ಕೊಡಗು ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ನೆರವು
ಮೂಡುಬಿದಿರೆ: ಕೊಡಗು ಪ್ರಾಕೃತಿಕ ಸಂತ್ರಸ್ತರಾಗಿರುವ ಜೋಡುಪಾಲ ಮತ್ತು ಮಣ್ಣಂಗೇರಿ ಗ್ರಾಮದ ಒಟ್ಟು 96 ಕುಟುಂಬಗಳಿಗೆ ತಲಾ ರೂ. 10,000 ಹಾಗೂ ಆಳ್ವಾಸ್ ವಿದ್ಯಾರ್ಥಿನಿಯಾಗಿದ್ದು ಪ್ರಕೃತಿ ವಿಕೋಪದಲ್ಲಿ ಮನೆಯನ್ನು ಕಳೆದುಕೊಂಡಿರುವ ತಷ್ಮಾ ಮುತ್ತಪ್ಪ ಅವರ ಕುಟುಂಬಕ್ಕೆ ರೂ. ಒಂದು ಲಕ್ಷದ ಚೆಕ್ ಅನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸುಳ್ಯ ತಾಲೂಕು ಆರಂತೋಡು ಗ್ರಾಮದ ಯೆನೆಪೋಯ ಎಸ್ಟೇಟ್ ನಲ್ಲಿ ವಿತರಿಸಲಾಯಿತು.
ಸಂತ್ರಸ್ತ ಫಲಾನುಭವಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಮಾತನಾಡಿ, ‘ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಏನಾದರೂ ಅನಾಹುತ ಸಂಭವಿಸಿದಾಗ ನೆರವು ನೀಡುವುದು ಅತೀ ಅಗತ್ಯವಾಗಿದೆ. ಆದರೂ ಸರಕಾರದ ಕೈಗೆ ಒಂದಿಷ್ಟು ಹಣವನ್ನು ನೀಡಿ ನಮ್ಮ ಕೆಲಸ ಮುಗಿಯಿತು ಎಂದು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ. ಪ್ರಕೃತಿ ವಿಕೋಪದಿಂದ ನೊಂದಿರುವಂತಹ ಕುಟುಂಬಗಳಿಗೆ ಸಾಂತ್ವಾನ ನೀಡಿ ನೆರವನ್ನು ನೀಡಿದಾಗ ಮಾತ್ರ ಆತ್ಮತೃಪ್ತಿ ಮೂಡಲು ಸಾಧ್ಯ ಎಂದರಲ್ಲದೆ, ಪ್ರಾಕೃತಿಕ ವಿಕೋಪದಲ್ಲಿ ಎಲ್ಲವನ್ನೂ ಕಳೆದುಕೊಂಡವರ ಕುಟುಂಬಗಳಿಗೆ ಅಗತ್ಯವಿರುವ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ನೆರವನ್ನು ನೀಡಲು ಆಳ್ವಾಸ್ ಸಂಸ್ಥೆ ಸದಾ ಸಿದ್ಧವಿದೆ ಎಂದರು.
ಡಾ. ಎಂ. ಮೋಹನ್ ಆಳ್ವರ ಸಹೋದರ ಕೊಡ್ಮಣ್ ಗುತ್ತು ರಾಮಚಂದ್ರ ಶೆಟ್ಟಿ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ಅನ್ನು ವಿತರಿಸಿದರು. ಸಂಪಾಜೆ ವಲಯರಣ್ಯಾಧಿಕಾರಿ ಕು. ಕ್ಷಮಾ, ಕೊಡಗು ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಗಿರೀಶ್ ಗಣಪತಿ, ಪದಾಧಿಕಾರಿಗಳಾದ ಕೆ.ಆರ್. ಬಾಲಕೃಷ್ಣ ರೈ, ವಿ.ಎಂ. ಕುಮಾರ್, ಯೆನೆಪೋಯ ಎಸ್ಟೇಟ್ ವ್ಯವಸ್ಥಾಪಕ ಬಾಲನ್ ನಾಯರ್, ರಾಜೇಶ್ವರಿ ಇನ್ಫ್ರಾಟೆಕ್ ಮಾಲಕ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಸಮಾಜಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂತ್ರಸ್ತರ ಮಾಹಿತಿ ಸಂಗ್ರಹಿಸಿದರು.