Published On: Mon, Aug 13th, 2018

ಹಿಂದೂ ಕಾರ್ಯ ಪಡೆಯಿಂದ ಹಿಂದೂ ಸಿವಿಲ್ ಬೋರ್ಡ್ ಆಗ್ರಹಿಸಿ ಅಂಚೆ ಕಾರ್ಡು ಚಳುವಳಿ : ಶ್ರೀ ವಜ್ರದೇಹಿ ಸ್ವಾಮಿ

`ಶಿರೂರು ಸ್ವಾಮಿ ಸಾವು ಪ್ರಕರಣ ತನಿಖೆ ವಿಳಂಬವಾದಷ್ಟು ಸಂಶಯ ಹೆಚ್ಚಾಗಲಿದೆ’

`ಹಿಂದೂ ಸಂಸ್ಕಾರ-ಸಂಸ್ಕತಿ ಪುನರುತ್ಥಾನ ಅವಶ್ಯ’

gur-aug-7-vjradehi swamy

ಸನ್ಯಾಸಿಗಳಿಗೆ ಈಗ ಚಾತುರ್ಮಾಸ್ಯ ವ್ರತಾಚರಣೆ ಸಮಯ. ಸನ್ಯಾಸಿಗಳ ಜೀವನದಲ್ಲಿ ಈ ಸಮಯಕ್ಕೆ ಮಹತ್ವವಿದೆ. ಚಾತುರ್ಮಾಸ್ಯ ವೃತಾಚರಣೆ ಮಹತ್ವ, ಆಧುನಿಕ ಕಾಲದಲ್ಲೂ ಇದರ ಪ್ರಸ್ತುತತೆ ಹಾಗೂ ಹಿಂದೂ ಕಾರ್ಯ ಪಡೆ, ಹಿಂದೂ ಜಾಗೃತಿ ದಳ, ಹಿಂದೂ ಸಂಸ್ಕಾರ-ಸಂಸ್ಕೃತಿಯ ಪುನರುತ್ಥಾನ, ಶಿರೂರು ಸ್ವಾಮಿ ಅಸಹಜ ಸಾವು ಪ್ರಕರಣ ಇವೇ ಮೊದಲಾದ ಕೆಲವು ಮುಖ್ಯ ವಿಷಯಗಳ ಕುರಿತು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳೊಂದಿಗೆ ಮಾತನಾಡಿದಾಗ, ಅವರು ಕೆಲವು ಮಹತ್ವದ ವಿಚಾರ ತಿಳಿಸಿದರು.

ಪ್ರ : ಚಾತುರ್ಮಾಸ್ಯದ ಉದ್ದೇಶ, ಪ್ರಸ್ತುತತೆ ಏನು ?

ಉ : ಹಿಂದೆ ಸಂನ್ಯಾಸಿಗಳು ಒಂದೆಡೆ ನೆಲೆಯೂರಬಾರದು, ಅವರು ಲೋಕೋದ್ಧಾರದ ಹಿತದಿಂದ ಸಂಚಾರಿಯಾಗಬೇಕಿತ್ತು. ಧಾರ್ಮಿಕ ಆಚಾರ-ವಿಚಾರಗಳ ಭಾಗವಾದ ಅನುಸಂಧಾನ, ಅಧ್ಯಯನ, ಅಧ್ಯಾಪನ, ಸ್ವಾಧ್ಯಾಯ, ಪಾಠಪ್ರವಚನ ಮತ್ತು ಅನುಕರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದು, ಅವುಗಳ ಅಧ್ಯಯನಕ್ಕಾಗಿ ಅನುಕೂಲವಾಗುವಂತೆ ಸಂನ್ಯಾಸಿಗಳಿಗೆ ಆಶಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವೀಜ ಮಾಸದಲ್ಲಿ ಒಂದೆಡೆ ಇರಬೇಕಾಗುತ್ತಿತ್ತು. ಆಧುನಿಕ ಕಾಲಘಟ್ಟದಲ್ಲಿ ನಾಲ್ಕು ತಿಂಗಳ ವೃತಾಚರಣೆಯಲ್ಲಿ ಸ್ವಲ್ಪ ಬದಲಾವಣೆಯಾಗಿ ಚಾತುಮಾಸ್ಯ ಎರಡು ತಿಂಗಳಿಗೆ ಸೀಮಿತವಾಗಿದೆ. ಚಾತುರ್ಮಾಸದಲ್ಲಿ ಶಾಖಾವೃತ, ದದೀವೃತ, ಕ್ಷೀರವೃತ ಮತ್ತು ದ್ವಿದಳವೃತ ಎಂಬ ನಾಲ್ಕು ವೃತಗಳಿವೆ.

ಪ್ರ : ಚಾತುರ್ಮಾಸ ಎಲ್ಲ ಸ್ವಾಮಿಗಳು ಆಚರಿಸಬೇಕೇ ?

ಚಾತುರ್ಮಾಸ ವೃತ ಎಲ್ಲರಿಗೂ ಅನ್ವಯ. ವಿಶೇಷತಃ ಸನ್ಯಾಸಿಗಳಿಗೆ ಆಗ್ರಹ ಮತ್ತು ನಿಗ್ರಹದ ಕಾರಣಕ್ಕಾಗಿ ಈ ವೃತ ಅತಿ ಮುಖ್ಯವಾಗಿದೆ. ಆಸೆ, ಆಕಾಂಕ್ಷೆ, ಅರಿಷಡ್ವೈರಿ ನಿಗ್ರಹಿಸಿಕೊಳ್ಳಬೇಕಾಗುತ್ತದೆ. ಅಹಿಂಸಾ ತತ್ವವೂ ಈ ವೃತಚಾರಣೆಯಲ್ಲಿ ಅಡಗಿದೆ.

ಪ್ರ : ನಾಲ್ಕು ತಿಂಗಳ ವೃತ ಎರಡು ತಿಂಗಳಿಗೆ ಇಳಿದಿರುವುದರಿಂದ ಪ್ರಯೋಜನ ಹೆಚ್ಚಿದೆಯೇ ?

ಈಗ ಎರಡು ತಿಂಗಳ ವೃತಾಚರಣೆಯಲ್ಲಿ ಇನ್ನೊಂದಷ್ಟು ಅಧ್ಯಯನ ಮಾಡುತ್ತೇವೆ. ಇದನ್ನೇ ಉಳಿದ ಎಂಟು ತಿಂಗಳಲ್ಲಿ ಸಮಾಜಕ್ಕೆ ಧಾರೆ ಎರೆಯುತ್ತೇವೆ. ಎರಡು ತಿಂಗಳ ಅಧ್ಯಯನ ಮಾಡುವುದರಿಂದ ಎಂಟು ತಿಂಗಳು ಇತರ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯವಾಗಲು ಇದು ಪೂರಕವಾಗುತ್ತದೆ.

ಪ್ರ: ಹಿಂದೂತ್ವದ ಪುನರುತ್ಥಾನ ಎನ್ನುವ ನೀವು ಈ ವಿಷಯದಲ್ಲಿ ನೀವು ಎಡರುತೊಡರು ಎದುರಿಸಿಲ್ಲವೇ ?

ಉ: ಸಾಕಷ್ಟು ಎಡರುತೊಡರುಗಳು ಎದುರಾಗಿವೆ. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಆಗುವುದಿಲ್ಲ. ಹಿಂದೂತ್ವದ ಪರಿಕಲ್ಪನೆಯಲ್ಲೇ ಇತರ ಜಾತಿಜನಾಂಗದ ಕಟ್ಟುಪಾಡಿದೆ ಎಂದರೆ ಯಾರು ನಂಬುತ್ತಾರೆ ? ಇದನ್ನೇ ಸಾರಿ ಹೇಳಿದಾಗ ವಿರೋಧಗಳು ಕಂಡು ಬರುತ್ತವೆ. ಇಲ್ಲಿ ಮತ ಅವಲಂಬಿಸಿರುವ ಒಂದು ಜನಾಂಗ ಇರುವುದರಿಂದ ಆ ಮತಕ್ಕೂ ಹಿಂದೂತ್ವಕ್ಕೂ ಅಜಗಜಾಂತವಿದೆ. ಆಚರಣೆ, ಕಟ್ಟುಪಾಡುಗಳಲ್ಲಿ ವ್ಯತ್ಯಾಸವಿದೆ. ವಾಸ್ತವದಲ್ಲಿ ಮೇಲ್ಪಂಕ್ತಿಯಲ್ಲಿರಬೇಕಿದ್ದ ಹಿಂದೂತ್ವ ಇಂದು ಆಚರಣೆಯಲ್ಲಿ ಕೆಳಸ್ತರಕ್ಕೆ ಹೋಗುತ್ತಿದೆ. ಇದನ್ನು ಪ್ರತಿಪಾದಿಸಲು ಮುಂದಾದಾಗ ನಮಗೆ ತಡೆ ಬರುತ್ತವೆ.

ಪ್ರ : ಅಂದರೆ ಹಿಂದೂ ಸಂಸ್ಕಾರ ಮತ್ತು ಸಂಸ್ಕೃತಿ ಸೊರಗುತ್ತಿದೆ ಎಂಬ ವಿಷಾದ ನಿಮ್ಮಲ್ಲಿದೆ ?

ಖಂಡಿತವಾಗಿಯೂ. ಹಿಂದೂತ್ವ ಎಂದರೆ ಒಂದು ಜೀವನ ಪದ್ಧತಿ. ಅದಕ್ಕೆ ಅದರದ್ದೇ ಆದ ಸಂಸ್ಕಾರ, ಸಂಸ್ಕøತಿ ಇದೆ. ಸಂಸ್ಕಾರ ವೈಫಲ್ಯ ಕಂಡಾಗ ಸಂಸ್ಕøತಿಯ ಬೇರು ಕ್ಷೀಣಿಸುತ್ತದೆ. ಅಂದರೆ ನಾವೀಗ ಸಂಸ್ಕಾರವಿಲ್ಲದ ಸಂಸ್ಕøತಿ ಕಾಣುವಂತಾಗಿದೆ.

ಪ್ರ : ಇದಕ್ಕಾಗಿ ರಾಜಕೀಯದ ನೆರವು ಅಗತ್ಯವೇ ?

ಧಾರ್ಮಿಕ ವಿಚಾರಗಳಿಗೆ ಅದರ ಅಗತ್ಯವಿಲ್ಲ. ಆದರೆ ವ್ಯವಸ್ಥೆಯ ಮುಂದುವರಿದ ಭಾಗದಲ್ಲಿ ಸಂವಿಧಾನ ಮತ್ತು ಕಾನೂನು ಇದೆ. ಆಗ ಅಲ್ಲಿ ರಾಜಕೀಯ ಮಹತ್ವ ಪಡೆಯುತ್ತದೆ. ರಾಜಕೀಯ ವಿಷಯ ಬಂದಾಗ ಓಲೈಕೆ ಮಾಡಬೇಕಾಗುತ್ತದೆ.

ಪ್ರ: ಇಂತಹ ಸನ್ನಿವೇಶದಲ್ಲಿ ಹಿಂದೂತ್ವದ ಕೆಲಸ ತ್ರಾಸವೆನಿಸಿಲ್ಲವೇ ?

ವಿಘ್ನಗಳು ಉಂಟಾಗಿದ್ದರೂ, ಬೇಸರವಾಗಿಲ್ಲ. ಸಮಾಜೋದ್ಧಾರದ ಈ ಕಾಯಕ ಯಾಕೆ ಮಾಡಬಾರದು ಎಂಬ ಯೋಚನೆ ಬರುತ್ತದೆ. ನಾವಲ್ಲದಿದ್ದರೆ ಸಮಾಜ ತಿದ್ದುವವರು ಮತ್ತಾರು ? ಸಾಮಾಜಿಕ ಕಳಕಳಿಯ ಕೆಲಸದಲ್ಲಿ ನನಗೆ ದಣಿವೆಂಬುದಿಲ್ಲ.

ಪ್ರ : ಶಿಕ್ಷಣದಿಂದ ಸಂಸ್ಕಾರ-ಸಂಸ್ಕೃತಿ ಗಟ್ಟಿಗೊಳಿಸುವುದೆಂದರೇನು ?

ಮಕ್ಕಳಿಗೆ ಉತ್ತಮ ಸಂಸ್ಕಾರದಿಂದ ಕೂಡಿದ ಶಿಕ್ಷಣ ನೀಡಿದರೆ ಉತ್ತಮ ಸಂಸ್ಕೃತಿ ಜಾರಿಯಲ್ಲಿರುವ ಸಮಾಜ ಕಾಣಬಹುದು. ಆದರೆ ಈಗ ಶಿಕ್ಷಣವೆಂಬುದೇ ಒಂದು ದಂಧೆಯಾಗಿದ್ದು, ಮಕ್ಕಳು ಇಂತಹ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ನಾನು ಮಠದಿಂದಲೇ ಶಿಕ್ಷಣ ಕ್ರಾಂತಿಗೆ ಪ್ರಯತ್ನಿಸುತ್ತಿದ್ದೇನೆ.

ಪ್ರ : ಹಿಂದೂ ಟಾಸ್ಕ್ ಫೋರ್ಸ್(ಕಾರ್ಯ ಪಡೆ) ಪ್ರಗತಿ ಏನಾಯಿತು ?

ಮೊದಲಾಗಿ ಲವ್ ಜಿಹಾದ್ ತಡೆಗಟ್ಟುವ ಉದ್ದೇಶವಿಟ್ಟುಕೊಂಡು ಹಿಂದೂ ಟಾಸ್ಕ್ ಕಾರ್ಯ ಪಡೆ ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಇದ್ದು, ಅಧಿಕೃತ ನೋಂದಣಿಯಾಗಿದೆ. 21 ಮಂದಿಯ ಸಮಿತಿಯಲ್ಲಿ ನ್ಯಾಯವಾದಿಗಳು, ಸಾಮಾಜಿಕ ಪರಿಕಲ್ಪನೆಯ ಹರಿಕಾರರು, ವಿದ್ವಾಂಸರು, ವಿದ್ಯಾರ್ಥಿಗಳು, ಉದ್ಯಮರಂಗದ ನೇತಾರರು ಒಳಗೊಂಡಿದ್ದಾರೆ. ತಿಂಗಳಿಗೊಂದು ಸಭೆ ನಡೆಯುತ್ತಿದೆ. ಮುಖ್ಯವಾಗಿ ಅಲ್ಪಸಂಖ್ಯಾತರಿಗೆ ಇರುವಂತೆ, ಹಿಂದೂಗಳಿಗೂ ಕಾನೂನಾತ್ಮಕ ಸಿವಿಲ್ ಮಂಡಳಿಗಾಗಿ ಸಮಿತಿ ಆಗ್ರಹಿಸುತ್ತಿದೆ. ಇದಕ್ಕಾಗಿ ರಾಷ್ಟ್ರಪತಿ, ಪ್ರಧಾನಿ, ಸಂಸದರು, ಇತರ ಜನಪ್ರತಿನಿಧಿಗಳು ಹಾಗೂ ಇಲಾಖೆಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನು ಇದನ್ನು ದೇಶ ಮಟ್ಟದಲ್ಲಿ `ಅಂಚೆ ಕಾರ್ಡು ಚಳುವಳಿ’ಯಾಗಿ ರೂಪಿಸಲಿದ್ದೇವೆ.

ಪ್ರ: ಶಿರೂರು ಸ್ವಾಮಿ ಸಾವಿನ ನಿಷ್ಪಕ್ಷಪಾತ ತನಿಖೆಗೆ ನೀವು ಮತ್ತು ಕೇಮಾರು ಸ್ವಾಮಿ ಮೌಖಿಕ ಆಗ್ರಹ ಸಲ್ಲಿಸಿದ್ದೀರಿ ? ಅದರಲ್ಲಿ ಯಾವ ಪ್ರಗತಿಯಾಗಿದೆ ?

ಜನಮಾನಸದಲ್ಲಿ ಸಂಶಯ ಹೆಚ್ಚಾದಂತೆ, ಅದರಿಂದ ಇತರ ಸ್ವಾಮಿಗಳ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಸಂಶಯ ನಿವಾರಣೆಗಾಗಿ ನಾವು ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿಯವರನ್ನು ಭೇಟಿಯಾಗಿ ಶೀಘ್ರ ತನಿಖೆಗೆ ಆಗ್ರಹಿಸಿದ್ದೇವೆ. ಆರೋಪ, ಪ್ರತ್ಯಾರೋಪಗಳು, ವದಂತಿಗಳು, ಅಗತ್ಯ ವರದಿಗಳ ವಿಳಂಬ ಇವೆಲ್ಲವೂ ಜನರಲ್ಲಿ ಸಂಶಯ ಹೆಚ್ಚಾಗಲು ಕಾರಣವಾಗಿದೆ. ಅಷ್ಟಮಠಗಳ ಸ್ವಾಮಿಗಳೂ ತನಿಖೆ ಶೀಘ್ರಗೊಳಿಸುವಂತೆ ಆಗ್ರಹಿಸಬೇಕಾಗುತ್ತದೆ. ಅವರು ತಮ್ಮ ಜವಾಬ್ದಾರಿ ಮರೆಯುವಂತಿಲ್ಲ. ಇದೊಂದು ಹೈ-ಪ್ರೊಫೈಲ್ಡ್ ಪ್ರಕರಣವಾಗಿರುವುದರಿಂದ ಸರ್ಕಾರವೂ ಸೂಕ್ತ ನಿರ್ದೇಶನ ನೀಡಬೇಕು.

ಅಂತಿಮವಾಗಿ, ಹಿಂದೂತ್ವ ಸದೃಢವಾಗಬೇಕಾದ ಕಾಲಘಟ್ಟ ಇದು. ಇತರ ಮತಧರ್ಮಗಳಿಗೆ ಹಿಂದೂತ್ವ ಪಂಚಾಂಗವಾಗಿ ನಿಲ್ಲುವುದು. ಆಗಲೇ ಇತರ ಮತಧರ್ಮಗಳು ಉತ್ತಮವಾಗಿ ಬಾಳುವುದು. ಇತಿಮಿತಿಯೊಳಗೆ ಸಮಾಜದ ಲೋಪದೋಷ ಸರಿಪಡಿಸಬೇಕೇ ಹೊರತು ಸಮಾಜ ಒಡೆಯುವ ಕಾರ್ಯ ಮಾಡಬಾರದು. ಒಡೆಯುವ ಕೆಲಸಗಳಿಗೆ ಹುಟ್ಟಿಕೊಳ್ಳುವ ಸಂಘಟನೆಗಳಿಗೆ ಅವಕಾಶ ನೀಡಬಾರದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter