Published On: Wed, Aug 14th, 2019

ಪಚ್ಚನಾಡಿ : ತ್ಯಾಜ್ಯಾಘಾತಕ್ಕೆ ಸಿಲುಕಿದ 24 ಮನೆ ಖಾಲಿ ಮಾಡಿಸಿದ ಮನಪಾ ; ಬೈತುರ್ಲಿಗೆ ಸ್ಥಳಾಂತರ ಈಗಲೂ ಜಾರುತ್ತಿದೆ ತ್ಯಾಜ್ಯ ; ಹೆಚ್ಚಿದ ಸೊಳ್ಳೆ ಕಾಟ ; ಆಯುಕ್ತ ನಝೀರ್ ಭೇಟಿ

ವಾಮಂಜೂರು : ವಾಮಂಜೂರಿನ ಪಚ್ಚನಾಡಿ ಡಂಪಿಂಗ್ ಯಾರ್ಡಿನ ಲ್ಯಾಂಡ್ ಫಿಲ್ಲಿಂಗ್ ಪ್ರದೇಶದಲ್ಲಿ ಲೋಡುಗಟ್ಟಲೆ ತ್ಯಾಜ್ಯ ಹತ್ತಿರದ ಮನೆಗಳ ಆವರಿಸಿದ್ದು, ಎಲ್ಲೆಡೆ ಚೆಲ್ಲಾಪಿಲ್ಲಿಯಾದ ತ್ಯಾಜ್ಯದಿಂದ ಸುತ್ತಲ ಪ್ರದೇಶದಲ್ಲಿ ದುರ್ಗಂಧ ಬೀರುತ್ತಿದೆ. ಜೊತೆಗೆ ಸೊಳ್ಳೆ ಕಾಟ ಹೇಳತೀರದು. ತ್ಯಾಜ್ಯ ಜರಿದು ಅಪಾಯಕ್ಕೆ ಸಿಲುಕಿದ 24 ಮನೆ ಈಗಾಗಲೇ ಖಾಲಿ ಮಾಡಲಾಗಿದೆ.ಬೇಸಗೆಗಾಲದಲ್ಲಿ ಮಂಗಳೂರು ವ್ಯಾಪ್ತಿಯಿಂದ ತಂದು ಇಲ್ಲಿನ ಲ್ಯಾಂಡ್ ಫಿಲ್ಲಿಂಗ್ ಜಾಗದಲ್ಲಿ ಭಾರೀ ಗುಂಡಿ ತೋಡಿ ತ್ಯಾಜ್ಯ ಸುರಿದು, ಮೇಲ್ಗಡೆ ನಿರ್ದಿಷ್ಟ ಪ್ರಮಾಣದಲ್ಲಿ ಮಣ್ಣು ಹಾಸಲಾಗಿತ್ತು. ಆ. 7ರಂದು ಲ್ಯಾಂಡ್ ಫಿಲ್ಲಿಂಗ್ ಪ್ರದೇಶದ ಒಂದು ಕಡೆಯ ಗುಡ್ಡ ಜರಿಯಿತು. ಲ್ಯಾಂಡ್ ಫಿಲ್ಲಿಂಗ್ ಪ್ರದೇಶದ ಅಡಿ ಭಾಗದಲ್ಲಿ ನೀರಿನ ಒರತೆ ಹೆಚ್ಚಾಗಿ, ತ್ಯಾಜ್ಯವೆಲ್ಲ ಕೆಳಗಡೆ ಜರಿಯಲಾರಂಭಿಸಿತು ಎಂದು ಸ್ಥಳೀಯರು ಹೇಳಿದರು.gur-aug-11-waste&water-1

ತ್ಯಾಜ್ಯ ಜರಿದ ಜಾಗದಲ್ಲಿ 24 ಮನೆಗಳಿದ್ದು, ಒಂದು ಮನೆಯ ಮೇಲೆಯೇ ಭಾರೀ ತ್ಯಾಜ್ಯ ಜರಿದು ಮನೆ ಸಂಪೂರ್ಣ ಜಖಂಗೊಂಡಿದೆ. ಉಳಿದ ಮೂರು ಮನೆಗಳಿಗೆ ಭಾಗಶಃ ತ್ಯಾಜ್ಯ ಜರಿದು ಬಿದ್ದಿದೆ. ಇಲ್ಲಿ ನಾಲ್ಕೈದು ಕುಟುಂಬಗಳಿಗೆ ಸಂಬಂಧಿಸಿದ ಸುಮಾರು ಒ0ಬತ್ತು ಎಕ್ರೆ ಜಾಗದಲ್ಲಿದ್ದ ಕಂಗು ಮತ್ತು ತೆಂಗಿನ ತೋಟವಿದ್ದು, ತ್ಯಾಜ್ಯ ಜರಿದಿರುವುದರಿಂದ ತೋಟಗಾರರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಮನೆಗಳ ಪಕ್ಕದಲ್ಲಿ ಕೆರೆಯಂತೆ ತ್ಯಾಜ್ಯ ಕೊಳಚೆ(ರಾಸಾಯನಿಕಯುಕ್ತ) ನೀರು ಸಂಗ್ರಹವಾಗಿದ್ದು, ಸೊಳ್ಳೆ ಕಾಟ ವಿಪರೀತವಾಗಿದೆ.gur-aug-11-waste-2

ಕುಟುಂಬಗಳು ಸ್ಥಳಾಂತರ:

ತ್ಯಾಜ್ಯ ಅನಾಹುತ ಸಂಭವಿಸಿದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಗೆ ಬೈತುರ್ಲಿ-ನೀರುಮಾರ್ಗ ಬಳಿ ಇರುವ ಕರ್ನಾಟಕ ಹೌಸಿಂಗ್ ಬೋರ್ಡು ಕಟ್ಟಡದ ಫ್ಲ್ಯಾಟುಗಳಲ್ಲಿ ಪರ್ಯಾಯ ವ್ಯವಸ್ಥೆಗೆ ಸೂಚಿಸಿದ್ದಾರೆ. ಸದ್ಯಪಚ್ಚನಾಡಿಯ ಎಲ್ಲ 24 ಸಂತ್ರಸ್ತ ಮನೆಯವರೂ ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ.gur-aug-11-waste-1

14vamanjur2

“ಇನ್ನು ಇಲ್ಲಿ ಯಾರೂ ವಾಸಿಸುವುದಿಲ್ಲ. ಈಗ ತ್ಯಾಜ್ಯ ಜರಿದರೆ, ಇನ್ನು ಗುಡ್ಡವೇ ಕುಸಿಯಬಹುದು. ದುರ್ವಾಸನೆ ಹೇಳತೀರದು. ಇಂತಹ ಅಪಾಯದ ಮುನ್ಸೂಚನೆ ಸಿಕ್ಕಿದ ಮೇಲೆಯೂ ಭವಿಷ್ಯದಲ್ಲಿ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ಈಗ ಮನೆ ಖಾಲಿ ಮಾಡಿ, ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರಗೊಂಡರೂ, ಮುಂದೆ ಸರಿಯಾದ ಪರಿಹಾರ ಪಡೆದು ಬೇರೆಡೆಗೆ ಹೋಗುತ್ತೇವೆ” ಎಂದು ಪಚ್ಚನಾಡಿಯ ಸಂತ್ರಸ್ತ ಶ್ರೀರಾಮ ಭಟ್ ಮತ್ತು ನಾಗೇಶ್ ಹೇಳಿದರು.

ತ್ಯಾಜ್ಯದಿಂದ ಮೂಲತಃ ಪುತ್ತೂರಿನ ರವೀಂದ್ರ ಭಟ್ ಮಂದಾರರ ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕೆಲವು ವರ್ಷದಿಂದ ಈ ಮನೆ ಖಾಲಿಯಾಗಿದೆ. ಆದರೆ ಇವರ ಒಂದೂವರೆ ಎಕ್ರೆ ಕಂಗು-ತೆಂಗಿನ ತೋಟ ಹಾನಿಗೀಡಾಗಿದೆ. ನಾಗೇಶ್ ಕುಟುಂಬಿಕರಿಗೆ ಸಂಬಂಧಿಸಿದ ಏಳು ಎಕ್ರೆ ಹಾಗೂ ಭೋಜ ಮೊೈಲಿಯ ಒಂದು ಎಕ್ರೆ ತೋಟ ಹಾನಿಗೀಡಾಗಿದೆ. ಇವರೊಂದಿಗೆ ಜಯಪ್ರಕಾಶ, ಚಂದ್ರಹಾಸ, ರಾಜು, ಜ್ಯೋತಿ, ಪುಷ್ಪಾ ಟೀಚರ್, ಮಾಧವ, ನಾಗೇಶ್ ಸಹಿತ 24 ಮನೆಯವರು ಈಗಾಗಲೇ ಬೈತುರ್ಲಿಗೆ ಮನೆ ಸ್ಥಳಾಂತರಗೊಂಡಿದ್ದಾರೆ.

ಆಯುಕ್ತ, ಆರೋಗ್ಯಾಧಿಕಾರಿ

ತಂಡದಿಂದ ಸ್ಥಳ ಪರಿಶೀಲನೆ:

ಭಾನುವಾರ ಮಂಗಳೂರು ನಗರಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪರಿಸರ ಇಂಜಿನಿಯರುಗಳಾದ ಮಧು ಮನೋಹರ, ದಯಾನಂದ, ಆರೋಗ್ಯ ಸಿಬ್ಬಂದಿ ಚೇತನ್ ಮೊದಲಾದವರ ತಂಡ ಪಚ್ಚನಾಡಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿತು.

“ಜಿಲ್ಲಾಧಿಕಾರಿಯವರ ಆದೇಶದಂತೆ ಸಂತ್ರಸ್ತರಿಗೆ ಈಗ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಹಾರ ಹಾಗೂ ಖಾಯಂ ವಸತಿ ನೀಡುವ ವಿಷಯದಲ್ಲಿ ಮುಂದಿನ ವಾರ ಡೀಸಿ ಕಚೇರಿಯಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಯಲಿದೆ. ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದ ಇಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ತ್ಯಾಜ್ಯವೆಲ್ಲ ಲ್ಯಾಂಡ್ ಫಿಲ್ಲಿಂಗ್ ಪ್ರದೇಶದಿಂದ ಕೆಳಗಡೆಯ ವಸತಿ ಪ್ರದೇಶಕ್ಕೆ ಜರಿದು, ಅನಾಹುತ ಸಂಭವಿಸಿದೆ.ಸೊಳ್ಳೆ ಕಾಟ ತಪ್ಪಿಸಲು ಫಾಗಿಂಗ್ ಮಾಡಲಾಗುತ್ತಿದೆ” ಎಂದು ಆಯುಕ್ತ ಮೊಹಮ್ಮದ್ ನಝೀರ್ ಹೇಳಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter