Published On: Sun, Jun 16th, 2019

ಪಿಂಚಣಿ ಸಮಾವೇಶಕ್ಕೆ ಸೂಚನೆ

ಬಂಟ್ವಾಳ: ತಾಲೂಕಿನಲ್ಲಿ ೨೫ ಸಾವಿರಕ್ಕೂ ಅಧಿಕ ಮಂದಿ ವಿವಿಧ ಪಿಂಚಣಿಯನ್ನು ಪಡೆಯುತ್ತಿರುವ ಹಿನ್ನಲೆಯಲ್ಲಿ ಶೀಘ್ರವಾಗಿ ತಾಲೂಕು ಮಟ್ಟದ ಬೃಹತ್ ಪಿಂಚಣಿ ಸಮಾವೇಶ ನಡೆಸುವಂತೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ಡಿಸೋಜಾ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಶನಿವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು, ಈ ನಿರ್ದೇಶನ ನೀಡಿದ್ದು, ಕಂದಾಯ ಅದಾಲತನ್ನು ನಡೆಸಿ ಜನರ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರಲ್ಲದೆ ಇದಕ್ಕೆಲ್ಲಾ ಜನಪ್ರತಿನಿಧಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಖಡ್ಡಾಯವಾಗಿ ಭಾಗವಹಿಸುವಂತೆಯೂ ತಿಳಿಸಿದರು.
15 Btl pinchani (1)
ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ನೇರ ನೇಮಕಾತಿಯ ಮೂಲಕ ಆಯ್ಕೆಯಾಗಿರುವ  ಯುವ ಗ್ರಾಮಕರಣಿಕರು, ಸರಕಾರದ ಕೆಲಸವನ್ನು ತಮ್ಮ ಬದ್ದತೆಯೆಂದು ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಗ್ರಾಮಕರಣಿಕರಿಗೆ ಸಲಹೆ ನೀಡಿದ ಅವರು  ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಜಾತಿ-ಆದಾಯ ದೃಢೀಕರಣ ಪತ್ರ ಸೇರಿದಂತೆ ಪಡಿತರ ಚೀಟಿ ಮತ್ತು ಪಿಂಚಣಿ ಪತ್ರ ಪಡೆಯಲು ಬರುವ ವೇಳೆ ಅವರೊಂದಿಗೆ ತಕ್ಷಣ ಸ್ಪಂದಿಸಿದಾಗ ಕಂದಾಯ ಇಲಾಖೆ ಮತ್ತು ಸರ್ಕಾರಕ್ಕೂ ಹೆಚ್ಚಿನ ಗೌರವ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಗ್ರಾಮಕರಣಿಕರ ಸಮಸ್ಯೆಯೂ ತನಗೆ ಅರಿವಿದ್ದು ಕಂದಾಯ ಇಲಾಖೆ ಮತ್ತು ಸರ್ಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಗ್ರಾಮಕರಣಿಕರಿಗೆ ವಿಶೇಷ ಭತ್ತೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದರು.
ತಹಶೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿ, ತಾಲೂಕಿನಲ್ಲಿ ಶೇ.೮೦ ಮಂದಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗಿದ್ದು, ಶೇ.೭೦ರಷ್ಟು ಮಂದಿ ರೈತರ ಸಾಲ ಮನ್ನಾ ಅರ್ಜಿ ವಿಲೇವಾರಿ ಆಗಿದೆ. ೩೩ ಗ್ರಾಮಗಳನ್ನು ಪೋಡಿಮುಕ್ತ ಗ್ರಾಮವನ್ನಾಗಿ ಮಾಡಲಾಗಿದ್ದು, ಅಂತ್ಯ ಸಂಸ್ಕಾರ ಯೋಜನೆಯಡಿ ೮೩ಲಕ್ಷ ರೂ. ಮೊತ್ತದ ಅನುದಾನ ಅಗತ್ಯವಿದ್ದು, ಕಳೆದ ಒಂದೂವರೆ ವರ್ಷಗಳಿಂದ ಹಣ ವಿತರಣೆ ಸಾಧ್ಯವಾಗಿಲ್ಲ ಎಂದರು. ತಾಲೂಕಿನಲ್ಲಿ ಒಟ್ಟು ೩೫೧ ಮಂದಿ ಎಂಡೋಸಲ್ಫಾನ್ ಪೀಡಿತರಿಗೆ ಪಿಂಚಣಿ ನೀಡಲಾಗುತ್ತಿದ್ದು, ೭,೩೦೦ ಕಂದಾಯ ಅದಾಲತ್ ನಡೆಸಲಾಗಿದೆ. ಡಿಸಿ ಮನ್ನಾ ಜಮೀನಿಗೆ ಸಂಬಂಧಿಸಿದಂತೆ ಒಟ್ಟು ೭೧೦ ಅರ್ಜಿಗಳು ಬಂದಿದ್ದು, ಈ ಪೈಕಿ ಒಟ್ಟು ೪೨.೮ಎಕ್ರೆ ಜಮೀನಿಗೆ ಸಂಬಂಧಿಸಿದಂತೆ ೬೧೨ ಅರ್ಜಿ ವಿಲೇವಾರಿಗೆ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಕಳೆದ ಹಲವು ವರ್ಷಗಳ ಹಿಂದೆ ನಾಗರಿಕರಿಗೆ ದೊರೆತ ಮನೆ ನಿವೇಶನ ಮತ್ತು ಅಕ್ರಮ-ಸಕ್ರಮ ಜಮೀನಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಪಹಣಿಪತ್ರ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಿಂದ ವಿತರಣೆಯಾದ ೯೪ಸಿ ಮತ್ತು ೯೪ಸಿಸಿ ಹಕ್ಕುಪತ್ರಗಳಿಗೂ ಪಹಣಿಪತ್ರ ಸಿಕ್ಕಿಲ್ಲ. ಹೊಸ ಜಮೀನು ನೋಂದಣಿಯಾದ ಬಳಿಕ ಪಹಣಿಪತ್ರ ಸಿದ್ಧಪಡಿಸಲು ನೇರವಾಗಿ ಭೂಮಿ ಶಾಖೆಗೆ ದಾಖಲೆ ಪತ್ರ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ನೆಪದಲ್ಲಿ ಜನರ ನೆಮ್ಮದಿ ಕೆಡಿಸುತ್ತಿದೆ. ದಫನ ಭೂಮಿಗೆ ಕಾದಿರಿಸಿದ ಜಮೀನು ಹಸ್ತಾಂತರ ಆಗಿಲ್ಲ ಎಂದು ಸಭೆಯಲ್ಲಿ ದೂರುಗಳು ಕೇಳಿ ಬಂತು.
ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ಕುಮ್ಕಿ ಅರ್ಜಿಗಳಿಗೆ ಹಕ್ಕು ಪತ್ರ ನೀಡುವ, ಮಂಜೂರಾದ ಜಮೀನುಗಳಿಗೆ ನಿರಪೇಕ್ಷಣಾ ಪತ್ರವನ್ನು ತಹಶೀಲ್ದಾರರೇ ನೀಡುವ ಎನ್‌ಸಿಆರ್ ಜಮೀನು ದರ್ಖಾಸುಗಳನ್ನು ಪೋಡಿ ಮುಕ್ತ ಗ್ರಾಮಗಳಿಗೆ ಸೇರಿಸುವ ಬಗ್ಗೆ ತಾ.ಪಂ.ಸದಸ್ಯ ಉಸ್ಮಾನ್ ಕರೋಪಾಡಿ ಐವನ್ ಡಿಸೋಜಾ ಅವರಿಗೆ ಮನವಿ ಮೂಲಕ ಒತ್ತಾಯಿಸಿದರು. ಇದಕ್ಕೆ ವಕೀಲ ಹಾತೀಂ ಧ್ವನಿಗೂಡಿಸಿದರು. ರಾಮಚಂದ್ರ ಶೆಟ್ಟಿಗಾರ್ ಅರಳ ಮೊದಲಾದವರು ಕಂದಾಯ ಇಲಾಖೆಯ ವಿವಿಧ ಸಮಸ್ಯೆಯನ್ನು ಸಭೆಯಲ್ಲಿ ಗಮನ ಸೆಳೆದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಎಸ್.ಗಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ ಬೆಂಜನಪದವು ಮತ್ತಿತರರು ಹಾಜರಿದ್ದರು.
 ವೇದಿಕೆ ಹಂಚಿಕೊಂಡ ರೈ: 
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಅವರ ಪ್ರಗತಿಪರಿಶೀಲನೆಯ ಮಧ್ಯೆ ಸಭಾಂಗಣಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ವೇದಿಕೆಯನ್ನು ಹಂಚಿಕೊಂಡಿರುವುದು ವಿವಾದಕ್ಕೆ ಗುರಿಯಾಗಿದೆ. ಖುದ್ದು ಐವನ್ ಡಿಸೋಜಾ ಅವರೇ ಹೂ ಗುಚ್ಛ ನೀಡಿ ಮಾಜಿ ಸಚಿವರನ್ನು ವೇದಿಕೆಯಲ್ಲಿಯೇ ಸ್ವಾಗತಿಸಿದರು.ಈ ಸಂದರ್ಭ ಮಾಜಿ ಸಚಿವ ರೈ ಅವರು ಕೆಲವೊಂದು ಸಲಹೆಯನ್ನು ನೀಡಿದರು.
ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿ: ರಶ್ಮಿ 
ಸ್ವಚ್ಛತೆಯ ದೃಷ್ಟಿಯಿಂದ ಸಾರ್ವಜನಿಕರು ಕೂಡ ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿಕೊಂಡು ಕಾರ್ಯನಿರ್ವಹಿಸುವಂತೆ  ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಾಕೀತು ಮಾಡಿದರು.
ಶನಿವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ನಡೆದ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಅವರ ಪ್ರಗತಿ ಪರಿಶೀಲನೆಯ ವೇಳೆ ಸಾರ್ವಜನಿಕರ ಪ್ರಶ್ನೆಗೆ ಗರಂ ಆದ ತಹಶೀಲ್ದಾರ್ ತಾವು ತಮ್ಮ ಮನೆಯೊಳಗೆ ಇದೇ ರೀತಿ ಉಗುಳಿ ಹಾಕುತ್ತಿರಾ, ಶೌಚಾ ಮಾಡುತ್ತಿರಾ? ಎಂದು ಪ್ರಶ್ನಿಸಿದರು.
ಶೌಚಾಲಯ ಬಳಕೆಗೆ ಸಿಗುತ್ತಿಲ್ಲ, ಪ್ರತಿನಿತ್ಯ ಸರ್ವರ್ ಸರಿ ಇರುವುದಿಲ್ಲ, ಸ್ವಚ್ಛತೆ ಎಂಬುದೇ ಇಲ್ಲ ಎಂದು ಸಾರ್ವಜನಿಕರು ದೂರಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಶ್ಮಿ ಅವರು, ಮೊದಲು ಸರಕಾರಿ ಕಚೇರಿಗೆ ಗೌರವ ಸಲ್ಲಿಸಲು ಕಲಿಯಿರಿ, ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿ, ತಮ್ಮ ಪೂರ್ಣ ಶ್ರಮವನ್ನು ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದೇವೆ. ಕೆಟ್ಟು ಹೋಗಿರುವ ಲಿಫ್ಟ್ ಸಂಬಳದ ಹಣವನ್ನು ಹಾಕಿ ಸರಿಪಡಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ಮಿನಿವಿಧಾನಸೌಧಕ್ಕೆ ಪೈಂಟ್ ಕೊಡಿಸಲಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ. ಸಾರ್ವಜನಿಕರು ಕೂಡ ಮಿನಿ ವಿಧಾನಸೌಧದ ಸ್ವಚ್ಚತೆಗೆ ನಮ್ಮ ಸಹಕರಿಸುವಂತೆ ಕೋರಿದರು.ಈ ವೇಳೆ ಕಚೇರಿ ಸಿಬಂದಿಗಳು ಕರತಾಡನದ ಮೂಲಕ ತಹಶೀಲ್ದಾರರಿಗೆ ಬೆಂಬಲ ಸೂಚಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter