Published On: Fri, Jul 13th, 2018

ಸಂಕೀರ್ತನಕಾರ, ನಾಟಕಕಾರ, `ಪಂಪ್‍ಸೆಟ್ ಡಾಕ್ಟರ್’ ಎಂ. ಉಮೇಶ್ ಕಾಮತ್ ನಿಧನ

ಮೂಡುಬಿದಿರೆ: ಹಿರಿಯ ಸಂಕೀರ್ತನಕಾರ, ಭಜನಾ ಸಾಹಿತಿ, ಮೂಡಬಿದಿರೆಯ ಮಾರುತಿ ಸ್ಟೋರ್ಸ್ ಸ್ಥಾಪಕ ಎಂ. ಉಮೇಶ ಕಾಮತ್ (71) ಅಲ್ಪ ಕಾಲದ ಅಸೌಖ್ಯದಿಂದ ಜು.13ರಂದು ನಿಧನ ಹೊಂದಿದರು. ಅವರು ಪತ್ನಿ, ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ, ಪತ್ರಕರ್ತ ಗಣೇಶ್ ಕಾಮತ್ ಎಂ. ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.13 mood Umesh Kamath

ತಮ್ಮ 13ನೇ ವಯಸ್ಸಿನಲ್ಲೇ ಭಜನೆಯಲ್ಲಿ ಆಸಕ್ತಿ ಹೊಂದಿ, ಇಂಪಾಗಿ ಹಾಡುವ ಕಲೆಯನ್ನು ಕರಗತಮಾಡಿಕೊಂಡಿದ್ದ ಅವರು 1962ರಲ್ಲಿ ಸಮಾಜ ಸೇವಕ ಜಿ.ವಿ. ಪೈ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸ್ಥಾಪಕ ಸದಸ್ಯರಾಗಿ, ಮುಂದೆ ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಕಾರ್ಕಳ ಗೋಪಾಲಕೃಷ್ಣ ಮಲ್ಯರಿಂದ ಹಾರ್ಮೋನಿಯಂ ಶಿಕ್ಷಣ ಪಡೆದ ಅವರು `ಮೂಡುವೇಣುಪುರ’ ನಾಮಾಂಕಿತದಲ್ಲಿ 300ಕ್ಕೂ ಅಧಿಕ ಕನ್ನಡ – ಕೊಂಕಣಿ ಭಜನೆಗಳನ್ನು ರಚಿಸಿ, ರಾಗ ಸಂಯೋಜಿಸಿ ಹಾಡುತ್ತ ಬಂದವರು. ಸಿರಿಪುರ ಸಾಂಸ್ಕøತಿಕ ಪ್ರತಿಷ್ಠಾನ 2011ರಲ್ಲಿ ಸಂಘಟಿಸಿದ ಕೀರ್ತನ ಕಮ್ಮಟ ಸಂದರ್ಭ ಉಮೇಶ್ ಕಾಮತ್ ಸಮ್ಮಾನ ಸ್ವೀಕರಿಸಿದ್ದರು.

1979ರಿಂದ ಪುರಸಭಾ ಮಾರುಕಟ್ಟೆಯಲ್ಲಿ ಮಾರುತಿ ಸ್ಟೋರ್ಸ್ ಎಂಬ ಪಂಪ್‍ಸೆಟ್, ಟಿಲ್ಲರ್, ಸೈಕಲ್, ಇಲೆಕ್ಟ್ರಿಕಲ್ ಬಿಡಿಭಾಗಗಳ ವ್ಯಾಪಾರ ಮಳಿಗೆ ಸ್ಥಾಪಿಸಿ ನಡೆಸುತ್ತ ಬಂದಿದ್ದ ಅವರು `ಪಂಪ್‍ಸೆಟ್ ಡಾಕ್ಟರ್’ ಎಂದೇ ಹೆಸರಾಗಿದ್ದರು.

ಮೂಡುಬಿದಿರೆ ಶ್ರೀ ವೆಂಕಟರಮಣ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಅವರು 2000-2010ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು.
ಕೊಂಕಣಿ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಉಮೇಶ ಕಾಮತ್ ಅವರು 25ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದು ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. `ವಧೂ ಪರೀಕ್ಷಾ’ ಕೊಂಕಣಿ ನಾಟಕದಲ್ಲಿ ಶೀನಣ್ಣನ ಪಾತ್ರದ ಮೂಲಕ ತಮ್ಮ ಪ್ರತಿಭೆ ಮೆರೆದಿದ್ದ ಅವರು `ತೀ ಮೆಗ್ಗೆಲಿ’ ಕೊಂಕಣಿ ನಾಟಕ ರಚಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗಮನ ಸೆಳೆದಿದ್ದರು.
ಚಿತ್ರ: 13 ಮೂಡ್ ಉಮೇಶ್ ಕಾಮತ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter