Published On: Sun, Dec 9th, 2018

ಕಂಬಳ ಕ್ರೀಡಾ ಕ್ಷೇತ್ರದಲ್ಲಿ ಚಿರಪರಿಚಿತ ಸಾಧಕ ವಯೋವೃದ್ಧ ಕೆದುಬರಿ ಗುರುವಪ್ಪ ಪೂಜಾರಿ

ಕಂಬಳ ಕ್ರೀಡೆಗೆ ಆವರಿಸಿದ್ದ ಕಾನೂನು ಸುಳಿ ತಿಳಿಗೊಂಡಿದ್ದು,  ಮತ್ತೆ ಕಂಬಳ ಕರೆಗಳಲ್ಲಿ ಕೋಣಗಳು ಓಡಲಿವೆ. ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ಹೆಸರು ಮಾಡಿರುವ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯವರು ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ತಿಳಿಸುವ ಒಂದು ಚಿಕ್ಕ ಪ್ರಯತ್ನ ಇದಾಗಿದೆ.gur-nov-22-guruvappa
ಗುರುಪುರ ಅಥವಾ ಕಂಬಳ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಗುರುವಪ್ಪರು ಚಿರಪರಿಚಿತ ವ್ಯಕ್ತಿ. ಏಳೆಂಟು ವರ್ಷದವನಾಗಿದ್ದಾಗಲೇ ಹಳ್ಳಿಯಲ್ಲಿ ಕಂಬಳ ಅಭಿರುಚಿ ಹಚ್ಚಿಕೊಂಡಿರುವ 70 ದಾಟಿರುವ ಇವರು 50 ವರ್ಷದಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ದೇವಪ್ಪ ಪೂಜಾರಿ-ಚೆನ್ನಮ್ಮ ದಂಪತಿಯ ಪುತ್ರರಾಗಿರುವ ಇವರಿಗೆ ನಾಲ್ಕು ಮಕ್ಕಳಿದ್ದು, ಪತ್ನಿ ಯಶೋದಾ ಪತಿಯ ಆಸಕ್ತಿ ಪೋಷಿಸುತ್ತಿದ್ದಾರೆ.

gur-nov-22-kona-1
ಒಂದೆರಡು ಎಕ್ರೆ ಜಾಗದಲ್ಲಿ ಭತ್ತದ ಕೃಷಿ ಮಾಡುತ್ತಿರುವ ಇವರು ಕಂಬಳದಂತೆ ಸಾಂಪ್ರದಾಯಿಕ ಕೃಷಿಯಲ್ಲೂ ಅಪಾರ ಆಸಕ್ತಿ ಹೊಂದಿದವರು. ಇವರ ಕೊಟ್ಟಿಗೆಯಲ್ಲಿ ಹಿಂದೆ ಎರಡು ಜೋಡಿ ಕಂಬಳದ ಕೋಣಗಳಿದ್ದಿದ್ದರೆ ಈಗ ಒಂದು ಜೋಡಿ ಕೋಣವಿದೆ. ಪ್ರತಿದಿನ ಮುಂಜಾನೆ ಕೋಣಗಳಿಗೆ ಆಹಾರ ನೀಡುವುದರೊಂದಿಗೆ ಇವರ ದಿನಚರಿ ಆರಂಭವಾಗುತ್ತದೆ.

gur-nov-22-hagga-1
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ಬಹುತೇಕ ಎಲ್ಲ ಕಂಬಳಗಳಲ್ಲಿ ಕೆದುಬರಿ ಗುರುವಪ್ಪರ ಹಾಜರಾತಿ ಇರುತ್ತದೆ. ಇವರ ಕೋಣಗಳು ಕಂಬಳ ಕ್ರೀಡೆಯ ಎಲ್ಲ ವರ್ಗಗಳ ಓಟಗಳಲ್ಲಿ(ಕನೆ ಹಲಗೆ, ಅಡ್ಡ ಹಲಗೆ, ಹಿರಿ-ಹಿರಿ ಹಗ್ಗ, ನೇಗಿಲು..) ಪ್ರಶಸ್ತಿ ಪಡೆದಿವೆ. ಮನೆ ಗೋಡೆಯಲ್ಲಿ ತೂಗುತ್ತಿರುವ ನೂರಾರು ಪ್ರಶಸ್ತಿ ಮತ್ತು ಸನ್ಮಾನ ಫಲಕಗಳು ಇವರ ಸಾಧನೆಯ ಬಲ್ಮೆ ಸಾರುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ, ಗುರುಪುರ ಯುವಕ ಸಂಘ, ಪಿಲಿಕುಲ, ಪುತ್ತೂರು, ಬಾರಾಡಿ, ಮೂಡಬಿದ್ರೆ ಕಂಬಳಗಳಲ್ಲಿ, ಜೇಸಿ ಫ್ರೆಂಡ್ಸ್…ಹೀಗೆ ಹಲವು ಕಡೆಗಳಲ್ಲಿ ಸನ್ಮಾನ ಪಡೆದುಕೊಂಡಿದ್ದಾರೆ.

gur-nov-22-prashasthi-3
ಹಿಂದೆ ತನ್ನ ಕೋಣಗಳನ್ನು ಇವರೇ ಓಡಿಸುವಷ್ಟು ಸಾಮಥ್ರ್ಯದ ಜಾಕಿಯೂ ಆಗಿದ್ದರು. ವಯಸ್ಸಾದಂತೆ ಇವರ ಕೋಣ ಬೇರೆಯವರು ಓಡಿಸುತ್ತಾರೆ. ಕಂಬಳ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು, ಈಗಾಗಲೇ ಕೆಲವು ಕಂಬಳ ಅಧ್ಯಯನಕಾರರಿಗೆ ಮಾಹಿತಿ ನೀಡಿದ್ದುಂಟು.ಕೋಣಗಳ ದೇಹಪ್ರಕೃತಿಯಂತೆ ಅವುಗಳಿಗೆ ಒಂದೆರಡು ಹೊಡೆದರೆ ಕಾರ್ಯಮಗ್ನವಾಗುತ್ತವೆ. ಆದರೆ ಓಟದಲ್ಲಿ ಪಳಗಿದ ಕೋಣಗಳಿಗೆ ಪದೇಪದೇ ಹೊಡೆಯುವುದು ಸರಿಯಲ್ಲ. ಜಾಕಿಯ ಬೊಬ್ಬೆಗೆ ಕೋಣಗಳು ಓಡುವುದುಂಟು ಎಂದು ಗುರುವಪ್ಪ ಹೇಳುತ್ತಾರೆ.

gur-nov-22-kambala parikara
ಕಂಬಳದಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ ಎನ್ನುವ ಗುರುವಪ್ಪ, “ಹಿಂದೆ ಒಂದು ದಿನಕ್ಕೆ ಸೀಮಿತವಾಗಿದ್ದ ಕಂಬಳ ಈಗ ಎರಡ್ಮೂರು ದಿನಗಳವರೆಗೂ ಮುಂದುವರಿಯುತ್ತವೆ. ಆದರೆ ಈ ಬಾರಿ ಇದು 24 ತಾಸಿನೊಳಗೆ ಮುಗಿಯಲಿದೆ. ಹಿಂದಿನ ಕಂಬಳಕ್ಕೆ ಕೃಷಿ ಹಿನ್ನೆಲೆ ಇದ್ದಿದ್ದರೆ, ಈಗಿನ ಕಂಬಳಗಳು ವೈಭವೋಪೇತವಾಗಿ ನಡೆಯುತ್ತವೆಂದು ಹೇಳುತ್ತಾರೆ ಗುರುವಪ್ಪ.
ನ. 24ರಿಂದ ಆರಂಭವಾಗಲಿರುವ ಈ ಸೀಸನಿನ ಕಂಬಳಗಳಿಗೆ ತನ್ನ `ಕಾಟಿ’ ಕೋಣಗಳ ಅಣಿಗೊಳಿಸಿರುವ ಇವರು, ದೇಹಪ್ರಕೃತಿ ಸಹಕರಿಸಿದಷ್ಟು ವರ್ಷ ಕಂಬಳ ಕ್ರೀಡೆಯಲ್ಲಿ ಮುಂದುವರಿಯುವೆ ಎನ್ನುತ್ತಾರೆ. ಕೊನೆಯದಾಗಿ, ಜನಪದ ಕ್ರೀಡೆ ಕಂಬಳದ ಮಾಹಿತಿ ಭಂಡಾರವಾಗಿರುವ ಇವರನ್ನು ರಾಜ್ಯ ಜನಪದ ಸಾಹಿತ್ಯ ಅಕಾಡೆಮಿ ಗುರುತಿಸುವಂತಾಗಲಿ.

*ಧನಂಜಯ ಗುರ್ಪುರ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter