Published On: Wed, Aug 1st, 2018

ಕೀಕೀ ಹುಚ್ಚಿಗೆ ಕೇಕೇ ಹಾಕಿ ಅವಾಂತರ

ವಾಟ್ಸ್‍ಆಪ್, ಫೇಸ್‍ಬುಕ್, ಇನ್ಸ್ಟಾಗ್ರಾಂ ಇಂತಹ ಸಾಮಾಜಿಕ ಜಾಲತಾಣದಲ್ಲಿ ಇಂದಿನ ಯುವಜನತೆ ಒಂದಲ್ಲಾ ಒಂದು ರೀತಿಯ ಅವಾಂತರಕ್ಕೆ ಸಿಲುಕಿರುವುದನ್ನು ದಿನನಿತ್ಯ ನೋಡುವಂತಹದ್ದೇ. ಅದರಲ್ಲಿಯೂ ಡೇರಿಂಗ್, ಚಾಲೆಂಜ್, ಸ್ಟೇಟಸ್ ಅಂತ ಹೊಸ ಹೊಸ ಅಪ್‍ಡೇಟ್ಸ್‍ಗಳು ಬರುತ್ತಲೇ ಇವೆ.

ki ki
ಮೊದಲು ಎಲ್ಲರ ಮೇಲೆ ಕ್ರಶ್ ಆದ ಕೂಲ್ ಗೇಮ್ ಕ್ಯಾಂಡಿ ಕ್ರಶ್. ಸಿಂಪಲ್ ಗೇಮ್‍ನ ಮೂಲಕ ಹೆಚ್ಚು ಲೆವೆಲ್‍ಗೆ ಜಿಗಿಯುವ, ಇನ್ನು ಆಡಬೇಕು ಎನ್ನುವ ಉತ್ಸಾಹ ಬರುತ್ತದೆ. ಇದೊಂದು ಸಾಮಾನ್ಯ ಗೇಮ್ ಆದ್ರು ಕೂಡ ಕೆಲವೊಂದು ಅವಾಂತರ ಸೃಷ್ಟಿಸಿತ್ತು. ಎಷ್ಟೇ ಲೆವೆಲ್ ಮುಗಿದರೂ ಕೂಡ ಈ ಗೇಮ್‍ಗೆ ಕೊನೆಯೇ ಇಲ್ಲ. ಇದರಿಂದ ಬೇಸತ್ತ ಅದೆಷ್ಟೋ ಜನ ತಲೆಕೆಡಿಸಿಕೊಂಡಿದ್ದರು.
ಇದರ ನಂತರ ಬಂದ ಡೆಡ್ಲಿ ಗೇಮ್ ಎಂದರೆ ಬ್ಲೂವೆಲ್. ಇದು ಸೃಷ್ಟಿಸಿದಷ್ಟು ಸಮಸ್ಯೆ ಇನ್ಯಾವ ಗೇಮ್ ಕೂಡ ಬಂದಿಲ್ಲ. ಇದು ಬಲಿ ತೆಗೆದುಕೊಂಡಿದ್ದು ಮಕ್ಕಳು ಹಾಗೂ ಯುವಜನತೆ. ಇದರಲ್ಲಿಯೂ ಬೇರೆ ಬೇರೆ ಲೆವೆಲ್‍ನ ಗೇಮನ್ನು ಕಂಪ್ಲೀಟ್ ಮಾಡುವಂತಹ ಆಟವಿತ್ತು. ಬ್ಲೂವೆಲ್‍ನಲ್ಲಿ ಪ್ರತಿಯೊಂದು ಹಂತದಲ್ಲೂ ತಮಗೆ ತಾವೇ ಹಾನಿ ಮಾಡಿಕೊಳ್ಳಬೇಕಿತ್ತು. ಕೈ ಕೊಯ್ದುಕೊಳ್ಳುವುದು, ನೀರಿಗೆ ಹಾರುವುದು, ಎತ್ತರದ ಕಟ್ಟಡದಿಂದ ಜಿಗಿಯುವುದು ಇಂತಹ ಭಯಾನಕ ಹಂತಗಳನ್ನು ದಾಟಿ ಬರಬೇಕಿತ್ತು. ಸಾವಿನೆಡೆಗೆ ಕೈಬೀಸಿ ಕರೆಯುತ್ತಿತ್ತು ಈ ಗೇಮ್. ಬ್ಲೂವೆಲ್‍ನಿಂದಾದ ಸಾವು- ನೋವುಗಳನ್ನು ಕೆಲವು ಮಾಧ್ಯಮಗಳು ಎಳೆಎಳೇಯಾಗಿ ಬಿಚ್ಚಿಟ್ಟರೂ ಸಹ ಯುವಜನತೆ ‘ನನಗೇನು ಆಗಲ್ಲ’ ಎಂಬ ದುಸ್ಸಾಹಸದಿಂದ ಪ್ರಾಣ ಕಳೆದುಕೊಳ್ಳಬೇಕಾಯಿತು.

kiki (2)
ಇವೆಲ್ಲ ಮುಗಿದು ಸದ್ಯಕ್ಕೆ ಏನು ಬೇಡ ಸುಮ್ನೆ ಚಾಟಿಂಗ್ ಸಾಕು ಎಂದಾಗ ಯುವಜನತೆಯನ್ನು ಎಬ್ಬಿಸಿ ಈ ಚಾಲೆಂಜ್ ಮಾಡಿ ನೋಡೋಣ ಅಂತ ಹುಚ್ಚೆಬ್ಬಿಸುತ್ತಿದೆ. ಅದುವೇ ಕೀ ಕೀ ಅಥವಾ “ಇನ್ ಮೈ ಫೀಲಿಂಗ್ ಚಾಲೆಂಜ್”. 31 ಪ್ರಾಯದ ಖ್ಯಾತ ಹಾಡುಗಾರ ಡ್ರೇಕ್‍ನ “ಇನ್ ಮೈ ಫೀಲಿಂಗ್ಸ್” ಎಂಬ ಹಾಡು ಈ ಕೀ ಕೀ ಚಾಲೆಂಜ್‍ಗೆ ಪ್ರೇರಣೆಯಾಗಿದೆ. ಈ ಚಾಲೆಂಜಿನ್ ಪ್ರಕಾರ ಕಾರಿನ ಮುಂಭಾಗದಲ್ಲಿ ಕುಳಿತ ಇಬ್ಬರಲ್ಲಿ ಡ್ರೈವಿಂಗ್ ಮಾಡುವವನ ಪಕ್ಕದಲ್ಲಿ ಕುಳಿತವನು ಚಲಿಸುವ ಕಾರಿನಿಂದ ಬಾಗಿಲು ತೆಗೆದು ರಸ್ತೆಗೆ ಇಳಿದು ಡ್ರೈವಿಂಗ್ ಮಾಡುವವನನ್ನು ನೋಡಿಕೊಂಡು ಕೀ ಕೀ ಹಾಡಿಗೆ ಕುಣಿಯಬೇಕು. ಹೀಗೆ ಕಾರಿನಿಂದ ಇಳಿಯುವಾಗ ಕಾರಿನ ಚಲನೆಯ ವೇಗದಿಂದ ರಸ್ತೆಗೆ ಬಿದ್ದರೆ, ಇನ್ನೊಂದೆಡೆ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದ ಪ್ರಸಂಗವೂ ಯೂಟ್ಯೂಬ್‍ನಲ್ಲಿ ವೈರಲ್ ಆಗಿದೆ. ಹಾಸ್ಯಗಾರ ಶಿಗ್ಗಿ ಈ ರೀತಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಎಲ್ಲರನ್ನು ಗಮನ ಸೆಳೆದಿದೆ.
ಈ ಹಾಡು ಎಲ್ಲಡೆ ವೈರಲ್ ಆಗಿದ್ದು, ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಇದು ತನ್ನ ಅಸ್ಥಿತ್ವ ಪಡೆದುಕೊಂಡಿದ್ದು ಸಿನೆಮಾ ಸ್ಟಾರ್‍ಗಳಿಂದ. ಸೆಲೆಬ್ರೆಟಿಗಳು ತಮ್ಮ ಇನ್ಸ್ಟಾಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೀಕೀ ಚಾಲೆಂಜ್‍ನ್ನು ಪೋಸ್ಟ್ ಮಾಡಿದ್ದಾರೆ. ಇವರಂತೆ ನಾವು ಮಾಡ್ಬೇಕು ಅಂತ ಇಂತಹ ಸಾಹಸಕ್ಕೆ ಕೈ ಹಾಕಿ ಬಿದ್ದು ಎದ್ದು ಗಾಯ ಮಾಡಿಕೊಂಡಿದ್ದಾರೆ. ಬಿಗ್‍ಬಾಸ್ ಬೆಡಗಿ ನಿವೇದಿತಾ ಗೌಡ ಕೂಡ ಈ ಚಾಲೆಂಜ್‍ನ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಇನ್ನಷ್ಟು ಉತ್ತೇಜನ ನೀಡುವಂತಾಗಿದೆ.
ಕಾರಿನಿಂದ ಇಳಿದು ಕುಣಿಯುವುದಕ್ಕಿಂತ ತಮ್ಮ ಮನೆಯಲ್ಲಿಯೇ ಕುಣಿಯೋದ್ರಲ್ಲಿ ಯಾವ ಸಮಸ್ಯೆನೂ ಇಲ್ಲ. ಆಗ ಯಾವ ಅನಾಹುತನೂ ಆಗದಂತೆ ತಪ್ಪಿಸಬಹುದು. ಏನೇ ಆಗಲಿ ಇಂತಹ ಹುಚ್ಚಿಗೆ ಕೇಕೇ ಹಾಕಿ ನಮ್ಮ ಪ್ರಾಣ ಕಳೆದುಕೊಳ್ಳುವುದರಿಂದ, ಒಂದಿಷ್ಟು ಉತ್ತಮ ಕೆಲಸ ಮಾಡುವುದು ಒಳ್ಳೆಯದು.
-ಅನ್ವಯ ಮೂಡುಬಿದಿರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter