Published On: Sun, Dec 9th, 2018

ಕೋಮುಸೌಹಾರ್ದತೆಗೆ ಸಾಕ್ಷ್ಯಿಯಾದ ಕುಕ್ಕದಕಟ್ಟೆ ಹತ್ತುಸಮಸ್ತರ ಆಟ 50 ದಾಟಿ ಮುಂದರಿದ ಕಟೀಲಿನ `ಶ್ರೀದೇವಿ ಮಹಾತ್ಮೆ’

ಸುಮಾರು 50 ವರ್ಷಗಳ ಹಿಂದೆ ಗುರುಪುರ ಕುಕ್ಕುದಕಟ್ಟೆಯ ಕೆಲವು ಯುವ ಮನಸ್ಸುಗಳು ಒಂದೆಡೆ ಕಲೆತು, ಹತ್ತು ಸಮಸ್ತರಿಂದ ಹಣ ಸಂಗ್ರಹಿಸಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಮೇಳದ `ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಆಡಿಸಲು ಯೋಚಿಸಿತು. ಅಂತೆಯೇ ಇಂದಿಗೆ 54 ವರ್ಷಗಳ ಹಿಂದೆ ಕುಕ್ಕುದಕಟ್ಟೆಯಲ್ಲಿ ಕಟೀಲು ಮೇಳದ ಪ್ರಥಮ ಹತ್ತು ಸಮಸ್ತರ ಬಾಬ್ತು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.gur-dec-6-gurpur yakshagan-2
ಕುಕ್ಕುದಕಟ್ಟೆಯ ಹೋಟೆಲ್ ಮಾಲಕಿ ಗೌರಮ್ಮ ಮುಂದಾಳತ್ವದಲ್ಲಿ ಮೊದಲ ಎರಡು ವರ್ಷ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತ್ತು. ಬಳಿಕ ಆರ್ಥಿಕ ಅಡಚಣೆ ಕಾರಣ ಅವರು ಯಕ್ಷಗಾನ ಪ್ರದರ್ಶನ ಮುಂದಾಳತ್ವದಿಂದ ಹಿಂದೆ ಸರಿದರು. ಆ ಹೊತ್ತಿಗೆ ಸ್ಥಳೀಯ ಹೊೈಗೆ ಕೂಲಿ ಕಸುಬುದಾರರಾದ ಭಾಸ್ಕರ ಮುಂಡ, ಜಾರಪ್ಪ ಪೂಜಾರಿ, ಹಸನ್ ಬ್ಯಾರಿ, ಕೊರಗಪ್ಪ ಸಫಲಿಗ, ನಾರಾಯಣ ಸಫಲಿಗ, ಹರಿಯಪ್ಪ ಪೂಜಾರಿ, ದೇವಕಿ ಬಿ. ಶೆಟ್ಟಿ, ಕಾಂತಪ್ಪ ಮುಂಡ, ಜಲಜಾ, ವಾಮಯ್ಯ ಪೂಜಾರಿ ಜಲ್ಲಿಗುಡ್ಡೆ, ಅಚ್ಚು ಸಲ್ದಾನ, ದೇವು ಸಫಲಿಗ, ಪದ್ಮನಾಭ ಸಫಲಿಗ, ಕುಟ್ಟಿ ಸಫಲಿಗ, ವಿಶ್ವನಾಥ ಸಫಲಿಗ, ಜಯಶೀಲ ಶೆಟ್ಟಿ, ಸ್ಟ್ಯೇನಿ ಸಲ್ಡಾನ, ಮೊಹಮ್ಮದ್ ಬ್ಯಾರಿ, ಅಂಗಡಿ ಮಹಾಬಲ ಪೂಜಾರಿ ಮೊದಲಾದವರು ಆಟ ಮುಂದುವರಿಸಲು ತೀರ್ಮಾನಿಸಿ ಮೂರನೇ ವರ್ಷವೂ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಸಿಕೊಟ್ಟರು. ನಂತರ, ಕಳೆದ 54 ವರ್ಷಗಳಿಂದ ನಡೆದಿರುವುದು ಪವಾಡ, ಶ್ರೀದೇವಿಯ ಮಹಿಮೆಯೇ ಸರಿ…, ಅಡ್ಡಿ ಆತಂಕವಿಲ್ಲದೆ ಯಕ್ಷಗಾನ ನಡೆಯುತ್ತಲೇ ಇದೆ.

gur-dec-6-devara darshan
ಕುಕ್ಕುದಕಟ್ಟೆಯಲ್ಲಿ ಕಳೆದ 53 ವರ್ಷಗಳಿಂದ ನಿರಂತರ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಈ ಮಧ್ಯೆ ಎರಡು ಬಾರಿ ಪ್ರಸಂಗ(ಶ್ರೀದೇವಿ ಲಲಿತೋಪಾಖ್ಯಾನ…) ಬದಲಿಸಲಾಗಿತ್ತು.ಹಿಂದೆ ಒಂದೆರಡು ಸಾವಿರ ರೂಪಾಯಿಯಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಈಗ ಸಾವಿರಾರು ರೂ ಬೇಕಾಗುತ್ತದೆ. ಇಲ್ಲಿನ ಯಕ್ಷಗಾನಕ್ಕೆ ಪರದೇಶಗಳಲ್ಲಿರುವ ಸ್ಥಳೀಯ ಯಕ್ಷಾಭಿಮಾನಿಗಳು ಈಗಲೂ ದೇಣಿಗೆ ನೀಡುತ್ತಿದ್ದಾರೆ. ಹಿಂದೆಯೇ ಹೇಳಿದಂತೆ ಹಿಂದಿನಿಂದ ಇಂದಿನವರೆಗೂ ಇಲ್ಲಿನ ಯಕ್ಷಗಾನ ಕೋಮುಸಾಮರಸ್ಯಕ್ಕೆ ಸಾಕ್ಷ್ಯಿಯಂತಿದ್ದು, ಸಂಭ್ರಮ-ಸಡಗರದಿಂದ ನಡೆಯುತ್ತಿದೆ.
ಯಕ್ಷಗಾನ ನಡೆಯುವುದಕ್ಕಿಂತ ಒಂದು ವಾರ ಮುಂಚೆ ಕುಕ್ಕುದಕಟ್ಟೆ ಗದ್ದೆಯಲ್ಲಿ ರಂಗಸ್ಥಳ ನಿರ್ಮಿಸಲಾಗುತ್ತಿತ್ತು. ಬಳಿಕ ಯಕ್ಷಗಾನದ ದಿನದಂದು ಸ್ಥಳೀಯರೇ ಒಟ್ಟು ಸೇರಿ ಚಿಲಿಂಬಿಗುಡ್ಡೆಯಿಂದ ಅಡಕೆ ಮರ ತರುವುದು, ಬಣ್ಣದ ಕಾಗದದ ಅಲಂಕಾರ ಮಾಡುವುದು, ಕುರ್ಚಿ ತರುವುದು, ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು(ಲಕ್ಕಿಡಿಪ್ ಪ್ರಾಯೋಜಿಸುವುದು)…ಹೀಗೆ ಎಲ್ಲ ಕೆಲಸ ಮಾಡುತ್ತಿದ್ದರು. ಇದಕ್ಕೆ ಯಾರೂ ಒಂದು ನಯಾಪೈಸೆ ಕೂಲಿ ತೆಗೆದುಕೊಳ್ಳುತ್ತಿರಲಿಲ್ಲ. ಬೀಡಿ ಕಾರ್ಮಿಕರೂ ಈ ಆಟಕ್ಕೆ ತಮ್ಮಿಂದಾದ ಕಿರು ದೇಣಿಗೆ ನೀಡುತ್ತಿದ್ದರು.
ಕಟೀಲು ದೇವಳದಲ್ಲಿ ಒಂದು ತಿರುಗಾಟದ ಮೇಳವಿದ್ದ ಕಾಲವದು. ಪ್ರತಿ ವರ್ಷ ಗೆಜ್ಜೆ ಕಟ್ಟಿ ಮೇಳ ಆರಂಭವಾದ ಪ್ರಥಮ ವಾರದ ಪ್ರಥಮ ಶನಿವಾರ ಗುರುಪುರ ಕುಕ್ಕದಕಟ್ಟೆಯಲ್ಲಿ ಶ್ರೀದೇವಿ ಮಹಾತ್ಮೆ ವಾಡಿಕೆಯಂತೆ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಈಗ ಒಂದು ವಾರ ತಡವಾಗಿಯಾದರೂ ಶನಿವಾರದಂದೇ ಇಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿನ ಆಟಕ್ಕೆ ಸುತ್ತಲ ನಾಲ್ಕೈದು ಊರುಗಳ ಜನರು ಬರುತ್ತಿದ್ದರು. ಗುರುಪುರಕ್ಕೆ ಒಂದು ಜಾತ್ರೆಯಂತೆ ಈ ಯಕ್ಷಗಾನ ನಡೆಯುತ್ತಿತ್ತು. ಆಗ ಈ ಊರಲ್ಲಿ ಒಂದೆರಡು ಯಕ್ಷಗಾನ ಪ್ರದರ್ಶನಗೊಳ್ಳುತ್ತಿತ್ತು. ಕೆಲವು ಕಡೆ ಇಂತಹ ವಾರ್ಷಿಕ ಹತ್ತುಸಮಸ್ತರ ಯಕ್ಷಗಾನಗಳು ನಾಲ್ಕೈದು ವರ್ಷಕ್ಕೆ ಸ್ಥಗಿತಗೊಂಡಿರುವುದುಂಟು. ಆದರೆ ಕುಕ್ಕುದಕಟ್ಟೆಯಲ್ಲಿ ಇಂದಿಗೂ ಕಟೀಲು ಮೇಳದ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ.
ಈಗ ಯಕ್ಷಗಾನದಲ್ಲಿ ಕೆಲವಾರು ಬದಲಾವಣೆಗಳಾಗಿವೆ. ಹಿಂದೆ ಕುಕ್ಕುದಕಟ್ಟೆಯಲ್ಲಿ ನಡೆಯುತ್ತಿದ್ದ ಶ್ರೀ ದೇವಿ ಮಹಾತ್ಮೆಗೆ ಬೆಳಿಗ್ಗಿನವರೆಗೆ 500-600 ಮೇಲ್ಪಟ್ಟು ಪ್ರೇಕ್ಷಕರಿರುತ್ತಿದ್ದರೆ, ಈಗ ಈ ಸಂಖ್ಯೆ ತೀರಾ ಕುಸಿದಿದೆ. ಕೆಲವು ವರ್ಷದಿಂದ ಸಾರ್ವಜನಿಕ ಅನ್ನದಾನ ನಡೆಯುತ್ತಿದೆ. ಹಿಂದೆ ಕೆಲವು ಬಾರಿ ಮಳೆ ಬಂದಾಗ ಆಟ ಸ್ಥಗಿತಗೊಂಡಿದ್ದು, ಮಳೆ ಬಿಟ್ಟಾಗ ಆಟ ಪ್ರದರ್ಶನಗೊಂಡಿರುವುದುಂಟು. ಅದೊಂದು ಕಾಲವಿತ್ತು, ಮಳೆ ನಿಂತ ಮೇಲೆ ಯಕ್ಷಗಾನ ನೋಡಬೇಕೆಂದು ಪ್ರೇಕ್ಷಕರು ಕಾಯತ್ತಿದ್ದರು. ಆದರೆ ಈ ಮೋಡ ಕವಿದರೆ ಜನ ಮನೆಯಲ್ಲೇ ಮಲಗಿ ಬಿಡುತ್ತಾರೆ. ಅಂದರೆ, ಈಗ ಕಾಲ ಬದಲಾದಂತೆ ಕಲೆ-ಕಲಾವಿದರೂ ಬದಲಾಗಿದ್ದಾರೆ ಮತ್ತು ಪ್ರೇಕ್ಷಕ ವರ್ಗದ ಮನಸ್ಥಿತಿಯೂ ಬದಲಾಗಿದೆ. ಅಂದಿನ `ಸೋಜಿ’, `ಸುಕುನಪ್ಪ’, ಬೇಯಿಸಿದ ಗೆಣಸು ಈಗ ನೆನಪು ಮಾತ್ರ !

“ಆಟಕ್ಕಾಗಿ ಒಂದು ತಿಂಗಳ ಮುಂಚೆಯೇ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದೆವು. ಆಗ ವರ್ಷದಿಂದ ವರ್ಷಕ್ಕೆ ಹಣ ಉಳಿಯುತ್ತಿತ್ತು. ಬಳಿಕ ಖರ್ಚು ಜಾಸ್ತಿಯಾಗಿ ಉಳಿತಾಯ ಕಡಿಮೆಯಾಗುತ್ತ ಬಂದರೂ, ನಾವೆಲ್ಲ ಹಣ ಸೇರಿಸಿ ಆಟ ಮುಂದುವರಿಸಿದ್ದೇವೆ. ನಮ್ಮೊಂದಿಗೆ ಎಲ್ಲ ಜಾತಿಯವರೂ ಕೈಜೋಡಿಸಿದ್ದರು. ಇಂದಿಗೂ ಆ ರಿವಾಜು ಉಳಿದುಕೊಂಡಿದೆ ಎಂಬುದು ಸಂತಸದ ಸಂಗತಿ” ಎಂದು ಕುಕ್ಕದಕಟ್ಟೆ ನಿವಾಸಿ ಭಾಸ್ಕರ ಮುಂಡ ಅಂದಿನಿಂದ ಇಂದಿನವರೆಗಿನ ಆಟ ವೈಖರಿ ವಿವರಿಸುತ್ತಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter