ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ಗೆ ಕೋಡಿಮರದ ಆಗಮನ
ಕಾಸರಗೋಡು: ಪುನರುತ್ಥಾನ ಹಾದಿಯಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಮತ್ತೊಂದು ಕಾರ್ಣಿಕದ ಐತಿಹಾಸಿಕ ಮೈಲುಗಲ್ಲು ಸ್ಥಾಪನೆಯಾಗಲಿದೆ. ಕ್ಷೇತ್ರದ ಆದಿ ದೈವ ಧೂಮಾವತಿಯ ಸಾನಿಧ್ಯಕ್ಕೆ ಕೊಡಿಮರ ಸಮರ್ಪಣಾ ಕಾರ್ಯ ಶೀಘ್ರದಲ್ಲೇ ನಡೆಯಲಿದೆ.
ಒಂದೇ ತಿರುಳಿನಲ್ಲಿ ನಾಲ್ಕು ಪವಿತ್ರ ಮೂರ್ತಿಗಳು ರಚನೆಯಾಗಲಿರುವ ಬಿಂಬ ಮರವು ಕ್ಷೇತ್ರಕ್ಕೆ ಆಗಮನವಾಗಲಿದೆ. ಏಕ ಕಾಲದಲ್ಲಿ ಇವೆರಡು ಮರಗಳನ್ನು ಭವ್ಯ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ತರಲು ಈಗಾಗಲೇ ನಿರ್ಧರಿಸಲಾಗಿದೆ. ದೇವರ ಸಂಕಲ್ಪದಂತೆ ಈ ಕಾರ್ಯವನ್ನು ನಡೆಸಲು ಭಕ್ತರು ಮುಂದಾಗಿದ್ದಾರೆ. ಈ ಮೂಲಕ ಗೆಜ್ಜೆಗಿರಿ ಪುನರುತ್ಥಾನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಬರಲಿದೆ.
ಗೆಜ್ಜೆಗಿರಿಯಲ್ಲಿ ನಡೆದ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಸಭೆಯಲ್ಲಿ ಗುರುವಾರ ನ. 22ರಂದು ಈ ಬಗ್ಗೆ ನಿರ್ಧರಿಸಲಾಯಿತು.
ಸಮಿತಿಯ ಪ್ರಭಾರ ಅಧ್ಯಕ್ಷ ಜಯಂತ ನಡುಬೈಲ್ ಅಧ್ಯಕ್ಷತೆಯಲ್ಲಿ, ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿಯವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.
ರಾಜಶೇಖರ ಕೋಟ್ಯಾನ್ ಸೂಕ್ತ ಸಲಹೆ ನೀಡಿದರು.
ಈಗಾಗಲೇ ಕ್ಷೇತ್ರ ಪುನರುತ್ಥಾನ ಕಾರ್ಯ ಚುರುಕುಗೊಂಡಿದ್ದು, ಸಮಸ್ತ ವಿಶ್ವ ಬಿಲ್ಲವ ಸಮುದಾಯ ಈ ಕಾರ್ಯದಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಇನ್ನು ಉಳಿದ ಕ್ಷೇತ್ರ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ನಿರ್ಧರಿಸಲಾಯಿತು. ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಮತ್ತು ಅವಳಿ ವೀರರು ಕೋಟಿ ಚೆನ್ನಯರು ಹೀಗೆ ನಾಲ್ಕು ಮೂರ್ತಿಗಳನ್ನು ಕೂಡಾ ಒಂದೇ ಮರದಲ್ಲಿ ಕೆತ್ತುವಂಥ ಮಹಾ ಯೋಗವನ್ನು ಆ ಶಕ್ತಿಗಳು ಒದಗಿಸಿದ್ದಾರೆ. ಆದಿ ದೈವ ಧೂಮಾವತಿ ಸ್ಥಾನಕ್ಕೆ ಭವ್ಯ ಕೊಡಿಮರ ಒದಗಿ ಬರುತ್ತಿದೆ. ಇವುಗಳ ಮೆರವಣಿಗೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ವಿನಂತಿಸಲಾಯಿತು. ಮರ ಮೆರವಣಿಗೆಯ ದಿನಾಂಕವನ್ನು ಕೆಲವೇ ದಿನಗಳಲ್ಲಿ ಘೋಷಿಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ತಕ್ಷರೂ, ಖ್ಯಾತ ಚಿತ್ರನಟರೂ ಆದ ರಾಜಶೇಖರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ , ಸಮಿತಿಯ ಪ್ರಮುಖರಾದ ಶಿವರಾಮ್ ನೀರ್ಚಾಲ್, ಚಂದ್ರಶೇಖರ್ ಉಚ್ಚಿಲ, ಸಂತೋಷ್ ಕುಮಾರ್, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಪಾವೂರು, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೆಡೆಂಜಿ ಗುತ್ತು, ಧೂಮಾವತಿ ಕರಸೇವಾ ಸಮಿತಿಯ ಅಧ್ಯಕ್ಷರಾದ ಉದಯ ಕೋಲಾಡಿ, ಪುತ್ತೂರು ಯುವವಾಹಿನಿ ಅಧ್ಯಕ್ಷರಾದ ಹರೀಶ್ ಶಾಂತಿ, ಪ್ರಮುಖರಾದ ರಾಜೇಂದ್ರ ಚಿಲಿಂಬಿ, ಗಣೇಶ್ ಗುರುಪುರ, ದಯಾನಂದ ಆಲಂಕಾರ್, ನಾರಾಯಣ ಪೂಜಾರಿ ನಂಜೆ ಮತ್ತಿತರರು ಉಪಸ್ಥಿತರಿದ್ದರು.