದೆ.IMG-20171128-WA0221

ಈ ವರ್ಷ ಆರು ಹೊಸ ಬಸ್ಸು ಹಾಗೂ ಸರಕು ಸಾಗಣೆಗೆ ಲಾರಿ ವ್ಯವಸ್ಥೆ ಮಾಡಲಾಗಿದೆ. ಮರದ ಹಲಗೆಯ ವೇದಿಕೆ, ಧ್ವನಿವರ್ಧಕ ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಯನ್ನು ಟ್ರಸ್ಟ್ ವತಿಯಿಂದಲೇ ಒದಗಿಸಲಾಗಿದೆ. ಪ್ರತಿ ಮೇಳಕ್ಕೆ ತಲಾ ಎರಡು ಜನರೇಟರ್ ಒದಗಿಸಲಾಗಿದೆ. ಯಕ್ಷಗಾನ‌ ಸೇವಾದಾರರಿಂದ ನಿರ್ವಹಣೆಗಾಗಿ ಬಂದ ಒಂದು ಮಿತವಾದ ನಿಯಮಿತವಾದ ದೇಣಿಗೆ ಸಂಗ್ರಹಿಸಿ ಅದನ್ನು ನಿರ್ವಹಿಸುವ ಟ್ರಸ್ಟ್, ಮೇಳದಲ್ಲಿ ಪೂಜೆಗೊಳ್ಳುವ ದೇವರ ಕಿರೀಟಕ್ಕೆ ಬಂಗಾರದ ಲೇಪನವನ್ನು ಮಾಡುವಾಗಲೂ ಗರಿಷ್ಠ ಪ್ರಮಾಣದ ಸಹಾಯ ಒದಗಿಸಿದೆ. ಮಳೆಗಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಕಲಾವಿದರಿಗೆ ಪ್ರೋತ್ಸಾಹ ಧನ ಕೊಟ್ಟು ಸಹಕರಿಸುತ್ತಿದೆ. ಕಲಾವಿದರ ಬದುಕಿಗೊಂದು ಭದ್ರತೆ ಕೊಟ್ಟಿರುವ ಟ್ರಸ್ಟ್ ಯಕ್ಷಗಾನ ಮೇಳಗಳ ಸಂಚಾಲನೆಯಲ್ಲಾಗಲೀ ಯಾವುದೇ ವ್ಯವಹಾರಗಳಲ್ ಮಧ್ಯ ಪ್ರವೇಶಿಸುವುದಿಲ್ಲ. ಶ್ರೀದೇವಿಯ ದಯೆ, ಆಡಳಿತ ಮಂಡಳಿ, ಅರ್ಚಕರು, ಸೇವಾದಾರರ ಸಹಕಾರದಿಂದ ಸಾಗುತ್ತದೆ ಎಂಬ ಭಾವವನ್ನು ಬಲವಾಗಿ ನಂಬಿ ಸಮರ್ಪಣಾ ಭಾವದಿಂದ ಕಾರ್ಯವೆಸಗುತ್ತಿದೆ.IMG-20171128-WA0216

IMG-20171128-WA0224

ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಅಜ್ಜ ಕೊರಗ ಶೆಟ್ಟರು, ತಂದೆ ವಿಠಲ ಶೆಟ್ಟರು ಮೇಳದ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದವರು. ಹೊಸತನ ಸೃಸೃಷ್ಟಿಸಿದವರು. ಸದ್ಯ ಸುಮಾರು ಇಪ್ಪತ್ತು ವರ್ಷ ಸುದೀರ್ಘ ಅವಧಿಗೆ ಸೇವೆಯಾಟ ನಿಗದಿಯಾಗಿದ್ದು ಅದು ಶ್ರೀದೇವಿಯ ಪ್ರಸನ್ನತೆಯನ್ನು ಸಾರಿದೆ, ಆರು ಮೇಳದ ಕಲಾವಿದರಿಗೆ ಭದ್ರತೆ ಒದಗಿಸಿದೆ. ಬಹಳಷ್ಟು ಕಲಾವಿದರು ಹಗಲು ಇತರ ಉದ್ಯೋಗ ಮಾಡುತ್ತಾ ರಾತ್ರಿ ಯಕ್ಷಗಾನದಲ್ಲಿ ಸೇವೆ ಸಲ್ಲಿಸುತ್ತಿದದ್ದರೂ ಅವರ ಜೀವನ ನಿರ್ವಹಣೆಗೆ ತೊಂದರೆ ಆಗದಂತೆ ಅನುಕೂಲ ಒದಗಿಸಿದ್ದಾರೆ. ಹೀಗೆ ಹಲವು ರೂಪದಲ್ಲಿ ಕಲಾಸೇವೆಗೈಯುತ್ತಿರುವ ಸರಳ ಸಜ್ಜನ ಪಾರದರ್ಶಕ ವ್ಯಕ್ತಿತ್ವದ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದಲ್ಲಿ ಆರು ಮೇಳ, ಕಲಾವಿದರು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇವೆ.IMG-20171128-WA0218

************
ಟೀಲು ಮೇಳದ ನಮ್ಮ ಯಜಮಾನರ ಸಹೃದಯತೆಯ ಬಗ್ಗೆ ನಮಗೆ ತುಂಬು ಅಭಿಮಾನವಿದೆ.ಕಾರಣಗಳು ಹಲವಾರು ಇವೆ.

ನಿಷ್ಠಾವಂತ ಕಲಾವಿದರ ಸಣ್ಣ-ಪುಟ್ಟ ಕಷ್ಟಗಳಿಗೂ ಸ್ಪಂದಿಸುವಲ್ಲಿ ಕಿಂಚಿತ್ತೂ ಅಲಕ್ಷ್ಯ ಭಾವವನ್ನು ತಳೆದವರಲ್ಲ.

ಈ ಸಲದ ತಿರುಗಾಟದ ಆರಂಭದಲ್ಲೆ ನಮ್ಮ ಒಂದನೇ ಮೇಳದ ಪ್ರಧಾನ ಸ್ತ್ರೀ ವೇಷಧಾರಿಗೆ ಅನಾರೋಗ್ಯ ಕಾಡಿದಾಗ ವಿಷಯ ತಿಳಿದು ಸಣ್ಣ ಪುಟ್ಟ ಪಾತ್ರವನ್ನು ಮಾಡಲಿ,ಸಂಪೂರ್ಣ ಗುಣಮುಖನಾಗುವ ತನಕ ಅವರ ಬಗ್ಗೆ ಅತ್ಯಂತ ಕಾಳಜಿಯನ್ನು ತೋರಿಸಬೇಕೆಂದು ನಮಗೆ ಹೇಳಿದ್ದಾರೆ.ಮೇಳದ ಕಿರಿಯ ಕಲಾವಿದರ ಬಗ್ಗೆಯೂ ಈ ಹಿಂದೆ ಇದೇ ತೆರ ನಡೆಸಿಕೊಂಡು ಉದಾಹರಣೆಗಳಿವೆ.

ಕಳೆದ ವರ್ಷ ನಮ್ಮ ಮೇಳದ ಬಡ ಕಲಾವಿದರು ಗೃಹ ನಿರ್ಮಾಣಕ್ಕೆ ತೊಡಗಿದಾಗ ಅವರಿಗೆ ಬ್ಯಾಂಕು ಸಾಲ ಕೊಡಿಸುವಲ್ಲಿ ಮುತುವರ್ಜಿಯನ್ನು ತೋರಿಸಿದ್ದಾರೆ.

ಪ್ರತಿಭಾ ಸಂಪನ್ನ ಕಲಾವಿದರನ್ನಷ್ಟೇ ಅಲ್ಲ,ಸಾಮಾನ್ಯ ಕಲಾವಿದರ ಬಗ್ಗೆಯೂ ಅವರ ನಿಷ್ಠೆಯನ್ನು ಪರಿಗಣಿಸಿ ಆಸ್ಥೆಯನ್ನು ಹೊಂದಿದವರಾಗಿದ್ದಾರೆ.

ಈಗಿನ ಯಜಮಾನರ ಆಡಳಿತಾವಧಿಯಲ್ಲೇ ವೇತನ ಹೆಚ್ಚಳ,ಮಳೆಗಾಲದ ವೇತನ,ಔಷಧಿ,ವಾಹನ ಸೌಕರ್ಯಗಳು ಒದಗಿ ಬಂದಿರುವುದು.ಅದಕ್ಕಿಂತ ಹಿಂದೆ ಎಷ್ಟೇ ಪ್ರಸಿದ್ಧ ಕಲಾವಿದನಾದರೂ ಆರು ತಿಂಗಳು ತನ್ನ ಹೊಟ್ಟೆ ತುಂಬಿಸುತ್ತಿದ್ದುದಲ್ಲದೆ,ಸಂಬಳವೆಂದು ಮನೆಗೆ ಕೊಂಡುಹೋಗಲು ಸಾಧ್ಯವಾಗುತ್ತಿರಲಿಲ್ಲ.

ಯಕ್ಷ ಬೋಧಿನಿ ಟ್ರಸ್ಟ್ ನ ಸಹಯೋಗದಿಂದ ಸಕಲ ಸೌಕರ್ಯಗಳನ್ನು ನೀಡಿದ್ದಾರೆ.ಈ

ಹಿಂದೆಯೂ ರಂಗಸ್ಥಳದಲ್ಲೇ ಪ್ರಾಣ ಬಿಟ್ಟವರಿಗೆ ಹೇಳುವಂತಹ ಪರಿಹಾರವು ದೊರಕಿರಲಿಲ್ಲ.ಆದರೆ ಈಗ ಅಂತಹ ಪರಿಸ್ಥಿತಿ ಒದಗಿದಾಗ ಗೌರವ ಪೂರ್ವಕ ಸಹಾಯಧನವನ್ನು ನೀಡಲಾಗಿದೆ.

ಇಷ್ಟೆಲ್ಲಾ ಸೌಕರ್ಯಗಳನ್ನು ಪಡೆದೂ, ಆಡಳಿತ ಮಂಡಳಿಗೆ ಸಡ್ಡು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳುವ ಹಕ್ಕು ಇಲ್ಲವೆಂದರೆ ಹೇಗೆ.?

ಸರ್ಕಾರಿ ನೌಕರರಿಗೂ ಒಂದು ನಿಯಮವೆಂಬುದು ಇದೆ.ಅದನ್ನು ಮೀರಿದಾಗ ಹಿರಿಯ ಅಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ..ಇಲ್ಲಿಯೂ ನಡೆದುದಷ್ಟೇ.

..ಬೊಟ್ಟಿಕೆರೆ ಪುರುಷೋತ್ತಮ ಪೂಂಜ.

ಕಟೀಲು ಮೇಳದ ಹಿರಿಯ ಭಾಗವತರು.
*******************
ಆತ್ಮೀಯ ಕಲಾ ಆರಾಧಕ ಬಂಧುಗಳೇ,
ಕಟೀಲು ಮೇಳದ ಕಲಾ ಆರಾಧಕನಾಗಿ ಬದುಕು ಕಂಡಿರುವ ನನಗೆ ಕಟೀಲು ಮೇಳದ ಯಜಮಾನರು ಹಾಗೂ ಧರ್ಮಬೋಧಿನಿ ಟಸ್ಟ್ ನ ಬಗ್ಗೆ ಸತ್ಯಾಸತ್ಯತೆ ಅರಿಯದೆ ಏಕಮುಖವಾಗಿ ವಿವಿಧ ಮಾಧ್ಯಮಗಳಲ್ಲಿ ಬಂದಿರುವ ಪ್ರತಿಭಟನಾ ಬರಹಗಳು ಹಿತವಾಗದೆ ಈ ಲೇಖನ ಬರೆಯುತ್ತಿದ್ದೇನೆ.
ಯಾರೇ ಆಗಲಿ ಒಂದು ಕಲೆ ಕಲಾವಿದ ಟ್ರಸ್ಟ್ ಕುರಿತಾಗಿ ಬರೆಯುವಾಗ ವಿಷಯಗಳನ್ನು ಆಳವಾಗಿ ವಿಮರ್ಶಿಸದೆ ಏಕಮುಖ ಅಭಿಪ್ರಾಯವನ್ನು ಪಡೆದು ಬರೆಯುವುದು ತಪ್ಪು. ಕಟೀಲು ಮೇಳದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಷ್ಟೆಲ್ಲಾ ಬರೆಯುವ ನೀವು ಕಲಾವಿದರ ಸರಿ ತಪ್ಪುಗಳ ಬಗ್ಗೆ ಮೇಳದ ಯಜಮಾನರಲ್ಲಿ ಯಾವತ್ತಾದರೂ ಯಾಕೆ ಹೀಗಾಯ್ತು ಎಂಬ ಕುರಿತಾಗಿ ಒಂದು ಮಾತು ಕೇಳಿದ್ದೀರಾ? ಪ್ರಶ್ನಿಸಿದ್ದೀರಾ? ವಿಮರ್ಶಿಸಿದ್ದೀರಾ?
ಕಟೀಲಿನ ಆರು ಮೇಳಗಳಲ್ಲಿ ಸುಮಾರು ಮುನ್ನೂರಕ್ಕೂ ಮಿಕ್ಕಿ ಕಲಾವಿದರು, ಕೆಲಸದವರು ಇದ್ದು ಇಷ್ಟು ಮಂದಿಯ ಶ್ರೇಯೋಭಿವೃದ್ಧಿಗೆ ದುಡಿದ ಯಜಮಾನ ದೇವಿಪ್ರಸಾದ ಶೆಟ್ಟರು ಅಂತಹ ಪಾಷಾಣ ಹೃದಯವಂತರಾಗಬೇಕಿದ್ದರೆ ಅವರಿಗಾದ ನೋವು ಎಂತಹದ್ದು?
ಹಲವು ರೀತಿಯ ಸಮಸ್ಯೆಗಳಿಗೆ ಮೊದಲಿನಿಂದಲೂ ಅಂತಹ ಕಲಾವಿದರು ಕಾರಣರಾಗಿದ್ದರಿಂದಲೇ ಆ ಕಲಾವಿದರ ಮೇಲೆ ಅಂತಹ ಕಠಿಣ ನಿರ್ಧಾರ ಕೈಗೊಂಡಿರಬಹುದೇ ಎಂದು ವಿಮರ್ಶಿಸಿದ್ದೀರಾ?
ಒಂದು ಮಾತು ತಿಳಿದುಕೊಳ್ಳಿ. ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಮೇಳದ
ಯಜಮಾನರಾದ ನಂತರ ಪ್ರತಿಯೊಬ್ಬ ಕಲಾವಿದರ ವೇತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅಷ್ಟಕ್ಕೂ ಸಮಾಜದ ಉದಾರ ದಾನಿಗಳು, ಮೇಳದ ಭಕ್ತಾದಿಗಳಿಂದ ಕೂಡಿದ ಧರ್ಮಬೋಧಿನಿ ಟ್ರಸ್ಟ್ ಕಲಾವಿದರ ಬದುಕಿನ ಆಶಾಕಿರಣವಾಗಿದೆ ಎಂಬುದು ಮೇಳದ ಎಲ್ಲ ಕಲಾವಿದರಿಗೆ ತಿಳಿದ ವಿಷಯ, ಅನುಭವಕ್ಕೆ ಬಂಬಂದಿರುವಂತದ್ದು. ಕಲಾವಿದರು ಮಳೆಗಾಲದಲ್ಲಿ ಜೀವನ ಸಾಗಿಸಲು ಒದ್ದಾಡುವುದನ್ನು ನಾವು ಕಂಡಿದ್ದೇವೆ. ಆದರೆ ಕಟೀಲು ಮೇಳದಲ್ಲು ಕಲಾವಿದರಿಗೆ ಮಳೆಗಾಲದಲ್ಲಿ ಬೋನಸ್ ಕೊಡಲಾಗುತ್ತಿದೆ. ಹಾಗೆಯೇ ಕಲಾವಿದರ ಆರೋಗ್ಯದಲ್ಲಿ ತೊಂದರೆಯಾದರೆ ಔಷಧಿಯ ವೆಚ್ಚವನ್ನು ಮೇಳದ ವತಿಯಿಂದಲೇ ಭರಿಸಲಾಗುತ್ತಿದೆ. ಮಾತ್ರವಲ್ಲ
ಕಲಾವಿದನೊಬ್ಬ ಅಕಾಲಿಕ ಸಾವಿಗೀಡಾದರೆ ಯಜಮಾನರು ಹಾಗೂ ಸಮಾಜದಿಂದಲೂ ಸಾಧ್ಯವಾದಷ್ಟು ಸಹಾಯವನ್ನು ಟ್ರಸ್ಟ್ ಮುಖಾಂತರ ಒದಗಿಸಲಾಗುತ್ತಿದೆ. ಇಷ್ಟೆಲ್ಲ ಬಗೆಯಲ್ಲಿ ಮೇಳವು ಸರ್ವರೀತಿಯಿಂದಲೂ ಕಲಾವಿದರಿಗೆ ಸ್ಪಂದಿಸುತ್ತಿದ್ದರೂ ಸುಖಾಸುಮ್ಮನೆ ಸಲ್ಲದ ಆರೋಪ ಯಾಕೆ ಮಾಡಬೇಕು?
ಗಮನಿಸಬೇಕಾದ ಅಂಶವೆಂದರೆ ಇಷ್ಟೆಲ್ಲ ಅನುಕೂಲವನ್ನು ಮೇಳವೊಂದು ಮುಜರಾಯಿ ಇಲಾಖೆಗೆ ಒಳಪಟ್ಟರೆ ಕೊಡಲು ಸಾಧ್ಯವೇ?
ಅತಂತ್ರವಾಗುತ್ತದೆಯೆಂದು ಅದೆಷ್ಟೊ ಸರಕಾರಿ ಸಂಸ್ಥೆಗಳು ಖಾಸಗೀಕರಣಗೊಂಡದ್ದನ್ನು ನಾವು ಕಂಡಿಲ್ಲವೇ?
ಮುಜರಾಯಿ ಇಲಾಖೆಗೆ ಒಳಪಟ್ಟ ಅದೆಷ್ಟೊ ದೇವಸ್ಥಾನಗಳ ಸ್ಥಿತಿಗತಿ ನಾವು ಕಾಣುವುದಿಲ್ಲವೇ?
ಕಲಾವಿದರ ದುಸ್ಥಿತಿಯ ಬಗ್ಗೆ ನಮಗೂ ನೋವಿದೆ. ಜೊತೆಗೆ ಮೇಳದ ಪ್ರಧಾನ ಭಾಗವತ ಪಟ್ಲರ ಪದ್ಯಕ್ಕೆ ನಮಗೂ ಒಂದು ವರ್ಷದ ತಿರುಗಾಟ ಮಾಡಬೇಕು ಎಂಬ ಆಶೆ ಇದೆ. ಕಟೀಲು ಆರು ಮೇಳದ ಕಲಾವಿದರು ಅವರ ಜೊತೆಗಿನ ತಿರುಗಾಟವನ್ನು ಹೃತ್ಪೂರ್ವಕ ಅಪೇಕ್ಷಿಸುತ್ತಾರೆ. ಅವರು ಒಂದೇ ಮೇಳಕ್ಕೆ ಸೀಮಿತವಾಗಬೇಕು ಎಂಬ ಕಲ್ಪನೆ ಸಾಧುವಲ್ಲ. ಪರಿವರ್ತನೆ ಜಗದ ನಿಯಮ, ಮೇಳಕ್ಕೂ ಅದು ಅನ್ವಯಿಸಲಿ.
ಮೇಳ ಬಿಟ್ಟ ಕಲಾವಿದರು ಕೊಟ್ಟ ಅವಧಿಯೊಳಗೆ ಬರದಿರುವುದು ಆ ಜಾಗಕ್ಕೆ ಬೇರೆ ಕಲಾವಿದರನ್ನು ನೇಮಿಸಿದ್ದರಿಂದ ಈ ಸಮಸ್ಯೆ ಒದಗಿದೆ. ಕಲಾಭಿಮಾನಿಗಳು ಸ್ವಲ್ಪ ಸಹನೆಯಿಂದಿರಿ. ಮುಂದಿನ ವರ್ಷದ ತಿರುಗಾಟದಲ್ಲಾದರೂ ಶ್ರೀ ದೇವಿಯ ಸೇವೆ ಮಾಡಲು ಅವರಿಗೆ ಅವಕಾಶ ಒದಗಿಸುವ ಪ್ರಯತ್ನಕ್ಕೆ ನಾವು ಸಮಾಧಾನಚಿತ್ತರಾಗಿ ಪ್ರಯತ್ನಿಸೋಣ.
ಹಾಗೆಯೇ ಗೋವಿಂದ ನಾಯ್ಕರ ಬಗ್ಗೆ ಒಂದು ಮಾತು: ಇವರ ಬಗ್ಗೆ ಬರೆದವರು ಗೋವಿಂದನಾಯ್ಕರು ಯಾವ ಮೇಳದಲ್ಲಿ ಎಷ್ಟು ವರ್ಷಗಳಿಂದ ಇದ್ದಾರೆ, ಅವರ ನಡತೆಯ ಬಗ್ಗೆ ಮೇಳದ ಇತರ ಕಲಾವಿದರಲ್ಲಿ ಚರ್ಚಿಸಿದ್ದಾರೆಯೇ? ಲೇಖನ ಬರೆಯುವ ಆತುರದಲ್ಲಿ ತಮ್ಮ ಮೂಗಿನ‌ ನೇರಕ್ಕೆ ಬರೆಯುವುದು ಶೋಭೆ ತರುವುದಿಲ್ಲ‌. ವಿಪರೀತ ಮದ್ಯಸೇವನೆ ಮಾಡುವ ಚಟ ಅಂಟಿಸಿಕೊಂಡಿರುವ ಅವರು ಕಳೆದ ವರ್ಷ ಸಾಯುವ ಹಂತದಲ್ಲಿದ್ದಾಗ ಅವರನ್ನು ಬದುಕಿಸಿದ್ದು ಎರಡನೇ ಮೇಳದ ಕಲಾವಿದರಾದ ನಾವು ಹಾಗೂ ಸೇವಕರು. ದಿನಪೂರ್ತಿ ಮದ್ಯ ಸೇಸಿಸಿಕೊಂಡು ಮೈಯಲ್ಲಿ ಬಟ್ಟೆಯ ಬಗ್ಗೆ ಗೊಡವೆ ಇಲ್ಲದೆ ಇನ್ನೊಂದು ಮನೆಯಲ್ಲಿ ಬಿದ್ದುಕೊಂಡು ಮೇಳದ ಮರ್ಯಾದೆ ತೆಗೆಯುವ ಅವರನ್ನು ಮೇಳದಿಂದ ತೆಗೆದದ್ದು ತಪ್ಪೇ?
ಈ ವರ್ಷದ ತಿರುಗಾಟದಲ್ಲಿ ರಾತ್ರಿ ಬರುವಾಗಲೇ ಟೈಟ್ ಆಗಿದ್ದರು. ಬೆಳಗ್ಗೆ ಎದ್ದರೆ ನಿಲ್ಲಲಾಗದ ಅವರನ್ನು ಹೇಗೆ ಮೇಳಕ್ಕೆ ಸೇರಿಸಲಿ ದಯವಿಟ್ಟು ತಿಳಿಸಿ.
ಮೇಳದ ಕಲಾವಿದರು, ಅತಿ ಮುಖ್ಯವಾಗಿ ಯಜಮಾನರು ಹಾಗೂ ಟ್ರಸ್ಟ್ ಅಭಿಪ್ರಾಯ ತಿಳಿದುಕೊಳ್ಳದೆ ನಿಮ್ಮ ವೈಯಕ್ತಿಕ ಅಭಿಪ್ರಾಯ ಯಾವತ್ತೂ ಹೇರಬೇಡಿ. ಕಲಾವಿದರ ಪಾಲಿಗೆ ಕಲ್ಪವೃಕ್ಷವಾದ ಯಜಮಾನರನ್ನು ಆಶಾಕಿರಣವಾಗಿರುವ ಧರ್ಮಬೋಧಿನಿ ಟ್ರಸ್ಟ್ ನ್ನು ಟೀಕಿಸುವುದು ಆರೂ ಮೇಳದ ಕಲಾವಿದರಾದ ನಮಗೆ ಹಿತವಾಗುವುದಿಲ್ಲ. ಇದು ಕಲಾಮಾತೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೆಚ್ಚುವ ಕೆಲಸವಲ್ಲ.
:ಶುಭಂ ಮಸ್ತು;
ಇತೀ,.
ದಿನೇಶ್ ಶೆಟ್ಟಿ ಕಾವಳಕಟ್ಟೆ
ಕಲಾವಿದರು
ಕಟೀಲು ಎರಡನೇ ಮೇಳ
*********************
ಸಹೃದಯರೇ ಇತ್ತೀಚೆಗೆ ಕಟೀಲು ಮೇಳ – ಇದರ ಆಡಳಿತ, ಮೇಳದಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ – ಕ್ಷೇಮ ನಿಧಿ ಮತ್ತು ಆಸಕ್ತ ಬಂಧುಗಳ ಕುರಿತು ಪತ್ರಿಕೆಗಳಲ್ಲಿ, ಜಾಲ ತಾಣಗಳಲ್ಲಿ ಹೇಳಿಕೆ ಅಭಿಪ್ರಾಯಗಳು ಹರಿದಾಡುತ್ತಿವೆ. ಇದರಿಂದ ಪ್ರಕೃತ ಮೇಳದ ಅಂಗವಾಗಿರುವ ಕಲಾವಿದರು ಕಾರ್ಮಿಕರಿಗೆ ಬಹಳ ನೋವಾಗುತ್ತದೆ. ದೂರದಿಂದ/ಹೊರಗಿನಿಂದ ನೋಡಿ ಕೇಳಿ ಹಾಗೆ ಹೀಗೆಂದು ಬರೆಯುವುದು ಹೇಳೂವುದು ಸುಲಭ. ಆದರೆ ಅದರ ಒಳಗನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೆ ಅದು ತಪ್ಪು ಚಿತ್ರಣದ ಪ್ರಸಾರವಾಗುತ್ತದೆ. ಹಾಗಾಗಿ ಮೇಳದಿಂದ ಉಪಕೃತರಾ/ಆಗುತ್ತಿರುವ ಮೇಳದ ಸದಸ್ಯರಾಗಿ ನಮ್ಮ ಅನಿಸಿಕೆಗಳನ್ನು ಪ್ರಕಟಪಡಿಸುವುದು ನನ್ನ ಧರ್ಮವಾಗಿದೆ.

೧. ಸುಮಾರು ೨೦೦೦ನೇ ಇಸವಿಯ ಆರಂಭದ ವರ್ಷಗಳ ವರೆಗೆ ನಾವು ಮೇಳ ಹೋಗುವಾಗ ಲಾರಿಯೇ ವಾಹನವಾಗಿತ್ತು. ಸಾಮಾನು ಸರಂಜಾಮುಗಳ ಎಡೆಯಲ್ಲಿ – ಹಿಂದೆ-ಮುಂದೆ ಪ್ರಯಾಸದಿಂದ ಪ್ರಯಾಣಿಸುವ ಅನಿವಾರ‍್ಯತೆ ನಮಗಾಗಿತ್ತು. ಶೀತಗಾಳಿ-ಮಳೆ-ಅನಾರೋಗ್ಯಗಳ ಗಣನೆ ಇಲ್ಲದೆ ಪ್ರಯಾಣಿಸುತ್ತಿದ್ದೆವು. ಕೊನೆ ಕೊನೆಯಲ್ಲಿ ಮಳೆ ಬಂದರೆ ಟಾರ್ಪಲ್ ಹೊದ್ದು ಉಸಿರು ಗಟ್ಟಿಸಿಕೊಂಡು ಹೋಗುತ್ತಿದ್ದೆವು. ಆದರೆ ಈಗಿನ ಯಜಮಾನರು ಮತ್ತು ಟ್ರಸ್ಟ್ ನವರು ಪ್ರಯತ್ನ ಪಟ್ಟು ಕೋಟಿ ಅಧಿಕ ಖರ್ಚು ಮಾಡಿ ಬಸ್ಸು ಮತ್ತು ಲಾರಿ ವ್ಯವಸ್ಥೆ ಮಾಡಿರುತ್ತಾರೆ. ಅವರ ಪರಿಶ್ರಮದಿಂದಾಗಿ ನಾವು ಈಗ ಸುಖಕರವಾಗಿ-ಸುಭದ್ರವಾಗಿ-ಗೌರವಯುತವಾಗಿ ಪ್ರಯಾಣಿಸುವಂತಾಗಿದೆ. ಇದಕ್ಕಾಗಿ ನಾವು ಅವರಿಗೆ ಅಭಿನಂದನೆ ಸಲ್ಲಿಸಬೇಕು. ಅದೂ ಸಹ ಅತಿ ಕಡಿಮೆ ಖರ್ಚಿನಿಂದಾಗುವಂತೆ ಕಡಿಮೆ ಹಣ ಪಡೆದು ಸಏವಕರ್ತರಿಗೂ ಸಹಕಾರಿಯಾಗಿ.

೨. ಅಷ್ಟೇ ಅಲ್ಲದೆ ೬ ಮೇಳಗಳ ದೇವರ ಬಂಗಾರದ ಕಿರೀಟಗಳನ್ನು ಇತರ ವಸ್ತು ಒಡವೆಗಳನ್ನು ದಾನಿಗಳನ್ನು ಸಂಗ್ರಹಿಸಿ ಅವರ ಸಹಕಾರದೊಂದಿಗೆ ಸ್ವಯಂ ಹಣ ಹಾಕಿ ಯಜಮಾನರು ಮತ್ತು ಟ್ರಸ್ಟ್ ಮಾಡಿರುತ್ತದೆ. ಇದೊಂದು ಅತ್ಯಪೂರ್ವ ಐತಿಹಾಸಿಕ ಕಾರ‍್ಯ. ಈಗ ದೇವತಾ ಪೀಠದ ಕಡೆಗೆ ದೃಷ್ಟಿ ಹರಿಸಿದರೆ ಭಕ್ತಿ-ಶೃದ್ಧೆಗಳೊಂದಿಗೆ ರಮ್ಯವಾಗಿಯೂ ಗೌರವಯುತವಾಗಿಯೂ ಕಾಣುತ್ತದೆ. ಮೇಳ ಹಾಗೂ ಕ್ಷೇತ್ರದ ಗೌರವಕ್ಕೆ ಕಳಸವಿಟ್ಟಂತಹ ಕೆಲಸ ಎಂದು ನಮ್ಮೆಲ್ಲರ ಭಾವನೆ. ಇದು ಅವರ ದೈವಭಕ್ತಿಯು ದ್ಯೋತಕ.

೩. ಮೇಳಕ್ಕೆ ಸ್ವಂತ ಧ್ವನಿ ಬೆಳಕಿನ ವ್ಯವಸ್ಥೆ ತುಂಬಾ ಅನುಕೂಲಕರ. ಇದರಿಂದಾಗಿ ಅಡಚಣೆ-ಅಪಾಯಗಳಿಲ್ಲದೆ ತಂಟೆ ತಗಾದೆಗಳಿಲ್ಲದೆ ಮೇಳದಾಟ ಸುಸೂತ್ರವಾಗಿ ನಡೆಯುತ್ತದೆ. ಸೇವಾಕರ್ತರಿಗೂ ಲಾಭದಾಯಕ.

೪. ಮೇಳದ ಸದಸ್ಯರಿಗೆ ಅನಾರೋಗ್ಯವಾದರೆ ಕೂಡಲೇ ಚಿಕಿತ್ಸೆ ವ್ಯವಸ್ಥೆ ಮಾಡುವುದರೊಂದಿಗೆ ಎಲ್ಲಾ ಖರ್ಚುಗಳನ್ನು ಯಜಮಾನರು ಮತ್ತು ಕ್ಷೇಮನಿಧಿಯಿಂದ ಒದಗಿಸುವ ಸಕಾಲಿಕ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ. ತಿರುಗಾಟದ ಮಧ್ಯದಲ್ಲಿ ನಾವು ಖರ್ಚು ಮಾಡಿದ ಔಷಧದ ಮೊತ್ತ ಚಿಕಿತ್ಸಾ ಖರ್ಚುನ್ನು ಯಜಮಾನರು ಮತ್ತು ಕ್ಷೇಮನಿಧಿ ಕೂಡಲೇ ಕೊಡುತ್ತಿರುವುದು ನಮಗೆ ಆರ್ಥಿಕ ಹೊಡೆತದಿಂದ ರಕ್ಷಣೆಕೊಡುತ್ತಿದೆ. ಇದು ಟ್ರಸ್ಟ್ ಯಜಮಾನರ ಮಾನವೀಯತೆಯ ದ್ಯೋತಕವಲ್ಲವೇ.

೫. ಮೇಳ ಹೋದಲ್ಲಿ ಬಿಡಾರದ ವ್ಯವಸ್ಥೆ ಸರಿಯಾಗಿರದಿದ್ದರೆ ತಿಳಿಸಿದ ಕೂಡಲೇ ಯಜಮಾನರು ಸ್ಪಂದಿಸಿ ತಕ್ಕ ವ್ಯವಸ್ಥೆ ಆಗಿರುವುದು ಖಾತ್ರಿಯಾಗುವ ವರೆಗೂ ಕ್ರಿಯಾಶೀಲರಾಗಿರುತ್ತಾರೆ. ಇದು ಅವರಿಗೆ ನಮ್ಮ ಕುರಿತಾದ ಕಾಳಜಿ-ಪ್ರೀತಿ ಅಲ್ಲವೇ?

೬. ಇನ್ನೂ ಮಳೆಗಾಲದ ರಜಾ ಸಂಬಳವಾಗಿ ಹಣ ಕೊಡುತ್ತಾರೆ. ಇಂತಹ ಸೌಕರ್ಯ ಬೇರೆಲ್ಲೂ ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಕೈ ಬರಿದು ಆದವರಿಗೆ ಇದು ದೊಡ್ಡ ಉಪಕಾರವಾಗುತ್ತದೆ. ೩೫೦-೩೬೦ ಮಂದಿಗೆ ಕೊಡುವುದಕ್ಕೆ ಲಕ್ಷಗಟ್ಟಲೆ ಹಣ ಹೊಂದಿಸುವುದು ಸುಲಭದ ಮಾತಲ್ಲ. ಆದರೆ ತನ್ನ ಕಲಾವಿದರು ಎಂದು ಮಮತೆಯಿಂದ ಪರಿಶ್ರಮವನ್ನು ತೆಗೆದುಕೊಂಡು ಯಜಮಾನರು ಮತ್ತು ಟ್ರಸ್ಟ್ ಉದಾರತೆಯನ್ನು ತೋರುವುದು ವ್ಯವಹಾರ ಪ್ರಪಂಚ ಜ್ಞಾನ ಇರುವವರಿಗೆ ಮಾತ್ರ ಅರ್ಥವಾದೀತು.

೭. ಕ್ಷೇಮ ನಿಧಿಯ ಆರಂಭದ ವರ್ಷದಲ್ಲಿ ಎಲ್ಲ ಕಲಾವಿದರಿಗೆ, ಕಾರ್ಮಿಕರಿಗೆ ಅವರವರ ಸೇವಾ ಸ್ವರೂಪಕ್ಕೆ ಅನುಸಾರವಾಗಿ ಧನ ಸಹಾಯ ನೀಡಲಾಗಿದೆ. ಹಾಗೆ ಪಡೆದ ಹಣದಿಂದ ಹಲವರು ಬಾವಿ ತೋಡಿಸಿದ್ದಾರೆ, ಮನೆ ದುರಸ್ತಿ, ಸೋಗೆ ಮುಳಿ ಛಾವಣಿಗಳನ್ನು ಹೆಂಚಿಗೆ ಬದಲಾಯಿಸಿರುವುದು ಸತ್ಯದ ವಿಚಾರ. ಈಗ ಅಂತವರು ಮತ್ತು ಅವರ ಮನೆಯವರು ಮೇಳದ ಜಯಮಾನರನ್ನು ನಿತ್ಯ ಜ್ಞಾಪಿಸಿಕೊಳ್ಳುತ್ತಾರೆ.
ಪ್ರಕೃತ ಕ್ಷೇಮ ನಿಧಿಯಿಂದ ಕಲಾವಿದರ/ ಕಾರ್ಮಿಕ ಜೀವ ವಿಮೆ/ಅಪಘಾತ ವಿಮೆ, ಮೆಡಿಕ್ಲೈಮ್ (ಆರೋಗ್ಯ ವಿಮೆ) ಮಾಡಿಸಿರುತ್ತಾರೆ. ಅದಕ್ಕಾಗಿ ಕೆಲವು ಲಕ್ಷಗಳಷ್ಟು ಹಣ ವಿನಿಯೋಗಿಸಿರುತ್ತಾರೆ. ಇದರಿಂದಾಗಿ ಮೇಳದ ಸದಸ್ಯರಿಗೆ ಜೀವನದಲ್ಲಿ ಭದ್ರತೆಯ ಭರವಸೆ ಇದೆ. ಇಂತಹ ಶ್ಲಾಘನೀಯ ಕಾರ್ಯವನ್ನು ಆಡಿಕೊಳ್ಳುವುದು ಎಷ್ಟು ಸರಿಯಾದೀತು.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಹಲವಿದೆ. ಈಗ ಇದೆಲ್ಲ ಎಲ್ಲರಿಗೂ ಗೊತ್ತಿದೆಯೇ? ಇದನ್ನೆಲ್ಲ ಯೋಚಿಸಿದರೆ ಇಂತಹ ಯಜಮಾನರು ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಯಜಮಾನರಾಗಿ ಅವರು ನಮ್ಮನ್ನು ನಡೆಸಿಕೊಳ್ಳುತ್ತಿಲ್ಲ. ನಮ್ಮನ್ನು ತನ್ನ ಕುಟುಂಬ ಸದಸ್ಯರಂತೆ ಪರಿಗಣಿಸುವ ಅವರ ಗುಣದೊಡ್ಡದು. ಅನ್ಯೋನ್ಯ ಭಾವದಿಂದ ಪ್ರೀತಿ, ಗೌರವ ಕೊಡುವ ಮನೆಯೊಂದರ ಹಿರಿಯನ ಸ್ಥಾನವನ್ನು ಅವರು ತುಂಬಿದ್ದಾರೆ. ಅವರನ್ನು ಯಜಮಾನ ಎನ್ನುವ ದೃಷ್ಟಿಯಲ್ಲಿ ಅರಿವಿರುವವರು ಗುರುತಿಸಿದ್ದಲ್ಲ. ನಮ್ಮ ಪೋಷಕರು (ಕೇರ್ ಟೇಕರ್) ಎಂದು ನಾವು ತಿಳಿದಿದ್ದೇವೆ. ಅವರ ಮೃದು ಮಾತು ಸಹೃದಯತೆ-ನಮ್ಮೊಂದಿಗೆ ಸ್ಪಂದಿಸುವ ಔದಾರ್ಯ ವಿಶಾಲವಾದುದು. ಈಗ ಯಾರಾದರೂ ಹಣದ ಅನಿವಾರ್ಯ ಅಗತ್ಯತೆಯಲ್ಲಿ ಇದ್ದರೆ ಅವರಲ್ಲಿ ಸರಿಯಾಗಿ ತಿಳಿಸಿದರಾಯಿತು. ಅದು ಒಮ್ಮೆಗೆ ದೊಡ್ಡ ಮೊತ್ತವಾಗಿದ್ದರೂ ಕೊಟ್ಟ ಅವನ ಕಷ್ಟ ಕಾಲಕ್ಕೆ ಒದಗಿನಿಲ್ಲುವ ಮೃದ ಹೃದಯತೆ ಅಪರೂಪದ ಗುಣ. ಸದಾಕಾಲ ಕಲಾವಿದರ-ಕಾರ್ಮಿಕರ ಹಿತಚಿಂತಕರಾಗಿರುತ್ತಾ ಇರುವ ಅವರ ಕುರಿತಾಗಿ ಯಾರಾದರೂ ಋಣಾತ್ಮಕವಾಗಿ ಬರೆವಾದ ಬಹಳ ನೋವಾಗುತ್ತದೆ ನಮಗೆ.
ಇನ್ನೂ ಪ್ರಚಲಿತ ಪ್ರಸ್ತಾಪದಲ್ಲಿರುವಂತೆ ಮುಜರಾಯಿ ಇಲಾಖೆ ಮೇಳ ನಡೆಸಬೇಕೆಂಬ ಬಯಕೆ ಆಘಾತಕರ ವಿಚಾರ. ನಮಗೆ ಭಯಾನಕವೂ ಹೌದು. ಸರಕಾರ ಕೇವಲ ಸಂಪಾದನೆ (ಆದಾಯ)ವನ್ನು ನೋಡುತ್ತದೆ. ಪಂಚಾಯತ್‌ನಿಂದ ವಿಧಾನಸೌಧದ ವರೆಗೂ ಆಡಳಿತ ಶಾಹಿ ನಮ್ಮನ್ನು ಹಿಂಡಿ ಹಿಪ್ಪೆ ಮಾಡುವುದು ಸತ್ಯ. ಏನೇ ವ್ಯವಸ್ಥೆ-ಬದಲಾವಣೆ-ಆಚರಣೆ ಮೇಳಕ್ಕೆ ಆಗಬೇಕೆಂದಾದರೆ ಅನುಮತಿ-ಅನುದಾನ-ಯೋಜನೆ-ಬಜೆಟ್ ಎಂದೆಲ್ಲ ಹೇಳಿ ಕೊನೆಗೆ ನೋ ಪ್ರಾವಿಜನ್ ಎಂದು ಬರೆದು ಮಣ್ಣು ಗೂಡಿಸುತ್ತಾರೆ. ಎಲ್ಲಿಯಾದರೂ ಮುಜರಾಯಿ ಇಲಾಖೆಗೆ ಮೇಳ ಕೈ ಬದಲಾದರೆ ಕಲಾವಿದ-ಸೇವಾಕರ್ತ-ಕಲೆ-ಕಲಾಭಿಮಾನಿ ಎಲ್ಲರೂ ಪರಿತಪಿಸಬೇಕಾದೀತು. ಯಕ್ಷಗಾನ-ನಮ್ಮೂರ ಸಂಪ್ರದಾಯ ತಿಳಿಯದ ಉತ್ತರ ಕರ್ನಾಟಕದಿಂದ ಬಂದ ಅಧಿಕಾರಿ ಹೇಳುವವ ಕೇಳುವವನಾದರೆ ಮೇಳಕ್ಕೆ ದೇವರೇ ಗತಿ. ಆದ್ದರಿಂದ ಇಂತಹ ವಿಚಾರಗಳನ್ನು ಬಿಟ್ಟು ಈಗಿನ ವ್ಯವಸ್ಥೆಯನ್ನೆ ಪ್ರೋತ್ಸಾಹಿಸುತ್ತಾ- ಸಹಕರಿಸುತ್ತಾ ಮುಂದುವರಿಯುವುದು ಅತೀ ಕ್ಷೇಮವೆಂದು ನನ್ನ ಅನಿಸಿಕೆ.
* – ದಿನಕರ ಗೋಖಲೆ
ಕಟೀಲು ಮೇಳದ
ಕಲಾವಿದರು

**************

ಪೌರಾಣಿಕ‌ ಹಿನ್ನಲೆಯುಳ್ಳ ಕಟೀಲು ಕ್ಷೇತ್ರದಿಂದ ಯಕ್ಷಗಾನ ಮೇಳ ಒಂದರಿಂದ ಆರು ಆಗಿದ್ದು ಅಮ್ಮನವರು ತನ್ನ ಶಕ್ತಿ ಏನು‌ ಎಂಬುದನ್ನು ಭಜಕರಿಗೆ ಮನವರಿಕೆ ಮಾಡಿಕೊಡುತ್ತಲೇ ಬಂದಿದ್ದಾಳೆ. ಈ ವರ್ಷವಂತೂ ವ್ಯವಸ್ಥಿತವಾಗಿದೆ. ಆರು ಮೇಳಗಳು ಎಲ್ಲ ವಿಷಯಗಳಲ್ಲಿ ಸಮನಾಗಿದ್ದು ಯಾವುದೇ ಬೇಧ ಇಲ್ಲ ಎಂಬುದು ನಿಸ್ಸಂಶಯ. ಇದರ ಹಿಂದೆ ಯಕ್ಷಗಾನ ಚಿಂತಕರ ಶ್ರಮವಿದೆ. ಇಲ್ಲಿ ಶ್ರೀದೇವಿಯ ಆಟ ನಡೆಯುವುದೇ ಹೊರತು ಬೇರೆ ಆಟ ನಡೆಯದು. ಕಲ್ಲಾಡಿ ದೇವಿಪ್ರಸಾದ ಶೆಟ್ಟರ ವ್ಯವಸ್ಥಾಪಕತ್ವದಲ್ಲಿ ಎಲ್ಲವೂ ತುಲನಾತ್ಮಕವಾಗಿದ್ದು ಸಕಲ ವ್ಯವಸ್ಥೆಯೊಂದಿಗೆ ತಿರುಗಾಟ ಆರಂಭಿಸಿದೆ. ಕಲಾವಿದರ ಬಗ್ಗೆ ಪ್ರೀತಿ ಗೌರವ ಹಿತವನ್ನು ನೋಡಿಕೊಳ್ಳುವ ಯಜಮಾನರು ಎಲ್ಲ ಕಲಾವಿದರ ಕಷ್ಟಗಳಿಗೂ ಸ್ಪಂದಿಸುತ್ತಿದ್ದಾರೆ. ಕಲಾವಿದರಿಗೆ ಕ್ಷೇಮನಿಧಿ ವ್ಯವಸ್ಥೆಯಾಗಲಿ ಮೆಡಿಕ್ಲ್ಐಮ್ ಆಗಲಿ ಸರ್ವ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಧರ್ಮಬೋಧಿನಿ ಟ್ರಸ್ಟ್ ಕಲಾವಿದರಿಗೆ ಮಳೆಗಾಲದ ಸಂಬಳ ನೀಡಿ ಗೌರವಿಸುತ್ತಾ ಕಲಾವಿದರ ಬೆನ್ನಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದೆ. ಈ ಎಲ್ಲ ಕಾರ್ಯಗಳಿಂದ ಯಜಮಾನರು ಟ್ರಸ್ಟ್ ಯಕ್ಷಗಾನದಲ್ಲಿ ಬಂದ ಲಾಭವನ್ನು ಕಲೆ ಕಲಾವಿದರಿಗೆ ವಿನಿಯೋಗಿಸುತ್ತಿದ್ದು ಸದ್ವಿನಿಯೋಗವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ತಿರುಗಾಟ ನಡೆಸುತ್ತಿರುವ ನನಗೆ ಇದುವರೆಗೆ ಯಾವುದೇ ಕೊರತೆ ಕಾಣಲಿಲ್ಲ. ನಾವೆಲ್ಲ ಕಲಾ ಸೇವಕರು ಸಂತೋಷದಿಂದ ಸಮೃದ್ಧಿಯತ್ತ ಪಯಣಿಸುತ್ತಿದ್ದೇವೆ.
*ಹರಿನಾರಾಯಣ ಭಟ್ ಎಡನೀರು
ಕಟೀಲು ಮೇಳದ
ಕಲಾವಿದರು

****************
ಸಮಾಜದಲ್ಲಿರುವ ಪ್ರತಿಯೊಂದು ಸಂಘ ಸಂಸ್ಥೆಗಳಿಗೂ ತನ್ನದೇ ಆದ ಕಟ್ಟುಪಾಡುಗಳು ಇವೆ. ರೀತಿ ರಿವಾಜುಗಳು ಇವೆ. ಹಾಗೇ ಎಲ್ಲಾ ಸಂಸ್ಥೆಗಳೂ ಕೂಡ ಸಾಮಾನ್ಯವಾಗಿ ಪಾಲಿಸಬೇಕಾದ ಅಂಶಗಳೂ ಇರುತ್ತವೆ. ಇದೆಲ್ಲಾ ಒಂದು ಸಂಸ್ಥೆಯ ಶಿಸ್ತಿನ ಅವಿಭಾಜ್ಯ ಅಂಗಗಳು.
ನಾನು ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದು ಕಳೆದ ೨೦ ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಉಪನ್ಯಾಸಕತ್ವದ ಜತೆ ಜತೆಗೆ ಆಡಳಿತ ಮಾಡಿದ್ದೇನೆ ಕೂಡಾ. ಕಳೆದ ಕೆಲವು ವರ್ಷಗಳಿಂದ ಕಟೀಲು ಭ್ರಮರಾಂಬೆಯ ಸೇವೆಗೆ ಯಜಮಾನರಾದ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ನನ್ನಂತಹ ಅನೇಕರಿಗೆ ಅವಕಾಶವನ್ನು ನೀಡುವುದರ ಮೂಲಕ ದೇವಿ ಮಹತ್ಮೆಯ ಪ್ರಭೆಯಲ್ಲಿ ಮೀಯಿಸಿದ್ದಾರೆ.
ಯಕ್ಷಗಾನ ಮೇಳ ಕೂಡಾ ಸಾರ್ವಜನಿಕರ ಮಧ್ಯೆ ಅವರ ಸಹಕಾರದಿಂದ ನಡೆದುಕೊಂಡು ಹೋಗುವ ಸಂಸ್ಥೆ. ಉಳಿದ ಸಂಸ್ಥೆಗಳಿಗಿಂತ ಈ ಮೇಳಗಳಿಗೆ ಶಿಸ್ತಿನ ಚೌಕಟ್ಟು ತುಸು ಹೆಚ್ಚೇ ಬೇಕಾಗುತ್ತದೆ. ಕಾರಣ ಕಲಾವಿದ ಸಮಾಜದ ಕಣ್ಣು ಅವನನ್ನು ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆ. ಮೇಳವೆಂಬ ವ್ಯವಸ್ಥೆಗೆ ಒಳಪಟ್ಟ ಪ್ರತಿಯೊಬ್ಬ ಶಿಸ್ತಿನ ಚೌಕಟ್ಟಿಗಡೆ ಒಳಪಟ್ಟುಕೊಳ್ಳುವುದು ಅನಿವಾರ್ಯ ಮತ್ತು ಬಹಳ ಮುಖ್ಯ. ನಾನು ನೀನಾಸಂ, ರಂಗಾಯಣ ಮತ್ತಿತರ ರಂಗತಂಡಗಳನ್ನು ಬಹಳ ಸಮೀಪದಿಂದ ಅರ್ಥೈಸಿದ್ದೇನೆ. ಅಲ್ಲಿರುವ ಶಿಸ್ತು ನಮ್ಮ ಯಕ್ಷಗಾನ ಮೇಳಗಳಲ್ಲಿ ಖಂಡಿತವಾಗೂ ಇಲ್ಲ.
ಈ ಶಿಸ್ತನ್ನು ಮೇಳದ ಜನಮಾನರಾದವ ತನ್ನ ತಂಡದಲ್ಲಿ ತರಲು ಬಯಸಿದರೆ ಅದರಲ್ಲಿ ತಪ್ಪೇನಿದೆ? ಹೇಗೆ ಅದು ಅಸಾಧು ಎಂದೆನಿಸಲ್ಪಡುತ್ತದೆ? ಯಾಕೆಂದ್ರೆ ನಾನು ಗಮನಿಸಿದ ಹಾಗೆ ಕಟೀಲು ಮೇಳದ ಯಜಮಾನರು ತನ್ನ ಮೇಳದ ಎಲ್ಲ ಕಲಾವಿದರ ಅಹವಾಲುಗಳನ್ನು ಕೇಳುವವರು. ಮಾತ್ರವಲ್ಲದೆ ಪರಿಣಾಮಕಾರಿಯಾಗಿ ಸ್ಪಂದಿಸುವವರೂ ಹೌದು. ಇಲ್ಲಿ ಯಜಮಾನರ ನಿಲುವು ಮತ್ತು ಕಲಾವಿದರ ನಿರೀಕ್ಷೆ ಪರಸ್ಪರ. ಯಾಜಮಾನರು ಕಲಾವಿದರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸಿದಾಗ, ಕಲಾವಿದರಾದ ನಾವು ಅವರ ನಿಲುವಿಗೆ, ಮೇಳದ ನಿಲುವಿಗೆ ಗೌರವ ಕೊಡಬೇಡವೇ?
ಕಟೀಲು ಮೇಳದ ಕಲಾವಿದರು ನಿಜವಾಗಲೂ ಪುಣ್ಯವಂತರು. ಕಾರಣ ಭ್ರಮರಾಂಬೆಯ ಭಕ್ತರು ಕಲಾವಿದರಿಗೆ ಬೆನ್ನೆಲುಬಾಗಿ ನಿಂತಿರುವುದು. ಇಂತಹ ಅಗಾಧ ಬೆಂಬಲ ಉಳಿದ ಸಂಸ್ಥೆಗಳಿಗೂ ಇಲ್ಲ ಎನ್ನುವ ಸತ್ಯವನ್ನು ನಾವು ಅರಿಯಬೇಕು. ಯಕ್ಷಬೋಧಿನೀ ಟ್ರಸ್ಟ್ ಮೂಲಕ ಅನೇಕ ರೀತಿಯ ಸವಲತ್ತುಗಳು ಕಲಾವಿದರಿಗೆ, ಮೇಳಕ್ಕೆ ಸಿಗುತ್ತಿವೆ. ಅಂದರೆ ಕಟೀಲು ಅಮ್ಮನ ಮಹಿಮೆಯನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು.
ಹೀಗಾಗಿ ಅಪಾರ ಶ್ರದ್ಧಾಳುಗಳನ್ನು ಹೊಂದಿರುವ ದಶಕ-ದಶಕಗಳ ಹಿನ್ನೆಲೆ ಹೊಂದಿರುವ ಕಟೀಲು ಮೇಳದ ಕುರಿತು ಯಜಮಾನರಾದ ಶ್ರೀ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಕುರಿತು ಸಮಾಜವನ್ನು ತಪ್ಪುದಾರಿಗೆ ಎಳೆಯುವುದನ್ನು ಬಿಟ್ಟು, ಸಮಗ್ರವಾಗಿ, ಶಿಸ್ತುಬದ್ಧವಾಗಿ ಬೆಳೆಯುವುದರ ಕುರಿತಾಗಿ, ಕಲೆಯನ್ನು ಕಲೆಯಾಗಿ ನೋಡುವುದರ ಬಗ್ಗೆ ಚಿಂತನೆ ನಡೆಸಿದರೆ ಸಮಾಜದಲ್ಲಿ ಆರೋಗ್ಯ ನೆಲೆಯೂರುತ್ತದಲ್ಲವೇ?
* ಶೃತಕೀರ್ತಿ ಜೈನ್
ಕಟೀಲು ಮೇಳದ
ಕಲಾವಿದರು
*************

ಕಟೀಲು ಮೇಳದ ಕಲಾವಿದನಾಗಿ ಮೇಳದ ಕಲಾವಿದರ ಹಿತಚಿಂತನೆಯನ್ನು ಬಯಸಿದವರಿಗೆ ವಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸಬೇಕಾಗಿರುವುದು ಓರ್ವ ಕಲಾವಿದನಾಗಿ ನನ್ನ ಕರ್ತ್ಯವ್ಯ.ಯಕ್ಷಧರ್ಮ ಭೋಧಿನಿ ಚಾರಿಟೇಬಲ್ ಟ್ರಸ್ಟ್ ಇವರು ಕಟೀಲು ಮೇಳಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ದಶಕಗಳ ಹಿಂದೆ ಕಟೀಲು ಮೇಳದ ರಂಗಸ್ಥಳ ಪ್ರಸ್ತುತ ಇರುವ ರಂಗಸ್ಥಳದ ಹಾಗೆ ಇರಲಿಲ್ಲ ಬದಲಾಗಿ ಗದ್ದೆಯಲ್ಲಿಯೋ ಅಥವಾ ಬಯಲು ಪ್ರದೇಶದಲ್ಲಿಯೋ ಯಕ್ಷಗಾನ ಪ್ರದರ್ಶನವಾಗುವಾಗ ಕೇವಲ ನೆಲದ ಮೇಲೆಯೇ ಮ್ಯಾಟ್ ನ್ನು ಹಾಕಿ ಅಲ್ಲೇ ನಾವು ಕುಣಿಯುತ್ತಿದ್ದವರು ಇದರ ಕಷ್ಟ ಅನುಭವಿಸಿದವರು ಅದೆಷ್ಟೋ ಕಲಾವಿದರು. ಆದರೆ ಯಕ್ಷಧರ್ಮ ಭೋಧಿನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲಾವಿದರ ಹಿತದೃಷ್ಠಿಯಿಂದ ಫ್ಲ್ಯಾಟ್ ಫಾರ್ಮ್ ಇರುವ ರಂಗಸ್ಥಳವನ್ನು ಒದಗಿಸಿಕೊಟ್ಟಿದ್ದಾರೆ. ಅವರು ಮಾಡಿದ ಈ ಸೇವೆಯನ್ನು ನಾನೆಂತು ಮರೆಯಲಿ.

ದಶಕಗಳ ಹಿಂದೆ ಕಲಾವಿದರೆಲ್ಲರೂ ಒಂದು ಕಡೆಯ ಪ್ರದರ್ಶನ ಮುಗಿಸಿ ಇನ್ನೊಂದು ಸೇವಾಕರ್ತರ ಪ್ರದರ್ಶನಕ್ಕೆ ಹೋಗಬೇಕಾದುದು ಲಾರಿಯಲ್ಲಿ. ಇದೇ ಲಾರಿಯಲ್ಲಿ ವೇಷಭೂಷಣ, ಇತರ ಪರಿಕರಗಳೂ ಇದ್ದು ಕಲಾವಿದರು, ನೇಪಥ್ಯ ಕಲಾವಿದರು ಕೂಡ ಸಂಚರಿಸಬೇಕಾದುದು ಅನಿವಾರ್ಯವಿತ್ತು. ಆದರೆ ಇದನ್ನು ಕಂಡಂತಹ ಟ್ರಸ್ಟ್ ಕಟೀಲಿನ ಆರೂ ಮೇಳಕ್ಕೂ ಬಸ್ಸಿನ ವ್ಯವಸ್ಥೆಯನ್ನು ಒದಗಿಸಿ ಕೊಟ್ಟಿದ್ದಾರೆ. ಈ ಬಸ್ಸಿನಲ್ಲಿಯೇ ವೇಷಭೂಷಣ, ಇತರ ಪರಿಕರಗಳೂ ಸಾಗುತ್ತಿತ್ತು. ಆದರೆ ಈ ವರ್ಷ ಬಸ್ಸು ಮತ್ತು ಲಾರಿಯನ್ನು ಕಲಾವಿದರ ಹಿತದೃಷ್ಠಿಯಿಂದ ಒದಗಿಸಿಕೊಟ್ಟಿದ್ದಾರೆ. ಇದಕ್ಕೆ ಯಕ್ಷಧರ್ಮ ಭೋಧಿನಿ ಚಾರಿಟೇಬಲ್ ಟ್ರಸ್ಟ್ ಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಷ್ಟೇ ಅಲ್ಲದೆ ಕ್ಷೇಮನಿಧಿಯಿಂದ ಮೇಳದ ಕಲಾವಿದರ ಔಷಧದಕ್ಕೆ ತಗಲುವ ವೆಚ್ಚವನ್ನು ಪ್ರತೀ ತಿಂಗಳು ಒದಗಿಸಿ ಕೊಡುತ್ತಾರೆ. ಅಲ್ಲದೆ ಅರೋಗ್ಯ ವಿಮೆ, ಅಪಘಾತ ವಿಮೆಗಳಂತಹ ಸೌಕರ್ಯವನ್ನು ಕೇವಲ ಕಲಾವಿದರ ಹಿತದೃಷ್ಟಿಯಿಂದಲೇ ಒದಗಿಸಿ ಕೊಡುತ್ತಾರೆ.

ಕಟೀಲು ಮೇಳದ ಕಲಾವಿದನಿಗೆ ಕೇವಲ ಆರು ತಿಂಗಳು ಮಾತ್ರ ಉದ್ಯೋಗ. ಉಳಿದ ಆರು ತಿಂಗಳು ಮನೆಯೆಲ್ಲೆ ಉಳಿದುಕೊಳ್ಳಬೇಕು. ಇನ್ನು ಕೆಲವರು ಬೇರೆ ಬೇರೆ ಮಳೆಗಾಲದ ತಿರುಗಾಟ ಮೇಳಗಳಲ್ಲಿ ಸೇವೆಸಲ್ಲಿಸುತ್ತಾರೆ. ಕೆಲವರು ಬೇರೇನಾದರೂ ಉದ್ಯೋಗ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಆರು ತಿಂಗಳ ತಿರುಗಾಟಕ್ಕೆ ಮಾತ್ರ ಸಂಭಾವನೆ ದೊರೆಯುತ್ತಿತ್ತು. ಆದರೆ ಯಕ್ಷಧರ್ಮ ಭೋಧಿನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಜೆ ಸಂಬಳವನ್ನು ಎಲ್ಲಾ ಕಲಾವಿದರಿಗೂ ಒದಗಿಸಿಕೊಡುತ್ತಿದ್ದರೆ. ಬಹುಶಃ ಇಂತಹ ಒಂದು ವ್ಯವಸ್ಥೆ ಯಾವ ಮೇಳದಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಇನ್ನು ನಾನು ಕೃತಜ್ಞತೆಯನ್ನು ಅರ್ಪಿಸಬೇಕಾದುದು ನಮ್ಮ ಮೇಳದ ಯಜಮಾನರಿಗೆ. ಇವರಿಗೂ ಕಲಾವಿದರಿಗೂ ಇರುವ ಸಂಬಂಧ ಅನನ್ಯವಾದುದು. ನಾನು ತಿಳಿದ ಪ್ರಕಾರ ಯಜಮಾನನಾದವನು ತನ್ನ ಘನತೆಯನ್ನು ಉಳಿಸುವುದಕ್ಕಾಗಿ ಕಲಾವಿದರ ನಡುವೆ ಅಷ್ಟಕಷ್ಟೇ ಸಂಬಂಧವನ್ನು ಇರಿಸಿಕೊಳ್ಳುತ್ತಾರೆ. ಆದರೆ ನಮ್ಮ ಯಜಮಾನರು ಹಾಗಲ್ಲ ಕಲಾವಿದರ ಪ್ರತಿಯೊಂದು ಕಷ್ಟಗಳಿಗೂ ಸ್ಪಂದಿಸುತ್ತಾರೆ.

ಒಂದು ವರ್ಷ ಒಬ್ಬ ಕಲಾವಿದನ ಕೈಯೊಂದು ಮುರಿತಕೊಳಪಟ್ಟಾಗ ನುರಿತ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಮೇಳದ ತಿರುಗಾಟ ಇಲ್ಲದೆ ಇದ್ದ ಸಂದರ್ಭ ಓರ್ವ ನೇಪಥ್ಯ ಕಲಾವಿದ ತನ್ನ ವೈಯಕ್ತಿಕ ವಿಷಯಕ್ಕಾಗಿ ವಿಷ ಸೇವನೆಯನ್ನು ಮಾಡಿದಾಗ ತನಗೆ ಅಗತ್ಯವಿಲ್ಲದಿದ್ದರೂ ಕಟೀಲು ಮೇಳದಲ್ಲಿರುವ ಕಲಾವಿದ ಎಂಬ ಒಂದೇ ಒಂದು ಉದ್ದೇಶದಿಂದ ಸಕಾಲದಲ್ಲಿ ಸ್ಪಂದಿಸಿ ಖರ್ಚು ವೆಚ್ಚಗಳನ್ನು ನೋಡಿದ್ದು ಮಾತ್ರವಲ್ಲದೆ ಅವರಿಂದು ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟ ದೇವರೇ ಸರಿ. ಈ ಹಿಂದೆ ಮೇಳದಲ್ಲಿ ಇರುವ ಕಲಾವಿದರು ಮೇಳ ತಿರುಗಾಟದ ಸಮಯದಲ್ಲಿ ಬೇರೆ ಕಡೆ ಉದ್ಯೋಗ ಮಾಡುವ ಅವಕಾಶವಿರಲಿಲ್ಲ. ಆದರೆ ಇತ್ತೀಚೆಗೆ ಕಟೀಲು ಮೇಳದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸ್ವ ಉದ್ಯೋಗಿಗಳೂ ಕೂಡ ಸೇವೆ ಮಾಡುವುದಕ್ಕೆ ನಮ್ಮ ಯಜಮಾನರು ಅವಕಾಶ ಮಾಡಿಕೊಟ್ಟಿದ್ದಾರೆ.

ನಾನು ಕೂಡ ಓರ್ವ ಪ್ರತಿಷ್ಠಿತ ಐಟಿ ಸಂಸ್ಥೆಯಲ್ಲಿ ದುಡಿಯುವವನಾಗಿದ್ದೇನೆ. ಹಗಲು ದುಡಿದು ರಾತ್ರಿ ಮೇಳದಲ್ಲಿ ಬೆಳಗಿನವರೆಗೆ ಎರಡು ಮೂರೂ ವೇಷ ಮಾಡುವುದು ಕಷ್ಟಸಾಧ್ಯ. ಆದರೆ ಈ ಹಿಂದೆ ಅದು ಕಲಾವಿದರಿಗೆ ಅನಿವಾರ್ಯವಿತ್ತು. ಯಜಮಾನರ ವಿಶಾಲ ಹೃದಯ ಶ್ರೀಮಂತಿಕೆಯಿಂದ ಹಗಲು ಹೊತ್ತು ದುಡಿದು ಬರುವ ಕಲಾವಿದರಿಗೂ, ವಿದ್ಯಾರ್ಥಿಗಳಿಗೂ ಅವಕಾಶ ಕೊಡುವುದರ ಜೊತೆಯಲ್ಲಿ ಅವರಿಗೆ ವಿಶ್ರಾಂತಿಯನ್ನು ಕೊಡುವುದಕ್ಕೆ ಭಾಗವತರಿಗೆ ಸೂಚಿಸಿದ್ದಾರೆ. ಇಂತಹ ಯಜಮಾನರನ್ನು ಬೇರೆಲ್ಲಿಯೂ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಕಲಾವಿದರಿಗೆ ಹಣದ ಅವಶ್ಯಕತೆ ಬಿದ್ದಾಗ ಸಂಭಾವನೆಗಿಂತ ಹೆಚ್ಚು ಹಣವನ್ನು ಯಾವುದೇ ದಾಖಲೆ ಪಾತ್ರಗಳಿಲ್ಲದೆ ಮುಂಗಡ ಹಣವನ್ನು ನೀಡುತ್ತಾರೆ. ಇಂತಹ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಯಜಮಾನರನ್ನು ನಾನೆಂದು ಮರೆಯಲಿ.ಈಗಾಗಲೇ ಕಟೀಲು ದೇವಸ್ಥಾನವು ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಒಂದು ವೇಳೆ ಮೇಳವು ಇದರ ಸುಪರ್ದಿಗೆ ಒಳಪಟ್ಟರೆ ಕಲಾವಿದ ಸರಕಾರಿ ನೌಕರ ಎನ್ನುವುದನ್ನು ಮಾತ್ರ ಹೇಳಬೇಕಷ್ಟೆ ವಿನಃ ಇದರಿಂದಾಗುವ ತೊಂದರೆಗಳನ್ನು ಅನುಭವಿಸುವುದೆಂತು ?

ಮೇಳದ ಕಲಾವಿದರಿಗೆ 8 ರಜೆಯನ್ನು ಹೊರತುಪಡಿಸಿ ಹೆಚ್ಚುವರಿ ರಜೆ ಬೇಕಾದಲ್ಲಿ ಯಜಮಾನರಲ್ಲಿ ವಿಚಾರಿಸಿದರೆ ಸಾಕಾಗುತ್ತಿತ್ತು. ಒಂದು ವೇಳೆ ಮೇಳವು ಮುಜರಾಯಿ ಇಲಾಖೆಗೆ ಒಳಪಟ್ಟರೆ ಇವುಗಳನ್ನು ಪಡೆಯುವುದು ಕಷ್ಟಸಾಧ್ಯ . ಹೆಚ್ಚುವರಿ ರಜೆ ಹೆಚ್ಚುವರಿ ಸಂಭಳ ಬೇಕಾದರೆ ಸರಕಾರಿ ಕ್ರಮದ ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಕಲಾವಿದರಿಗೂ ಸರಕಾರಕ್ಕೂ ಈ ನಡುವೆ ನಿಕಟವಾದ ಸಂಭಂದ ತೀರಾ ಕಡಿಮೆ. ನಮ್ಮ ಕಷ್ಟಕ್ಕೆ ಸಕಾಲದಲ್ಲಿ ಸರಕಾರ ಸ್ಪಂದಿಸುವುದಕ್ಕೆ ಸಾಧ್ಯವುಂಟೆ. ಎನಿಸುವಷ್ಟು ಯಾವುದು ಸುಲಭವಲ್ಲ. ಇದೆಲ್ಲವನ್ನು ಗಮನಿಸುವಾಗ ಮೇಳವು ಯಜಮಾನರ ಕೈಯಲ್ಲೇ ಇದ್ದರೇ ಒಳಿತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

* ರವಿಕುಮಾರ್ ಮುಂಡಾಜೆ
ಯಕ್ಷಗಾನ ಕಲಾವಿದ ಕಟೀಲು ಮೇಳ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter