Published On: Sat, Jun 15th, 2019

ಬಂಟ್ವಾಳ ತಾ.ನಲ್ಲಿ ೩೮.೮೨ ಕೋ.ರೂ.ಸಾಲ ಮನ್ನಾ

ಬಂಟ್ವಾಳ,: ಕೇವಲ ಬಂಟ್ವಾಳ ತಾಲೂಕೊಂದರಲ್ಲೇ ೩೮.೮೨ ಕೋಟಿ ರೂ. ಸಾಲಮನ್ನಾ ಆಗಿದ್ದರೂ ಸರಕಾರ ಏನು ಮಾಡಿಲ್ಲ. ಸರಕಾರ ಸತ್ತಿದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದೇನು ಅಭಿವೃದ್ಧಿ ಕಾರ್ಯಗಳಲ್ಲವೇ? ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.
ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಆಡಳಿತ ಪಕ್ಷದಷ್ಟೇ ವಿರೋಧಪಕ್ಷಗಳಿಗೂ ಜವಬ್ದಾರಿ ಇದ್ದು ಸುಳ್ಳು ಆರೋಪ ಮಾಡಿ ಅಹೋರಾತ್ರಿ ಧರಣಿ ಮಾಡುವ ಬದಲು ವಿರೋಧ ಪಕ್ಷದವರೂ ಪ್ರಗತಿಪರಿಶೀಲನೆ ಮಾಡಿದಾಗ ಸತ್ಯಾಂಶ ಏನೆಂದು ಗೊತ್ತಾಗಲಿದೆ ಎಂದರು.
ಈ ಸರಕಾರ ಬಡವರ ಪರವಾಗಿದೆ. ಬಡವರಿಗಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಸರಕಾರ ಈಡೇರಿಸುತ್ತಿದೆ. ಕಂದಾಯ ಇಲಾಖೆ ಜನರ ಮನೆಬಾಗಿಲಿಗೆ ಹೋಗುವ ಕಾರ್ಯ ಮಾಡುತ್ತಿದೆ ಎಂದರು.
FB_IMG_1560604952830
ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಹಾಗೂ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದ ಬರ ಪರಿಹಾರದ ವಿಚಾರದಲ್ಲೂ ವಿಪಕ್ಷಗಳು ಜನರಿಗೆ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ. ಶಿವಮೊಗ್ಗದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಮೂಲಕ ರೈತರಿಗೆ ಸರಕಾರ ನೆರವಾಗಿದೆ ಎಂದರು.
ತಾಲೂಕಿನಲ್ಲಿ ೧೫ ಸಾವಿರ ಎಕರೆ ಭೂಮಿಯನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ೧೮೧ ಕೋಟಿ ರೂ. ರೈತರ ಸಾಲಮನ್ನಾ ಮಾಡಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಶೇ.೩೦ ಸಾಲ ಮನ್ನಾ ಮಾಡಲಾಗಿದೆ. ತಾಲೂಕಿನಲ್ಲಿ ೨೫ ಸಾವಿರ ಮಂದಿ ಪಿಂಚಣಿ ಪಡೆಯುತ್ತಿದ್ದಾರೆ, ೫೫,೦೧೮ ಬಿಪಿಎಲ್ ಕಾರ್ಡ್‌ದಾರರು, ೬,೦೮೪ ಅಂತ್ಯೋದಯ ಕಾರ್ಡ್‌ದಾರರು ಒಟ್ಟು ಸೇರಿ ೬೦ ಸಾವಿರಕ್ಕೂ ಮಿಕ್ಕಿ ಬಿಪಿಎಲ್ ಕಾರ್ಡ್‌ದಾರರೂ ಬಂಟ್ವಾಳ ತಾಲೂಕಿನಲ್ಲಿದ್ದು, ಕೇವಲ ೯ ಬಿಪಿಎಲ್ ಕಾರ್ಡ್ ಮಾತ್ರ ವಿತರಣೆಗೆ ಬಾಕಿ ಇದೆ. ತಾಲೂಕಿನಲ್ಲಿ ೧೮ ಸಾವಿರ ೯೪ಸಿ-ಸಿಸಿ ಅಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮ ಎಂದು ಐವನ್ ಮಾಹಿತಿ ನೀಡಿದರು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಮಮತಾಗಟ್ಟಿ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ ಬಿ.ಎಂ, ಸದಸ್ಯ ಉಸ್ಮಾನ್ ಕರೋಪಾಡಿ ಮತ್ತಿತರರು ಹಾಜರಿದ್ದರು.
ಎಸಿ ವಿರುದ್ಧ ವರದಿ:
ಪ್ರಗತಿ ಪರಿಶೀಲನಾ ಸಭೆಗೆ ಮಂಗಳೂರು ಸಹಾಯಕ ಆಯುಕ್ತರು ಪಾಲ್ಗೊಳ್ಳದಿರುವ ಬಗ್ಗೆ ಕಂದಾಯ ಸಚಿವರಿಗೆ ವರದಿ ನೀಡುವುದಾಗಿ ಐವನ್ ಡಿಸೋಜಾ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಮಾಜಿ ಸಚಿವ ಬಿ.ರಮಾನಾಥ ಸಹಾಯಕ ಆಯುಕ್ತರು ಸಭೆಯಲ್ಲಿ ಗೈರು ಹಾಜರಾಗಿರುವ ಬಗ್ಗೆ ಗಮನ ಸೆಳೆದಿದ್ದು, ಅವರಿಗೇನು ಕಂದಾಯ ಅದಾಲತ್‌ನಲ್ಲಿ ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು. ಬೇರೆ ಕಡೆಗಳಲ್ಲಿ ಸಭೆ ನಡೆಸಿದಾಗ ಅಲ್ಲಿಗೆ ಪುತ್ತೂರು ಆಯುಕ್ತರು ಬಂದಿದ್ದಾರೆ, ಆದರೆ, ಇಲ್ಲಿನ ಸಹಾಯಕ ಆಯುಕ್ತರು ಸಭೆಯನ್ನು ನಿರ್ಲಕ್ಷಿಸಿರುವುದು ನನ್ನ ಗಮನಕ್ಕೆ ಬಂದಿದ್ದು ಅವರ ವಿರುದ್ಧ ಸರಕಾರಕ್ಕೆ ವರದಿ ನೀಡುವುದಾಗಿ ಐವನ್ ಡಿಸೋಜಾ ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter