Published On: Mon, Aug 19th, 2019

ನಾಲ್ಕು ತಿಂಗಳ ಸಂಬಳಕಾಗಿ ಶಿಕ್ಷಕರು ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ:- ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವ ಪರಿಸ್ಥಿತಿ ತಲೆದೋರಿದ್ದು, ಕೂಡಲೇ ವೇತನ ಅನುದಾನ ಬಿಡುಗಡೆಗೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ಶಿಕ್ಷಕರು ಧರಣಿ ನಡೆಸಿದರು.

ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮುರಳಿಮೋಹನ್, ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ವೇತನವನ್ನೇ ನಂಬಿರುವ ಶಿಕ್ಷಕರ ಬದುಕು ಸಂಕಷ್ಟದಲ್ಲಿದೆ, ಈ ಸಂಬಂಧ ಡಿಡಿಪಿಐ,ಬಿಇಒ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೋಲಾರ,ಶ್ರೀನಿವಾಸಪುರ ಸೇರಿದಂತೆ ಕೆಲವು ತಾಲ್ಲೂಕುಗಳಲ್ಲಿ ಶಿಕ್ಷಕರಿಗೆ ವೇತನವಾಗಿಲ್ಲ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ನೇಮಕಗೊಂಡ ಶಿಕ್ಷಕರಿಗೂ ವೇತನ ನೀಡದೇ ಇಲಾಖೆ ಅನ್ಯಾಯ ಎಸಗಿದೆ ಎಂದು ದೂರಿದರು.

18kolar5 (1)

ಶಾಲಾ ಅವಧಿಗೆ ಮುನ್ನಾ, ಅವಧಿಯ ನಂತರವೂ ಕೆಲಸ ಮಾಡುವ ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವಲ್ಲಿ ಅವಿಶ್ರಾಂತ ಶ್ರಮಿಸುತ್ತಿದ್ದಾರೆ, ಜಿಲ್ಲೆಗೆ 7ನೇ ಸ್ಥಾನ ತಂದುಕೊಟ್ಟು ಘನತೆ ಉಳಿಸಿದ ಶಿಕ್ಷಕರಿಗೆ ಕಳೆದ 4 ತಿಂಗಳಿಂದ ವೇತನ ನೀಡದೇ ಇರುವುದೇ ಸಾಧನೆಗೆ ನೀಡಿದ ಕೊಡುಗೆಯಾಗಿದೆ ಎಂದು ವ್ಯಂಗ್ಯವಾಡಿದರು.
ಮೇ ತಿಂಗಳಿಂದ ಸಂಬಳ ಬಟವಾಡೆಯಾಗದ ಕಾರಣ ಶಿಕ್ಷಕರು ಜೀವನ ಮುನ್ನಡೆಸಲು ಸಂಕಷ್ಟ ಅನುಭವಿಸುವಂತಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಲ್.ಶಂಕರಪ್ಪ, ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಶಿಕ್ಷಕರಿಗೆ ವೇತನ ಬಟವಾಡೆ ಮಾಡಬೇಕು, ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೂ ಬಾಕಿ ಇರುವ 4 ತಿಂಗಳ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅನುದಾನ ಕೊರತೆಯಾಗುತ್ತಿದ್ದಂತೆ ಸರ್ಕಾರದೊಂದಿಗೆ ಮಾತನಾಡಿ ಬಿಡುಗಡೆ ಮಾಡಿಸುವಲ್ಲಿ ಇಲಾಖೆ ಎಡವಿದೆ, ಜಿಲ್ಲೆಯ ಹಲವು ತಾಲ್ಲೂಕುಗಳ ಶಿಕ್ಷಕರಿಗೂ ವೇತನ ಆಗಿದೆ, ಕೋಲಾರ ತಾಲ್ಲೂಕಿನ ಶಿಕ್ಷಕರು ಮತ್ತು ಜಿಲ್ಲೆಯ ಆರ್‍ಎಂಎಸ್‍ಎ ಅಡಿ ಕೆಲಸ ಮಾಡುವ ಶಿಕ್ಷಕರು ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯಲ್ಲಿ ಬಾಕಿ ಇರುವ ಬಿಲ್ಲುಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ವರ್ಗಾವಣೆಯಲ್ಲಾಗಿರುವ ಗೊಂದಲಗಳನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಹಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ದಾಸಪ್ಪ, ಜಿಲ್ಲಾ ಪದಾಧಿಕಾರಿಗಳಾದ ಮೋಹಾನಾಚಾರಿ, ಶರಣಪ್ಪ, ರಾಧಾಮಣಿ, ಗಂಗಾಧರಮೂರ್ತಿ, ಪಿ.ಲೀಲಾ,ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಶ್ರೀರಾಮರೆಡ್ಡಿ, ಮುರಳಿ, ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರುಗಳಾದ ಸುಬ್ರಮಣಿ, ನರಸಿಂಹಮೂರ್ತಿ, ಮುಕುಂದ ವೆಂಕಟೇಶಗೌಡ, ಶಿಕ್ಷಕರಾದ ವಿಜಯಲಕ್ಷ್ಮಿ ಪದ್ಮಾವತಿ, ನವನೀತಾ ಮತ್ತಿತರರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter