Published On: Thu, Nov 29th, 2018

ನರಹರಿ ಪರ್ವತ ಸದಾಶಿವ ದೇವಸ್ಥಾನ: ರೂ 5ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಆರಂಭ ಭರದಿಂದ ಸಾಗುತ್ತಿದೆ ರಸ್ತೆ ನಿರ್ಮಾಣ ಕಾಮಗಾರಿ

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 1 ಸಾವಿರ ಅಡಿ ಎತ್ತರದಲ್ಲಿರುವ ಪ್ರಕೃತಿ ರಮಣೀಯ ಕ್ಷೇತ್ರ ಮತ್ತು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಬಂಟ್ವಾಳ ತಾಲ್ಲೂಕಿನ ನರಹರಿ ಪರ್ವತದಲ್ಲಿ ಹರಿ ರೂಪದ ಶ್ರೀಕೃಷ್ಣ ಮತ್ತು ನರರೂಪದ ಪಾಂಡವರು ದೇವಾಲಯ ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ.24btl-Prakruthi
ಮಹಾಭಾರತ ಯುದ್ಧ ಮುಗಿದ ಬಳಿಕ ಪಾಂಡವರು ಶಾಪ ವಿಮೋಚನೆಗಾಗಿ ದಕ್ಷಿಣ ಭಾಗದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಅರ್ಜುನನು ಶಿಲೆಯಿಂದ ಶಿವಲಿಂಗ ನಿರ್ಮಿಸಿದನು. ಹರಿಯೊಂದಿಗೆ ಪಾಂಡವರು (ನರರು) ಹರನ (ಸದಾಶಿವ) ಪೂಜೆ ಮಾಡಿದುದರಿಂದ ಈ ಕ್ಷೇತ್ರಕ್ಕೆ ‘ನರಹರಿ ಸದಾಶಿವ ಕ್ಷೇತ್ರ’ ಎಂ¨ ಹೆಸರು ಬಂದಿದೆ ಎಂದು ಹೇಳಲಾಗಿದೆ. ಇಲ್ಲಿನ ಬಂಡೆಯಲ್ಲಿ ಅವರು ನಿರ್ಮಿಸಿದ್ದ ಶಂಖ, ಚಕ್ರ, ಗಧಾ, ಪದ್ಮ ಎಂಬ ಕಿರು ತೀರ್ಥ ಕೆರೆಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ಸಂತುಷ್ಟರಾಗುತ್ತಿದ್ದಾರೆ.

24btl-Chakra Thirtha
ಕಳೆದ 1988ರಲ್ಲಿ ಇಲ್ಲಿನ ಸುತ್ತಮುತ್ತಲಿನ ಭಕ್ತರು ಒಟ್ಟು ಸೇರಿ ನರಹರಿ ದೇಗುಲಕ್ಕೆ ಪುನಶ್ಚೇತನ ನೀಡಲು ತೀರ್ಮಾನಿಸಿ, ಡಾ.ಕಲ್ಲಾಜೆ ಭಾಸ್ಕರ ಮಾರ್ಲ ನೇತೃತ್ವದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ರಚಿಸಿದ್ದು, ಹಂತ ಹಂತವಾಗಿ ದೇವಳ ಅಭಿವೃದ್ಧಿ ಕಂಡಿದೆ. ರೋಟರಿ ಕ್ಲಬ್ ಮತ್ತಿತರ ಸಂಘದ ಸಂಸ್ಥೆಗಳ ನೆರವಿನಿಂದ ಮೆಟ್ಟಿಲು ರಚನೆ, ಪ್ರಕೃತಿ ವೀಕ್ಷಣೆ ಬೆಂಚು ಅಳವಡಿಕೆ ಮತ್ತಿತರ ಕಾಮಗಾರಿ ನಡೆದಿದೆ.24btl-Narahari Templ
ಇದೀಗ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಡಾ.ಪ್ರಶಾಂತ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಡಾ.ಆತ್ಮರಂಜನ್ ರೈ, ಉತ್ಸವ ಸಮಿತಿ ಅಧ್ಯಕ್ಷರಾಗಿ ಎ.ರುಕ್ಮಯ ಪೂಜಾರಿ, ಪ್ರಧಾನ ಅರ್ಚಕರಾಗಿ ಪರಮೇಶ್ವರ ಮಯ್ಯ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಶ್ರಮದಾನ ನಡೆಸುತ್ತಿದ್ದಾರೆ. ಈ ಹಿಂದೆ 9 ಗ್ರಾಮಗಳಿಗೆ ಸಂಬಂಧಪಟ್ಟಂತೆ ಗುರುತಿಸಿಕೊಂಡಿದ್ದ ಈ ದೇವಾಲಯದ ಪೂರ್ವ ಭಾಗದಲ್ಲಿ ‘ಸುಳ್ಳಮಲೆ-ಬಳ್ಳಮಲೆ, ಪಶ್ಚಿಮ ಭಾಗದಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಹರಿಯುತ್ತಿರುವ ವಿಹಂಗ ನೋಟ ಕಾಣುತ್ತಿದೆ. ಇನ್ನೊಂದೆಡೆ ಉತ್ತರ ಭಾಗದಲ್ಲಿ ಮಂಗಳೂರು-ಬೆಂಗಳೂರು ರೈಲ್ವೆ ಹಳಿ ಮತ್ತು ದಕ್ಷಿಣ ಭಾಗದಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎದ್ದು ಕಾಣುತ್ತಿದೆ.24btl-Daivivana
ಕರ್ಕಾಟಕ (ಆಟಿ) ಸಿಂಹ (ಸೋಣ)ಮಾಸದ ಅಮಾವಾಸ್ಯೆಗಳಲ್ಲಿ ಇಲ್ಲಿನ ತೀರ್ಥಸ್ನಾನ ಪ್ರಸಿದ್ಧಿಯಾಗಿದ್ದು, ಪ್ರತೀ ವರ್ಷ ಕಾರ್ತಿಕ ಮಾಸದ ಕಡೇ ಸೋಮವಾರ ದೀಪೋತ್ಸವ ಮತ್ತು ತೀರ್ಥಸ್ನಾನ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ಒಂದು ಸೋಮವಾರ ಭಕ್ತರು ದೇವರಿಗೆ ಸೀಯಾಳಾಭಿಷೇಕ ಸೇವೆ ಸಲ್ಲಿಸುವುದು ರೂಢಿಯಾಗಿ ಬೆಳೆದು ಬಂದಿದೆ. ಭಕ್ತರು ಉಬ್ಬಸ, ಬಂಜೆತನ ನಿವಾರಣೆಗೆ ಶಿವನಿಗೆ ತೆಂಗಿನ ನಾರಿನ ಹಗ್ಗ, ತೊಟ್ಟಿಲು ಮಗು ಸೇವೆ ಸಮರ್ಪಿಸುತ್ತಿರುವುದು ಇಲ್ಲಿನ ವಿಶೇಷತೆ.24btl-Sadashiva God
ಜೀರ್ಣೋದ್ಧಾರ:
ಕಳೆದ 27 ವರ್ಷಗಳಿಂದ ಬ್ರಹ್ಮಕಲಶೋತ್ಸವ ಕಾಣದ ದೇವಳವನ್ನು ಜೀರ್ಣೋದ್ಧಾರಗೊಳಿಸುವ ಬಗ್ಗೆ ಹಲವು ಬಾರಿ ಭಕ್ತರು ಒಟ್ಟು ಸೇರಿ ಚಿಂತನೆ ನಡೆಸಿದ್ದು, ಕಳೆದ 3ವರ್ಷಗಳಿಂದ ಇದಕ್ಕೆ ವೇಗ ದೊರೆತಿದೆ.
ರೂ 8ಕೋಟಿ ವೆಚ್ಚದಲ್ಲಿ ಸುತ್ತುಪೌಳಿ, ಶಿಲಾಮಯ ಗರ್ಭಗುಡಿ, ಶ್ರೀ ಗಣಪತಿ ದೇವರ ಗುಡಿ, ರಾಜಗೋಪುರ, ಸಭಾಗೃಹ, ಶಿವನ ವಿಗ್ರಹ ರಚನೆ ಬಗ್ಗೆ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ ಮಾರ್ಗದರ್ಶನದಲ್ಲಿ ನೀಲನಕ್ಷೆ ಸಿದ್ಧಗೊಳಿಸಿ, ಈಗಾಗಲೇ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ದೊರೆತಿದೆ. ಇಲ್ಲಿನ ಗಣಪತಿ ಮತ್ತು ನಾಗದೇವರ ವಿಗ್ರಹವನ್ನು ಬಾಲಾಲಯದಲ್ಲಿ ಇರಿಸಲಾಗಿದ್ದು, ಸುತ್ತುಗೋಪುರಕ್ಕೆ ಪಂಚಾಂಗ ನಿರ್ಮಾಣ ಕಾಮಗಾರಿ ನಡೆದಿದೆ.
ಇದೀಗ ರೂ 2ಕೋಟಿ ವೆಚ್ಚದಲ್ಲಿ ದೇವಸ್ಥಾನದ ಗೋಪುರ ತನಕ ರಸ್ತೆ ನಿರ್ಮಿಸಿ ಎತ್ತರ ತಗ್ಗಿಸಲು ರಸ್ತೆಯುದ್ದಕ್ಕೂ ಮಣ್ಣು ತುಂಬಿಸಿ ವಿಸ್ತರಣೆಗೊಳಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ.

24btl-Schetch
ನಿರ್ವಹಣೆಗೆ ಕಾಯುತ್ತಿದೆ:
ಪ್ರವಾಸೋದ್ಯಮ ಇಲಾಖೆ ವತಿಯಿಂದ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ, ಕಳೆದ 10 ವರ್ಷಗಳ ಹಿಂದೆ ಅರ್ಚಕರಿಗಾಗಿ ದಾನಿಗಳು ನಿರ್ಮಿಸಿ ಕೊಟ್ಟಿರುವ ಎರಡು ವಸತಿಗೃಹ, ಕಳೆದ ವರ್ಷ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾದ ದೈವೀವನ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ದೇವಳ ಸಂಪೂರ್ಣ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಬಳಿಕ ಇವೆಲ್ಲವೂ ಸರಿಯಾಗಲಿದೆ ಎಂಬುದು ಇಲ್ಲಿನ ಭಕ್ತರ ಅನಿಸಿಕೆ.24btl-Archaka Vasathi
ಡಿ.2ರಂದು ದೀಪೋತ್ಸವ:
ಪ್ರತೀ ವರ್ಷದಂತೆ ಈ ಬಾರಿಯೂ ಡಿ.2ರಂದುರಾತ್ರಿ ದೀಪೋತ್ಸವ ಮತ್ತು 3ರಂದು ಬೆಳಿಗ್ಗೆ ತೀರ್ಥಸ್ನಾನ ಹಾಗೂ ಮಧ್ಯಾಹ್ನ ದೇವರ ಬಲಿ ಉತ್ಸವದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ತಿಳಿಸಿದ್ದಾರೆ.

-ಮೋಹನ್ ಕೆ.ಶ್ರೀಯಾನ್

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter