ಗೋಳಿದಡಿಗುತ್ತಿನ `ಪರ್ಬೊದ ಸಿರಿ’ ಸುತ್ತ ಒಂದು ಸುತ್ತು….ಅಬ್ಬಬ್ಬಾ ಎಲ್ಲವೂ ಅವಿಸ್ಮರಣೀಯ
ಪಾರಂಪರಿಕವಾಗಿ ತುಳುನಾಡಿನ ಮಣ್ಣಿನ ಸೊಗಡು ಬಣ್ಣಿಸುವ ವಿಶಿಷ್ಟ ಉತ್ಸವ `ಗುತ್ತುದ ವರ್ಸೊದ ಪರ್ಬ’. ಇದು ಕಳೆದ 10 ವರ್ಷಗಳಿಂದ ಜನವರಿ 19-20ರಂದು ನಡೆಯುತ್ತಿದ್ದು, ಈ ವರ್ಷ ಗೋಳಿದಡಿಗುತ್ತಿನ ಮನೆಯಲ್ಲಿ ಗುತ್ತುಗಳ ವಿಷಯದಲ್ಲೇ ಚಿಂತನ-ಮಂಥನ ಗೋಷ್ಠಿ ಜರುಗಲಿದೆ. ಪ್ರತಿ ವರ್ಷದಂತೆ ಈ ಬಾರಿ ಇಲ್ಲಿನ ಉತ್ಸವಕ್ಕೆ ಒಂದಷ್ಟು ಮೆರಗು ಹಾಗೂ ಹೊಸಭಾಷ್ಯ ನೀಡುವ ಉದ್ದೇಶದಿಂದ ಜ. 19ರಂದು `ಗುತ್ತು ನಿಮಗೆಷ್ಟು ಗೊತ್ತು..?’ ಎಂಬ ವಿಷಯದಲ್ಲಿ ಮೂರು ವಿಶೇಷ ಹಾಗೂ ಅಷ್ಟೇ ಗಂಭೀರವಾದ ಗೋಷ್ಠಿ ನಡೆಯಲಿದೆ.
ಗೋಷ್ಠಿಯಲ್ಲಿ ಗುತ್ತು, ಬೀಡು, ಬಾರಿಕೆ(ಬರ್ಕೆ) ಬಾವ, ಪರಡಿ ಮನೆತನಗಳ ಆಡಳಿತಾತ್ಮಕ ವ್ಯವಸ್ಥೆಯತ್ತ ಬೆಳಕು ಚೆಲ್ಲುವ ಪ್ರಯತ್ನ ನಡೆಯಲಿದೆ. ಮೊದಲ ದಿನ ವಿಚಾರಗೋಷ್ಠಿ, ನಿರ್ಣಯ ಸ್ವೀಕಾರವಾದರೆ, ಮರುದಿನ(ಜ.20) ಎಂದಿನಂತೆ ಧಾರ್ಮಿಕ ಹಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಶ್ರೀ ಮಹಾಕಾಲೇಶ್ವರ ದೇವಾಲಯ :
ಈ ಬಾರಿ `ಪರ್ಬೊದ ಸಿರಿ’ ವೇದಿಕೆಗೆ ಶ್ರೀ ಮಹಾಕಾಲೇಶ್ವರ ವೇದಿಕೆ ಹೆಸರನ್ನಿಡಲಾಗಿದೆ. ಇದೇ ಹೆಸರಿನ ದೇವಾಲಯ ಇಲ್ಲಿ ತಲೆ ಎತ್ತಲಿದೆ. ಇದಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಪೂಜ್ಯ ಬ್ರಹ್ಮಶ್ರೀ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನವಿದೆ. ಗೋಳಿದಡಿಗುತ್ತಿಗೆ ಅನತಿ ದೂರದಲ್ಲಿ ಫಲ್ಗುಣಿ ಹರಿಯುತ್ತಿದ್ದಾಳೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಫಲ್ಗುಣಿ ಪಾವನ ನದಿ ಹಾಗೂ ಗುತ್ತಿನ ಮನೆಯ ಮಧ್ಯದಲ್ಲಿ ಶ್ರೀ ಮಹಾಕಾಲೇಶ್ವರ ದೇವಾಲಯ ಆಸ್ತಿಕ ಬಂಧುಗಳ ಕೈಬೀಸಿ ಕರೆಯಲಿದೆ. ಪ್ರಕೃತಿದತ್ತವಾದ ನದಿ ತಟದಲ್ಲಿ ಭವ್ಯ ದೇವಾಲಯ ನಿರ್ಮಾಣ ಹಾಗೂ ಇತರ ಕೆಲಸಕಾರ್ಯಗಳು ನಡೆದಿವೆ.
ನದಿ ತಟದಲ್ಲಿ ಶ್ರೀ ಉಜ್ಜೈನಿ ತೀರ್ಥಕೆರೆ ಇದ್ದು, ಇದು ಈ ದೇವಾಲಯ ನಿರ್ಮಾಣಕ್ಕೆ ಆರಂಭದ ನೋಟವೂ, ಪುಣ್ಯದ ಕ್ಷೇತ್ರವಾಗುವುದಕ್ಕೆ ಸೂಚನೆಯೂ ಆಗಿದೆ. ಈ ಬಾರಿ ಇಲ್ಲೇ ಶ್ರೀ ವೈದ್ಯನಾಥ ವೇದಿಕೆ ನಿರ್ಮಾಣವಾಗಿದ್ದು, ಇದರಲ್ಲಿ `ಗುತ್ತು ನಿಮಗೆಷ್ಟು ಗೊತ್ತು..?’ ವಿಚಾರ ಸಂಕಿರಣ ಜರುಗಲಿದೆ. ನದಿ ಬದಿಯ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ವೇದಿಕೆ `ಗುತ್ತುಗಳ ನೈಜ ಆಶಯ’ ಭಿತ್ತರಿಸಲು ಸಜ್ಜುಗೊಂಡಂತಿದೆ. ಅಲ್ಲೇ ಪಕ್ಕದಲ್ಲಿ ಶ್ರೀ ರುದ್ರ ಹೋಮಕ್ಕೆ ಕುಂಡ ಸಿದ್ಧಗೊಂಡಿದೆ.
ಗುತ್ತಿನ ಪರ್ಬಕ್ಕೆ ಸ್ವಚ್ಚತಾ ಆಂದೋಲನದ ಮೆರಗು ನೀಡಲಾಗಿದೆ. ಎಲ್ಲೆಡೆ ಸ್ವಚ್ಚತೆಗೆ ಪ್ರಾಧಾನ್ಯತೆ ನೀಡಬೇಕೆನ್ನುವ ನಾಮಫಲಕಗಳು ಕಂಗೊಳಿಸುತ್ತಿದೆ. ಶೌಚಾಲಯಗಳಿಗೆ ಆದ್ಯತೆ ನೀಡಲಾಗಿದೆ. ಎಲ್ಲೂ ತ್ಯಾಜ್ಯ ಎಸೆಯದಂತೆ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಪರ್ಬಕ್ಕೆ ಆಗಮಿಸುವ ಎಲ್ಲರಿಗೂ ಕಲ್ಲಂಗಡಿ ಹಾಗೂ ಮಹಿಳೆಯರಿಗೆ ಬಳೆ ಲಭಿಸಲಿದ್ದು, ಈಗಾಗಲೇ ಲೋಡುಗಟ್ಟಲೆ ಕಲ್ಲಂಗಡಿ ಬಂದು ಸೇರಿದೆ. ಬಳೆಗಳ ಮೂಟೆಯೂ ಕಂಡು ಬಂದಿದೆ. ಇದು ಪರ್ಬದ ಹೆಚ್ಚುಗಾರಿಕೆ ಸಾಲಿನಲ್ಲಿ ನಿಲ್ಲುವ ಎರಡು ವಿಶೇಷತೆ.
ಪರ್ಬದ ಎರಡೂ ದಿನ ಪುರುಷರು ಮತ್ತು ಮಹಿಳೆಯರಿಗೆ ಆಯಾ ಕೆಟಗರಿಗೆ ತಕ್ಕಂತೆ ಶಕ್ತಿಕಲ್ಲು ಎತ್ತುವ ಸ್ಪರ್ಧೆ ಜರುಗಲಿದ್ದು, ಬಹುಮಾನವೂ ಇದೆ. ಈ ಬಾರಿ ಗುತ್ತಿನ ಮನೆಯ ಪಕ್ಕದಲ್ಲೇ ಸಂತೆಗಳಿಗೆ ಸ್ಟಾಲು ಸಿದ್ಧಪಡಿಸಲಾಗಿದೆ. ಮನೆಯ ಎದುರು ಕಂಬಳದ ಕೋಣ ನಿಮ್ಮ ಕಣ್ಣಿಗೆ ಬೀಳಲಿದೆ. ಅತ್ತ ಮಕ್ಕಳಿಗೆ ಪ್ರಿಯವಾದ ತೊಟ್ಟಲು ತಿರುಗುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಆಸಕ್ತರ ಹುಬ್ಬರಿಸುವಂತಹ ಹಳೆ ಕಾಲದ ಸೊತ್ತುಗಳು ನಿಮ್ಮನ್ನು ಆಕರ್ಷಿಸಲಿವೆ. ಸಂತೆ ಎಂದರೆ ಅಲ್ಲಿ ಮಾರಾಟ ಮಳಿಗೆ ಇರಬೇಕಲ್ಲವೇ ? ಹೌದು, ಅದಕ್ಕೆ ತಕ್ಕಂತೆ ಸಂತೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇರುತ್ತದೆ.
“ಇದು ನನ್ನದೊಂದು ಪ್ರಯತ್ನವಷ್ಟೇ. ಮುಂದಿನದ್ದು ದೈವ ನಡೆಸಿದಂತೆ ನಡೆಯುವವರಿಗೆ ಬಿಟ್ಟ ವಿಷಯ. ಧರ್ಮ-ದೈವಗಳ ಬಿಟ್ಟು ಇಲ್ಲಿ ಏನೂ ನಡೆಯದು. ಗುತ್ತು ಎಂದರೆ ಸಾಮಾಜಿಕ ನ್ಯಾಯಾಡಳಿತ ವ್ಯವಸ್ಥೆಯ ಕೇಂದ್ರವಾಗಿದೆ. ಅದನ್ನಿಲ್ಲಿಂದಲೇ ಪುನರಪಿ ಎತ್ತರಕ್ಕೆ ಕೊಂಡೊಯ್ಯುವುದು ಈ ಗೋಷ್ಠಿ ಉದ್ದೇಶವಾಗಿದೆ. ಟೀಕೆಗಳು ಬರಲಿ, ಅದಕ್ಕೆ ನನ್ನಲ್ಲಿ ಉತ್ತರವಿದೆ. ಟೀಕೆಯಿಂದ ಬೆಳೆಯಲು ಸಾಧ್ಯವಿದೆ. ಆದರೆ ಅದು ಸಕಾರಾತ್ಮಕವಾಗಿರಬೇಕು” ಎನ್ನುವುದು ಎರಡು ದಿನಗಳ `ಪರ್ಬೊದ ಸಿರಿ’ಯ ರೂವಾರಿ ಗೋಳಿದಡಿಗುತ್ತಿನ ಯಜಮಾನ, ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಕಳಕಳಿಯಾಗಿದೆ. ಹಾಗಾದರೆ, ಫಲ್ಗುಣಿ ಪ್ರಕೃತಿ ಸಿರಿಯ ಮಡಿಲಲ್ಲಿ ನಡೆಯಲಿರುವ ಎರಡು ದಿನಗಳ `ಪರ್ಬೊದ ಸಿರಿ’ ಆಸ್ವಾದಿಸಲು ಎಲ್ಲರೂ ಬರುತ್ತಿರಲ್ಲಾ…?
* ಧನಂಜಯ ಗುರುಪುರ