Published On: Sat, Aug 11th, 2018

ಮೊಗರಿನಲ್ಲಿ ತ್ಯಾಜ್ಯ ಕಸವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ಆಕ್ಷೇಪ

ಕಸ ವಿಲೇವಾರಿಯ ಸಮಾಲೋಚನ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ
ಎಡಪದವು: `ಯಾವುದೇ ಕಾರಣಕ್ಕೂ ಮೊಗರು ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬಾರದು. ಮೊಗರು, ಮಳಲಿ ಭಾಗದಲ್ಲಿ ಸಾವಿರಾರು ಜನರಿದ್ದು, ಐತಿಹಾಸಿಕ ನಾರಳಮಠವೂ ಇದೆ. ಮೊಗರು, ಮಳಲಿ ಪ್ರದೇಶ ಸ್ವಚ್ಛವಾಗಿದ್ದು, ಇಲ್ಲಿ ಘಟಕ ಸ್ಥಾಪಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಇಲ್ಲಿ ಘಟಕ ನಿರ್ಮಿಸುವ ಬದಲು ಬೇರೆಡೆ ನಿರ್ಮಿಸಿ. ಇಷ್ಟಾದರೂ ಘಟಕವನ್ನು ನಿರ್ಮಿಸಲು ಮುಂದಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು..’
ಈ ರೀತಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ಗಂಜಿಮಠ ಗ್ರಾಮ ಪಂಚಾಯತ್‍ನ ಸಭಾಭವನದಲ್ಲಿ ನಡೆದ ಕಸ ವಿಲೇವಾರಿಯ ಸಮಾಲೋಚನ ಸಭೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮೊದಲು ಅಧಿಕಾರಿಗಳು ಕಸ ವಿಲೇವಾರಿ ಘಟಕದ ಅವಶ್ಯಕತೆ, ತ್ಯಾಜ್ಯ ವಿಂಗಡನೆ, ಕಸದಿಂದ ರಸ ಮುಂತಾದ ವಿಚಾರಗಳನ್ನು ಸ್ಲೈಡ್ ಶೋ ಮೂಲಕ ವಿವರಿಸಿದರು. ಮೊಗರಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಕುರಿತು ಸಂವಾದ ನಡೆದಿದ್ದು, ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಮಾತಿನ ಚಕಮಕಿ ಉಂಟಾಯಿತು.
ಆರಂಭದಲ್ಲಿ ಮಾತಾಡಿದ ಮಾಜಿ ಪಂ. ಉಪಾಧ್ಯಕ್ಷ ಜಯಾನಂದ ನಾಯಕ್ ಅವರು, ಪೊಳಲಿ ದ್ವಾರದಿಂದ ಮಳಲಿ ತನಕ ಸಾಕಷ್ಟು ಕಸವಿದ್ದು, ಮಳಲಿ, ಮೊಗರಿನಲ್ಲಿ ಕಸದ ಸಮಸ್ಯೆ ಇಲ್ಲ. 2011-12ನೇ ಸಾಲಿನಲ್ಲಿ ಬಡಗುಳಿಪಾಡಿಯಲ್ಲಿ ಜಾಗ ಮೀಸಲಿರಿಸಿದ್ದು, ಒಂದೂವರೆ ಲಕ್ಷ ಖರ್ಚು ಮಾಡಲಾಗಿತ್ತು. ಆದ್ದರಿಂದ ಅದೇ ಜಾಗದಲ್ಲಿ ಈ ಘಟಕ ಸ್ಥಾಪಿಸಬಹುದಿತ್ತು ಎಂದರು. ಆಗ ಪಿಡಿಓ ಜಗದೀಶ್ ಮಾತನಾಡಿ, ಅಲ್ಲಿ ರೆಕಾರ್ಡ್ ಆಗಿದ್ದು 10 ಸೆಂಟ್ಸ್ ಜಾಗ, ಅಲ್ಲಿ ಸ್ಮಶಾನ ನಿರ್ಮಿಸಲಾಗಿದೆ. 10 ಸೆಂಟ್ಸ್ ಜಾಗದಲ್ಲಿ ಘಟಕ ಸ್ಥಾಪಿಸಲು ಸಾಧ್ಯವಿಲ್ಲ. ಇದಕ್ಕೆ ವಿರೋಧ ಬಂದಿರುವುದರಿಂದ ನಿಲ್ಲಿಸಲಾಗಿದೆ ಎಂದರು.
ಕಟ್ಟಡದವರ ಕಸವನ್ನು ಅವರಿಂದಲೇ ವಿಲೇವಾರಿಗೊಳಿಸಬೇಕು. ಪ್ಲಾಸ್ಟಿಕ್ ನಿಷೇಧಗೊಳಿಸಿದರೆ ಕಸವಿಲೇವಾರಿ ಸುಲಭವಾಗುತ್ತದೆ. ಕಸ ಸುರಿಯುವ ಜಾಗದಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಅದರ ಬದಲು ಮೊಗರಿನಲ್ಲಿ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ನಾರಳ ಮಠದ ಪುರೋಹಿತ ಶ್ರೀಪತಿಯವರು ಮಾತಾಡಿ, ಇಲ್ಲಿ ನಾರಳ ಮಠವಿರುವುದರಿಂದ ಘಟಕ ಸ್ಥಾಪಿಸಬಾರದು ಎಂದು ತಿಳಿಸಿದರು. ಶಿವರಾಜ್ ಎನ್ನುವವರು ಮೊಗರಿನಲ್ಲಿ ಕಸವಿಲ್ಲ, ಬೇಕಾದರೆ ಸರ್ವೆ ಮಾಡಿನೋಡಿ, ಕಸವಿಲ್ಲದ ಜಾಗಕ್ಕೆ ಬೇರೆಡೆಯ ಕಸವನ್ನು ಸುರಿಯಬೇಡಿ ಎಂದರು.
ಆಗ ಮಾತಾಡಿದ ಪಂಚಾಯತ್ ಅಧ್ಯಕ್ಷೆ ನಾನೂ ಕೂಡಾ ಇದೇ ಊರಿನವಳಾಗಿದ್ದು, ಗ್ರಾಮದ ಹಿತವನ್ನು ಬಲಿಕೊಡುವುದಿಲ್ಲ. ಜನರಿಗೆ ಘಟಕ ಬೇಡ ಎಂದಾದರೆ ನೀವು ತಿಳಿಸಿದ ಸ್ಥಳದಲ್ಲಿ ನಿರ್ಮಿಸೋಣ ಎಂದು ತಿಳಿಸಿದರು. ಜಾಗದ ಬಗ್ಗೆ ತಿಳಿಸಲು ವಿಎ(ಗ್ರಾಮಕರಣಿಕ) ಎಲ್ಲಿದ್ದಾರೆ ಎಂದು ಅವರೇ ಜಾಗ ತಿಳಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಆದರೆ ವಿಎ ಗೈರಾಗಿದ್ದರಿಂದ ಅವರನ್ನು ಕರೆಸುವಂತೆ ಪಟ್ಟುಹಿಡಿದರು. ಅವರ ಮೊಬೈಲ್ ಸ್ವಿಚ್ಚ್ ಆಫ್ ಆಗಿರುವುದಾಗಿ ಗ್ರಾಮಸ್ಥರು ಆರೋಪಿಸಿದರು.

1008malali3
ಯುವ ಮುಖಂಡ ಚಂದ್ರಹಾಸ ನಾರಳ ಮಾತಾಡಿ, ಘಟಕ ಬೇಕೇ ಬೇಡವೇ ಎಂದು ಜನಾಭಿಪ್ರಾಯ ಸಂಗ್ರಹಿಸಬೇಕು. ಹೆಚ್ಚಿನವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಲ್ಲಿ ಘಟಕ ಸ್ಥಾಪಿಸಬಾರದು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಧ್ಯೆ ಪ್ರವೇಶಿಸಿ ಮಾತಾಡಿದ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ಜನರಿಗೆ ಆ ಸ್ಥಳದಲ್ಲಿ ಘಟಕ ಬೇಡ ಎಂದಾದರೆ ಬೇಡ. ಆದರೆ ಈ ಘಟಕದಿಂದ ಯಾವುದೇ ತೊಂದರೆ ಇಲ್ಲ. ಪೊಲ್ಯುಷನ್ ಬೋರ್ಡ್ ಎನ್‍ಒಸಿ ಪ್ರಮಾಣ ಪತ್ರ ನೀಡಿದೆ. ಕಸ ನಿವಾರಣೆ ನಮ್ಮ ಮೂಲ ಉದ್ದೇಶವಾಗಿದ್ದು, ಮಠ, ಮಂದಿರ, ಚರ್ಚ್, ಮಸೀದಿಗಳಿಗೆ ತೊಂದರೆಯಾಗುತ್ತದೆ ಎಂದಾದರೆ ಆ ಜಾಗದಲ್ಲಿ ಘಟಕ ನಿರ್ಮಿಸುವುದಿಲ್ಲ ಎಂದರು.

1008malali4
ಆಗ ಗ್ರಾಮಸ್ಥರು, 20 ಲಕ್ಷ ವೆಚ್ಚದಲ್ಲಿ ಮಿಶೀನಿನ ಮೂಲಕ ತ್ಯಾಜ್ಯ ಘಟಕ ನಿರ್ಮಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಸಾಧ್ಯವಾಗುವುದಾದರೆ ಬಡಗುಳಿಪಾಡಿ ಗ್ರಾಮದಲ್ಲಿ ಇದನ್ನು ನಿರ್ಮಿಸಿ. ಸರಕಾರಿ ಅಥವಾ ಡಿ.ಸಿ. ಮನ್ನಾ ಜಾಗವನ್ನು ಆಯ್ಕೆ ಮಾಡಿ ನಿರ್ಧರಿಸಿ. ಬಿಗ್‍ಬ್ಯಾಗ್ ಕಂಪೆನಿಯಲ್ಲಿ 3000 ಮಂದಿ ಕಾರ್ಮಿಕರಿದ್ದು ಅವರು ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಕೆಐಡಿಬಿ ಸ್ಥಳದ ಕಸವನ್ನು ಅಲ್ಲೇ ನಿವಾರಿಸಲಿ ಎಂದು ತಿಳಿಸಿದರು. ಆಗ ಪಿಡಿಓ ಅವರು, ಆ ಜಾಗವೂ ಮೊಗರಿಗೆ ಹತ್ತಿರದಲ್ಲಿರುವುದರಿಂದ ಅಲ್ಲಿಯೂ ಘಟಕಕ್ಕೆ ವಿರೋಧವಿದೆ ಎಂದು ತಿಳಿಸಿದರು.
ತಾ.ಪಂ. ಸದಸ್ಯ ಸುನಿಲ್ ಕುಮಾರ್ ಮಾತಾಡಿ, ಜನರಿಗೆ ಘಟಕದಿಂದ ತೊಂದರೆಯಾಗುವುದೆಂದೆನಿಸಿದರೆ ಆ ಸ್ಥಳದಲ್ಲಿ ನಿರ್ಮಿಸುವುದು ಬೇಡ. ಆದರೆ ಘಟಕ ನಿರ್ಮಿಸುವುದು ನಮ್ಮ ಉದ್ದೇಶವಾಗಿದ್ದು, ಬೇರೆ ಸ್ಥಳದಲ್ಲಿ ಸ್ಥಳವನ್ನು ಹುಡುಕಲಾಗುವುದು ಎಂದರು.

1008malali2
ಪಂಚಾಯತ್‍ನಲ್ಲಿ ಘಟಕದ ವಿರುದ್ಧ ನಿರ್ಣಯ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಆಗ ಪಂಚಾಯತ್‍ನವರು ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿ, ಘಟಕವನ್ನು ನಿರ್ಮಿಸುವುದಿಲ್ಲ ಎಂದು ತಿಳಿಸಿದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಗೊಂದಲದಿಂದಲೇ ಸಭೆ ಮುಕ್ತಾಯಗೊಂಡಿತು.
ಜಿಲ್ಲಾ ಸಂಯೋಜಕರು, ಸ್ವಚ್ಛ ಭಾರತ್ ಮಿಶನ್, ದ.ಕ.ಜಿ. ಪಂ. ಮಂಗಳೂರು ಇದರ ಮಂಜುಳಾ ಜಿ., ಮೂಲ್ಕಿ ನಗರ ಪಂಚಾಯತ್‍ನ ಮುಖ್ಯಾಧಿಕಾರಿ ಇಂದು, ಹಲವಾರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter