ಸ್ಕಿಲ್ ಗೇಮ್ ಮೋಹಕ್ಕೆ ಸಾವಿರಾರು ಮಂದಿ ಬಲಿ..!
ಸುಳ್ಯ : ಅನುಮತಿ ಪತ್ರದಲ್ಲಿ ಮನೋರಂಜನಾ ಆಟದ ಕೇಂದ್ರ. ಅದನ್ನು ನಂಬಿ ಸ್ಕಿಲ್ ಗೇಮ್ ಕೇಂದ್ರಕ್ಕೆ ಕಾಲಿಟ್ಟವರ ಬದುಕು ಬೀದಿಗೆ ಬಿದ್ದಿದೆ..!ಇದೊಂದು ಜೂಜಾಟ ಕೇಂದ್ರವಾಗಿ ಬದಲಾಗಿದೆ. ಸುಲಭವಾಗಿ ಹಣ ಗಳಿಸುವ ಆಸೆ ಹುಟ್ಟಿಸಿ ಬಡವರ ಬದುಕು ಕಸಿಯುತ್ತಿದೆ. ಸುಳ್ಯ, ಪುತ್ತೂರು ಸೇರಿದಂತೆ ಹಲವಡೆ ಈ ಆಟಕ್ಕೆ ದಾಸರಾಗಿ ಸಾವಿರಾರು ಮಂದಿ ಮನೆ, ಉದ್ಯೋಗ ಕಳೆದುಕೊಂಡಿದ್ದಾರೆ. ಅಚ್ಚರಿ ಸಂಗತಿ ಅಂದರೆ, ಕ್ರಮ ಕೈಗೊಳ್ಳಬೇಕಾದ ಇಲಾಖೆಗಳಲ್ಲೇ ಗೊಂದಲ ಏರ್ಪಟ್ಟಿದೆ..!
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತಹ ನಡೆಯುತ್ತಿರುವ ಈ ಆಟ ಎಗ್ಗಿಲ್ಲದೆ ಸಾಗಿದೆ. ಬಡ ಚಾಲಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದಂಧೆಯ ಕಬಂಧ ಬಾಹುವಿಗೆ ಸಿಲುಕಿದ್ದಾರೆ. ದಿನೇ-ದಿನೇ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಲಾಟರಿ ತರಹ ಬದುಕು ಕಸಿಯುತ್ತಿದೆ. ಇದನ್ನು ನಿಯಂತ್ರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನುತ್ತಾರೆ ಹಿಂದೂ ಸಂಘಟನೆಯ ಮುಂದಾಳು ದಿನೇಶ್ ಜೈನ್ ಪುತ್ತೂರು.
ಕಾನೂನು ಕ್ರಮವಿಲ್ಲ..!
ಪೊಲೀಸ್ ಇಲಾಖೆ ಹೇಳುವ ಪ್ರಕಾರ, ಸ್ಥಳೀಯಾಡಳಿತಗಳು ಸ್ಕಿಲ್ಗೇಮ್ಗಳಿಗೆ ಪರವಾನಿಗೆ ಕೊಟ್ಟಿದೆ. ಹಾಗಾಗಿ ನಾವು ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಆದರೆ ಸ್ಥಳೀಯಾಡಳಿತಗಳು ಹೇಳುವ ಪ್ರಕಾರ, ನಾವು ಕಟ್ಟಡ ಪರವಾನಿಗೆ ನೀಡುತ್ತೇವೆ. ಇಂತಹ ಆಟಗಳಿಗೆ ಅಲ್ಲ. ನಾವು ಜವಬ್ದಾರಿ ಹೂರುವುದು ಹೇಗೆ ಎಂದು ಪ್ರಶ್ನಿಸುತ್ತಿದೆ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆಯೀಗ ಉದ್ಭವಿಸಿದೆ.
* ಅನುಮತಿ ಇದೆಯಂತೆ..?
ಈ ಕೇಂದ್ರದ ಮಾಲಕರು, ಇದು ಅಕ್ರಮ ಅಡ್ಡೆ ಅಲ್ಲ. ನ್ಯಾಯಾಲಯದ ಅನುಮತಿ ಇದೆ ಅನ್ನುತ್ತಾರೆ. ಆದರೆ ಕೇಂದ್ರ ಕಾರ್ಯಾಚರಿಸುತ್ತಿರುವ ಪ್ರದೇಶದ ಸ್ಥಳೀಯಾಡಳಿತ ಅಥವಾ ಪೆÇಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ.
ನ್ಯಾಯಾಲಯದಿಂದ ಮನೋರಂಜನೆ ಆಟವಾಗಿ ಪರಿಗಣಿಸಿ ಅನುಮತಿ ಪಡೆದಿರಬಹುದು. ಆದರೆ ಇಲ್ಲಿ ಮನೋರಂಜನೆ ನೆಪದಲ್ಲಿ ಜೂಜಾಟ ನಡೆಯುತ್ತಿದೆ. ಕಾಯಿನ್ಗಳಿಗೆ ನಿರ್„ಷ್ಟ ಬಣ್ಣ ಬಳಿದು, ಇಂತಿಷ್ಟು ದರ ಫಿಕ್ಸ್ ಮಾಡಿ ಜನರನ್ನು ಸೆಳೆಯಲಾಗುತ್ತಿದೆ. ಕೆಲವರು ಹಣ ಗಳಿಸಿದರೆ, ಹಲವರು ಕಳೆದುಕೊಳ್ಳುತ್ತಾರೆ. ಇದು ಕಾನೂನು ಉಲ್ಲಂಘನೆಯ ಆಟ ಅನ್ನುತ್ತಾರೆ ಕೆಲ ಕಾನೂನು ತಜ್ಞರು.
ರಿಕ್ಷಾ, ಮನೆ ಮಾರಿದ್ದಾರೆ..!
ಸುಳ್ಯ ನಗರದಲ್ಲಿ ಸ್ಕಿಲ್ಗೇಮ್ ಪ್ರಭಾವಕ್ಕೆ ಸಿಲುಕಿ ರಿಕ್ಷಾ, ಮನೆ ಮಾರಾಟ ಮಾಡಿ ಬೀದಿಗೆ ಬಿದ್ದಿದ್ದಾರೆ. ಕೆಲವರು ಸಾಲ ರೂಪದಲ್ಲಿ ಹಣ ಪಡೆದು ತೀರಿಸಲಾಗದೆ ಊರು ಬಿಟ್ಟಿದ್ದಾರೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಕೇಂದ್ರಗಳ ಸುತ್ತ ದಿನ ಕಳೆಯುತ್ತಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಮತ್ತೆ-ಮತ್ತೆ ಅದರ ಚಟಕ್ಕೆ ಬಿದ್ದು ಬದುಕು ಕಳೆದುಕೊಳ್ಳುತ್ತಿದ್ದಾನೆ ಅನ್ನುತ್ತಾರೆ ಸ್ಕಿಲ್ ಗೇಮ್ ವಿರುದ್ಧ ಹೋರಾಟ ನಡೆಸುತ್ತಿರುವ ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ.
* ಪರವಾನಿಗೆ ಕೊಡಬಾರದು
ಸ್ಕಿಲ್ಗೇಮ್ ಕೇಂದ್ರಗಳಿಗೆ ಸ್ಥಳೀಯಾಡಳಿತಗಳೇ ಪರವಾನಿಗೆ ಕೊಡುತ್ತಿರುವ ಮಾಹಿತಿ ಇದೆ. ಹಾಗಾಗಿ ನಾವು ದಾಳಿ ಮಾಡಿದರೂ, ಪರವಾನಿಗೆ ಇದೆ ಅನ್ನುತ್ತಾರೆ. ಜಾಲ್ಸೂರು ವ್ಯಾಪ್ತಿಯಲ್ಲಿ ಸ್ಕಿಲ್ ಗೇಮ್ ಕೇಂದ್ರ ತೆರೆಯುವ ಮಾಹಿತಿ ಸಿಕ್ಕ ತತ್ಕ್ಷಣ ಸ್ಥಳೀಯಾಡಳಿತದ ಗಮನಕ್ಕೆ ತಂದು ಪರವಾನಿಗೆ ಕೊಡದಂತೆ ವಿನಂತಿಸಿದ್ದೇವು. ಆದರೆ ಅಲ್ಲಿ ಕೊಟ್ಟಿದ್ದಾರೆ. ಹೀಗಾದರೆ ನಿಯಂತ್ರಣ ಹೇಗೆ ಸಾಧ್ಯ?
*ಮಂಜುನಾಥಎಸ್.ಐ, ಸುಳ್ಯ ಠಾಣೆ
ಸ್ಕಿಲ್ಗೇಮ್ ಕೇಂದ್ರಗಳಿಗೆ ನಾವು ಪರವಾನಿಗೆ ಕೊಟ್ಟಿಲ್ಲ. ಹಿಂದೆ ಕೊಟ್ಟಿರುವ ಬಗ್ಗೆಯು ದಾಖಲೆಗಳು ಇಲ್ಲ. ಅಂತಹ ಅಡ್ಡೆಗಳು ಇದ್ದರೆ ನಮಗೆ ದೂರು ಕೊಡಲಿ. ನಾವು ಕ್ರಮ ಕೈಗೊಳ್ಳುತ್ತೇವೆ.
ಗೋಪಾಲ ನಾೈಕ್, ಮುಖ್ಯಾಧಿಕಾರಿ ನ.ಪಂ ಸುಳ್ಯ
* ವರದಿ: ಲೋಕೇಶ್ ಗುಡ್ಡೇಮನೆ