Published On: Fri, Jul 20th, 2018

‘ಸೈಬರ್ ಕ್ರೈಂ ಮತ್ತು ಪತ್ರಿಕೆ’ ಮಾಹಿತಿ ಕಾರ್ಯಾಗಾರ

ಬಂಟ್ವಾಳ: ಆಧುನಿಕ ಸಮಾಜದಲ್ಲಿ ಯುವ ಜನತೆ ಮೊಬೈಲ್ ಮೂಲಕ ಫೇಸ್‍ಬುಕ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ತಪ್ಪು ಸಂದೇಶ ಮತ್ತು ನಕಲಿ ಚಿತ್ರಗಳನ್ನು ಸೃಷ್ಟಿ ಸಹಿತ ರವಾನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಎಸ್ಪಿ ಋಷಿಕೇಶ್ ಸೊನವಾಣೆ ಹೇಳಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಎಸ್‍ವಿಎಸ್ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸೈಬರ್ ಕ್ರೈಂ ಮತ್ತು ಪತ್ರಿಕೆ’ ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಮಾಹಿತಿ ಹಂಚಿಕೊಳ್ಳುವ ಭರದಲ್ಲಿ ಯಾವುದೇ ಜಾತಿ, ಧರ್ಮ, ದೇವರ ನಿಂದನೆ ಮತ್ತು ದೇಶ ವಿರೋಧಿ ವಿಚಾರಗಳ ಸೃಷ್ಟಿ ಮತ್ತು ರವಾನೆ ಕೂಡಾ ದಂಡ ವಸೂಲಿ ಮತ್ತು ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ವ್ಯಾಪ್ತಿಗೆ ಒಳಪಡುತ್ತದೆ ಎಂದರು.

cyber crime
ಇಂದು ಬಹುತೇಕ ಸಂದರ್ಭದಲ್ಲಿ ಸುಳ್ಳು ಮಾಹಿತಿ ರವಾನಿಸುವ ಮೂಲಕ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದ್ದು, ಬ್ಲಾಕ್‍ಮೇಲ್, ಬ್ಯಾಂಕಿಂಗ್ ವ್ಯವಹಾರ ಮತ್ತು ಕೆಲವೊಂದು ಆನ್‍ಲೈನ್ ಸಾಮಾಗ್ರಿ ಮಾರಾಟಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಪಾಸ್‍ವರ್ಡ್ ಪಡೆದು ಖಾತೆಯಿಂದ ಹಣ ಲಪಟಾಯಿಸುತ್ತಿರುವ ಬಗ್ಗೆಯೂ ಪ್ರಕರಣ ಹೆಚ್ಚಳವಾಗಿದೆ. ಇವೆಲ್ಲವೂ ವಿದೇಶದಲ್ಲಿದ್ದು ಕಾರ್ಯಾಚರಿಸಿದರೂ ಅಂತಿಮವಾಗಿ ಪೊಲೀಸರ ತನಿಖಾ ತಂಡಕ್ಕೆ ಸಿಕ್ಕಿ ಬೀಳುತ್ತಾರೆ ಎಂದು ಎಚ್ಚರಿಸಿದರು.
ಕಾಲೇಜಿನ ಉಪಪ್ರಾಂಶುಪಾಲೆ ಡಾ. ಸುಜಾತ ಎಚ್.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವ ಸಮೂಹಕ್ಕೆ ಸೈಬರ್ ಕ್ರೈಂ ಕೆಡುಕಿನ ಬಗ್ಗೆ ಪತ್ರಕರ್ತರ ಸಂಘಟನೆ ಮಾಹಿತಿ ಕಾರ್ಯಾಗಾರ ಆಯೋಜಿಸಿರುವುದು ಸಮಯೋಚಿತ ಮತ್ತು ಔಚಿತ್ಯಪೂರ್ಣವಾಗಿದೆ ಎಂದರು. ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ. ಮಾತನಾಡಿ, ಪೊಲೀಸ್ ದಂಡ ಸಂಹಿತೆ ಸಹಿತ ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಜೇಸಿ ರಾಜ್ಯ ತರಬೇತುದಾರ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಪತ್ರಿಕಾ ದಿನಾಚರಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಎನ್‍ಎಸ್‍ಎಸ್ ಘಟಕ ಯೋಜನಾಧಿಕಾರಿ ಕಿಟ್ಟು ಕೆ. ರಾಮಕುಂಜ ಶುಭ ಹಾರೈಸಿದರು. ಪತ್ರಕರ್ತರಾದ ದತ್ತಾತ್ರೇಯ ಹೆಗ್ಡೆ, ಸಂದೀಪ್ ಸಾಲ್ಯಾನ್, ದೀಪಕ್ ಸಾಲ್ಯಾನ್, ಪತ್ರಿಕಾ ಛಾಯಾಗ್ರಾಹಕ ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್ ರಾಯಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter