ತಲಪಾಡಿಯಿಂದ ಪಂಪ್ವೆಲ್ ರಸ್ತೆ ವಿಚಾರ: ಜೆಡಿಎಸ್ನಿಂದ ಮನವಿ
ಉಳ್ಳಾಲ: ತಲಪಾಡಿಯಿಂದ ಪಂಪ್ ವೆಲ್ ವರೆಗಿನ ಚತುಷ್ಪಥ ರಸ್ತೆಯ ಜೊತೆಗೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ತ್ವರಿತ ಪೂರ್ಣಗೊಳಿಸಲು, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಮತ್ತು ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಗೇಟ್ ನಲ್ಲಿ ಶುಲ್ಕ ತಡೆಹಿಡಿಯುವಂತೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ವತಿಯಿಂದ ಅಪರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ತಲಪಾಡಿಯಿಂದ -ಪಂಪ್ ವೆಲ್ ವರೆಗಿನ ಚತುಷ್ಪಥ ರಸ್ತೆ ಅಸಮರ್ಪಕ, ವಿಳಂಬಿತ ಮತ್ತು ಯೋಜನೆಯಿಲ್ಲದೆ ನಡೆಯುತ್ತಿರುವುದರಿಂದಾಗಿ ವಾಹನ ಸವಾರರಿಗೆ ಮತ್ತು ಜನರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಎಂಟು ವರ್ಷಗಳಿಂದ ನಡೆಯುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಹೆದ್ದಾರಿ ಸುತ್ತಮುತ್ತಲಿನ ರಸ್ತೆಗಳೆಲ್ಲಾ ತಡೆಗಳಿಂದ ಕೂಡಿದೆ. ಕಾಮಗಾರಿಯ ಸೊತ್ತುಗಳು, ಮಣ್ಣು, ತಗಡಿನ ರಾಶಿ, ಕಬ್ಬಿಣದ ತುಂಡುಗಳು ರಾ.ಹೆ. ಬದಿಯಲ್ಲೇ ಇರುವುದರಿಂದ ಸಂಚರಿಸುವುದು ಅಪಾಯಕಾರಿಯಾಗಿದೆ. ನಿತ್ಯ ಟ್ರಾಫಿಕ್ ಜಾಮ್ ಸಂಭವಿಸಿ, 2 ತಾಸಿಗೂ ಮಿಕ್ಕಿ ಜನರು ಸಿಕ್ಕಿಕೊಂಡು ಸಂಕಷ್ಟ ಅನುಭವಿಸುವಂತಾಗಿದೆ. ಗುತ್ತಿಗೆದಾರರು ಫ್ಲೈಓವರಿನ ಕಾಮಗಾರಿಯನ್ನು ಶೀಘ್ರವಾಗಿ ನಡೆಸಿಕೊಡುವಂತೆ ಆದೇಶ ಹೊರಡಿಸಬೇಕು. ಅಲ್ಲದೆ ನ್ಯಾಷನಲ್ ಹೈವೇ ಅಥಾರಿಟಿ ಮೂಲಕ ಪರ್ಯಾಯ ವ್ಯವಸ್ಥೆಯನ್ನು ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಗೇಟ್ ಶುಲ್ಕವನ್ನು ತಡೆಹಿಡಿಯಲು ಜಿಲ್ಲಾಧಿಕಾರಿಗಳು ಆದೇಶಿಸಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.
ಜಾತ್ಯಾತೀತ ಜನತಾದಳ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಜೆಡಿಎಸ್ ರಾಜ್ಯ ಮುಖಂಡ ನಝೀರ್ ಉಳ್ಳಾಲ್, ರಾಜ್ಯ ಕಾರ್ಯದರ್ಶಿ ದಿನಕರ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷ ಹೆಚ್.ಸಾಲಿ, ಉಳ್ಳಾಲ ನಗರ ಅಧ್ಯಕ್ಷ ಪುತ್ತುಮೋನು ಹುಸೈನ್, ಕ್ಷೇತ್ರ ಕಾರ್ಯದರ್ಶಿ ಗಂಗಾಧರ್ ಉಳ್ಳಾಲ್, ಖಲೀಲ್ ಮುಕ್ಕಚ್ಚೇರಿ, ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಅಕ್ಸಾ ಉಸ್ಮಾನ್, ಇಬ್ರಾಹಿಂ ಉಳ್ಳಾಲ ಉಪಸ್ಥಿತರಿದ್ದರು.