Published On: Mon, Aug 27th, 2018

ಕೊಡಗಿನ ಸಂತ್ರಸ್ತರು ಸಂಬಂಧಿಕರ ಮನೆಯಲ್ಲಿ ಆಶ್ರಯ

ಪುತ್ತೂರು: ಕೊಡಗಿನಲ್ಲಿ ಪ್ರವಾಹೋಪಾದಿಯಾಗಿ ಸುರಿದ ಧಾರಾಕಾರ ಮಳೆ ಹಾಗೂ ಭೂಕುಸಿತದಿಂದಾಗಿ ಸರ್ವಸ್ವವನ್ನು ಕಳಕೊಂಡ ಕುಟುಂಬವೊಂದು ಕಬಕ ಗ್ರಾಮದ ಹೊಸಳಿಕೆ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮಡಿಕೇರಿಯ ಯೆಬಟಗಿರಿ ಗ್ರಾಮದ ಕೇನಿಡುಗಣಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಗಿರೀಶ್ ಎಸ್.ಡಿ. ಹಾಗೂ ಭಾಗೀರಥಿ ದಂಪತಿಗಳು ಸುಮಾರು 4 ಎಕ್ರೆ ಕೃಷಿಭೂಮಿ ಹೊಂದಿದ್ದರು. ಕಾಫಿ, ಕರಿಮೆಣಸು, ಏಲಕ್ಕಿ, ಶುಂಠಿ, ಬಾಳೆ, ಅಡಿಕೆ, ಕೃಷಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಮೊನ್ನೆ ಸುರಿದ ಭಾರಿ ಮಳೆಗೆ ಹತ್ತಿರವಿದ್ದ ಗುಡ್ಡ ಪ್ರದೇಶ, ಮನೆಯಿಂದ ಸುಮಾರು 1/2 ಕಿಲೋಮೀಟರ್ ದೂರವಿದ್ದ ಸಣ್ಣ ನದಿಗೆ ಅಡ್ಡಲಾಗಿ ಕುಸಿದು ಬಿದ್ದು ನದಿಯು ತನ್ನ ಹರಿಯುವ ದಿಕ್ಕನ್ನೇ ಬದಲಿಸಿ ಇವರ ಜಮೀನಿನತ್ತ ನೆರೆ ನೀರಿನೊಂದಿಗೆ ಹರಿದು ಮನೆ ಸಹಿತ ಸಂಪೂರ್ಣ ಕೃಷಿ ನಾಶಗೊಂಡಿತು. ಮನೆಯಲ್ಲಿ ದಾಸ್ತಾನಿರಿಸಿದ್ದ 4 ಕ್ವಿಂಟಾಲ್ ಅಡಿಕೆ, 1.5 ಕ್ವಿಂಟಾಲ್ ಕರಿಮೆಣಸು ವರ್ಷಪೂರ್ತಿ ಖರ್ಚಿಗೆ ದಾಸ್ತಾನಿರಿಸಿದ್ದ ಅಕ್ಕಿ, ಬೇಳೆಕಾಳು, ಚಿನ್ನಾಭರಣ, ಒಡವೆ, ವಸ್ತ್ರಗಳು ಸಂಪೂರ್ಣ ಕೊಚ್ಚಿಹೋಗಿವೆ. ಭೂಕುಸಿತದಿಂದಾಗಿ ಸಂಪೂರ್ಣ ಕೃಷಿಯೇ ಕಾಣದಾಗಿದೆ. ಮನೆಯಲ್ಲಿ ಸಾಕಿದ್ದ 4 ಹಂದಿ ಹಾಗೂ ನಾಯಿ ನಾಪತ್ತೆಯಾಗಿದೆ. ಇದ್ದ 2 ಹಸುಗಳು ದೂರದ ಬೆಟ್ಟದಲ್ಲಿ ಪತ್ತೆಯಾಗಿದ್ದು ಕುಶಾಲನಗರದ ಪಶುಸಂಗೋಪನಾ ಇಲಾಖೆಯವರು ಜಾನುವಾರುಗಳಿಗೆ ಆಶ್ರಯ ನೀಡಲು ಸ್ಥಳಾಂತರದ ಭರವಸೆ ನೀಡಿದ್ದಾರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಭೂಕಂಪ ಹಾಗೂ ಪ್ರವಾಹದ ಮುನ್ಸೂಚನೆ ಅರಿತ ಕುಟುಂಬವು ಗಿರೀಶ್‍ರ ವಿಕಲಚೇತನೆ(ಅಂಗವಿಕಲೆ) ಸಹೋದರಿ ವಿಜಯಲಕ್ಷ್ಮಿಯವರನ್ನು ಎತ್ತಿಕೊಂಡು ಕಾಲು ದಾರಿಯಲ್ಲೆ ಸಾಗಿ ಸುರಕ್ಷಿತ ಪ್ರದೇಶಕ್ಕೆ ಸಾಗಿದ್ದರು. ಇದೀಗ ಸರ್ವಸ್ವವನ್ನು ಕಳಕೊಂಡ ಗಿರೀಶ್‍ರವರು ಪತ್ನಿ ಭಾಗೀರಥಿ, ಸಹೋದರಿ ವಿಜಯಲಕ್ಷ್ಮಿ, ಮಕ್ಕಳಾದ ವಿಲಾಸ್, ಪ್ರದೀಪ್ ಹಾಗೂ ಮೀನಾಕ್ಷಿಯವರೊಂದಿಗೆ ಕಬಕ ಗ್ರಾಮದ ಹೊಸಳಿಕೆಯಲ್ಲಿ ವಾಸ್ತವ್ಯವಿರುವ ಮಗಳು ಚೈತ್ರ ಹಾಗೂ ಅಳಿಯ ಮಹೇಶ್ ಗೌಡರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ನೀಡಲು ಬಯಸುವವರು 984488550 ಮಹೇಶ್ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter