Published On: Wed, Jun 10th, 2015

ಮ್ಯಾನ್ಮಾರ್ ಸಾಹಸದಲ್ಲಿ ಮಿಂಚಿದ ಸುಳ್ಯದ ಯೋಧ

ಸುಳ್ಯ: ಭಾರತೀಯ ಯೋಧರು ನೆರೆಯ ಮ್ಯಾನ್ಮಾರ್ ದೇಶದ ಗಡಿ ಯೊಳಗೆ ನುಗ್ಗಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿರುವಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಉಗ್ರಾಣಿಮನೆಯ ಯೋಧ ರಘುಪತಿ ಮುಂಚೂಣಿಯಲ್ಲಿದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಮಂಡೆಕೋಲು ಗ್ರಾಮದ ಉಗ್ರಾಣಿಮನೆ ಜತ್ತಪ್ಪ ಗೌಡ ಹಾಗೂ ದಿ. ಸೀತಮ್ಮ ದಂಪತಿ ಪುತ್ರ ರಘುಪತಿ ಯು.ಎಂ ಈ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ವೀರ ಯೋಧ. ಇವರು ಇಡೀ ದೇಶವೇ ಕೊಂಡಾಡುವ ಐತಿಹಾಸಿಕ ಕಾರ್ಯಾ ಚರಣೆ ನಡೆಸಿ ಗೆಲುವು ಸಾಧಿಸಿದ ದಿನವೇ ಇವರು ತನ್ನ ವೈವಾಹಿಕ ಜೀವನದ 13ನೇ ವರ್ಷಕ್ಕೆ ಕಾಲಿರಿಸಿದ ಶುಭದಿನವೂ ಹೌದು.
IMG-20150611-WA0050

ಇವರು ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನಿಂದ ಅಸ್ಸಾಂನ ಜೋರಾಹಟ್‌ನ ಕೇಂದ್ರದ 21 ಪ್ಯಾರಾ ಕಮಾಂಡೋ ಸ್ಪೆಷಲ್ ಫೋರ್ಸ್‌ನ ಸುಬೇದಾರರಾಗಿ ನಿಯುಕ್ತಿಗೊಂಡಿದ್ದರು. ಆ ವೇಳೆಯೇ ಉಲ್ಫಾ ಉಗ್ರರ ಅಟ್ಟಹಾಸ ಹೆಚ್ಚಾಗಿತ್ತು. ಜೂ.4ರಂದು ಮಣಿಪುರದ ಚಾಂದೇಲ್‌ನಲ್ಲಿ 18 ಮಂದಿ ಸೇನಾ ಯೋಧರನ್ನು ಭೀಭತ್ಸವಾಗಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಸೇನೆ ಮತ್ತು ಕೇಂದ್ರ ಸರಕಾರ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿ ಮಟ್ಟ ಹಾಕಲು ಸೇನೆಗೆ ಆದೇಶ ನೀಡಿತ್ತು. ಅಲ್ಲದೆ ಇದಕ್ಕಾಗಿ ಮ್ಯಾನ್ಮಾರ್ ಸರಕಾರದ ಜತೆ ಮಾತುಕತೆ ನಡೆಸಿ ಮ್ಯಾನ್ಮಾರ್ ದೇಶಕ್ಕೆ ನುಗ್ಗಿ ಈ ಉಗ್ರರನ್ನು ಹೊಡೆದು ಉರುಳಿಸಲು ಆದೇಶಿಸಿತ್ತು.

ಅದರಂತೆ ಸೇನಾಧಿಕಾರಿಗಳು ರಘುಪತಿ ಅವರನ್ನೊಳಗೊಂಡ ವಿಶೇಷ ದಳವನ್ನು ಜೂ.5ರಂದು ಮ್ಯಾನ್ಮಾರ್ ಗಡಿಭಾಗಕ್ಕೆ ಕಳುಹಿಸಿತ್ತು. ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಉಗ್ರರು ಮ್ಯಾನ್ಮಾರ ಗಡಿಯೊಳಗೆ ಅವಿತುಕೊಂಡಿರುವುದನ್ನು ಸೇನೆಯ ಗುಪ್ತಚರ ಇಲಾಖೆ ಪತ್ತೆ ಮಾಡಿತ್ತು. ಖಚಿತ ಮಾಹಿತಿ ಮೇರೆಗೆ ರಘುಪತಿಯೊಳಗೊಂಡ 30 ಮಂದಿಯ ತಂಡ ಶೌರ್ಯದಿಂದ ದಾಳಿ ನಡೆಸಿ ಉಗ್ರರನ್ನು ಸದೆ ಬಡೆಯುವಲ್ಲಿ ಯಶಸ್ವಿಯಾದರು.

ರಘುಪತಿಯವರು ರಾಷ್ಟ್ರಪತಿಗಳಿಂದ ಪ್ರಶಂಸೆ ಪಡೆದಿದ್ದು, ಭಾರತೀಯ ಸೇನೆಯಲ್ಲಿ 24 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯಕ್ಕಾಗಿ ತರಬೇತಿ ಪಡೆದ ಅವರು ಕಾಂಗೋಗೆ ನಿಯುಕ್ತಿಗೊಂಡಿದ್ದರು. ಆದರೆ ಉಗ್ರರ ಅಟ್ಟಹಾಸ ಮಿತಿ ಮೀರಿದ್ದರಿಂದ ಸೇನೆ ರಘುಪತಿ ಅವರನ್ನು ಇಲ್ಲೇ ಕರ್ತವ್ಯಕ್ಕೆ ಉಳಿಸಿಕೊಂಡಿತ್ತು.

ರಘುಪತಿಯವರು ಐವರ್ನಾಡಿನ ಕೋಡ್ತಿಲುನಿಂದ ಭಾರತಿ ಅವರನ್ನು ಮದುವೆಯಾಗಿದ್ದು, ಪುತ್ರ ಪೃಥ್ವಿರಾಜ್, ಪುತ್ರಿ ವೈಶಾಲಿ ಇದ್ದಾರೆ. ಇವರು ಸುಳ್ಯ ಕೆವಿಜಿ ಐಪಿಎಸ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.

ರಘುಪತಿ ಅವರ ಪತ್ನಿ ಭಾರತಿ ಅವರು ಮಾವ ಜತ್ತಪ್ಪ ಗೌಡ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರು ಕೃಷಿಕರಾಗಿದ್ದು ಮನೆಯ ಜವಾಬ್ದಾರಿಯನ್ನು ಭಾರತಿಯವರ ಹೆಗಲ ಮೇಲಿದೆ. ರಘುಪತಿ ಅವರ ಸಹೋದರ ರವೀಂದ್ರ ಕುಮಾರ್ ಕೂಡ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಯೋಧರಾಗಿದ್ದು, ರಾಜಸ್ಥಾನದ ಕೋಟಾದಲ್ಲಿ ಕರ್ತವ್ಯದಲ್ಲಿದ್ದಾರೆ.

*ಜೂ.6ಕ್ಕೆ ನಾವು ವೈವಾಹಿಕ ಜೀವನಕ್ಕೆ ಕಾಲಿಟ್ಟು 13 ವರ್ಷಗಳಾಗಿದೆ. ಇದೇ ದಿನ ರಘುಪತಿಯವರು ಫೋನ್ ಮಾಡಿ ಶುಭ ಕೋರಿ ಇನ್ನು 4 ದಿನಗಳ ಕಾಲ ಕರ್ತ ವ್ಯಕ್ಕೆ ತೆರಳುತ್ತೇನೆ. ಕಾರ್ಯಾಚರಣೆ ಬಳಿಕ ಫೋನ್ ಮಾಡು ತ್ತೇನೆಂದು ಹೇಳಿದ್ದರು. ಕಾರ್ಯಾಚರಣೆ ನಂತರ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದ ಸೇನಾಪಡೆಗೆ ಗೌರವ ಸಲ್ಲಿಸುತ್ತೇನೆ. ಪತಿಯ ಶೌರ್ಯದ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. -ಭಾರತಿ, ಯೋಧ ರಘುಪತಿ ಅವರ ಪತ್ನಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter