Published On: Sat, Jun 16th, 2018

ಪುತ್ತೂರು: ಶೋಚನೀಯ ಸ್ಥಿತಿಯಲ್ಲಿ ಪುಣ್ಚಪ್ಪಾಡಿ, ಕುಮಾರಮಂಗಲ ಸರಕಾರಿ ಶಾಲೆಗಳು!

14ptr7-clr

ಕುಮಾರಮಂಗಲ: ಖಾಯಂ ಶಿಕ್ಷಕರೇ ಇಲ್ಲ…!!!

ಪುತ್ತೂರು: ಶೈಕ್ಷಣಿಕ ಬದುಕು ಎಲ್ಲರಿಗೂ ದೊರೆಯುವಂತಾಗಬೇಕು. ಆ ಮೂಲಕ ಸುಶಿಕ್ಷಿತ ಬದುಕಿಗೆ ಸಮಾಜವನ್ನು ಒಯ್ಯುವ ಉದ್ದೇಶದಿಂದ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿದೆ. ಬಾ ಮರಳಿ ಶಾಲೆಗೆ ಯೋಜನೆಯೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿಕೊಂಡು ಶಿಕ್ಷಣ ನೀಡುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉತ್ತಮ ಯೋಜನೆ ಮತ್ತು ಚಿಂತನೆಗಳಾಗಿದ್ದರೂ ಶೈಕ್ಷಣಿಕ ಕ್ರಾಂತಿಯ ಕಡೆಗೆ ಗಮನಹರಿಸಬೇಕಾಗಿದ್ದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಗಂಭೀರವಾದ ಚಿಂತನೆ ನಡೆಸುತ್ತಿಲ್ಲ ಎಂಬ ಆರೋಪ ಜನತೆಯಿಂದ ವ್ಯಕ್ತವಾಗುತ್ತಿದೆ.

ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ‘ಗುಣಮಟ್ಟದ ಶಿಕ್ಷಣ’ದ ಕನಸು ನನಸಾಗಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಗೊಳ್ಳುತ್ತದೆ. ಸರಕಾರಿ ಶಾಲೆಗಳ ಶೋಚನೀಯ ಸ್ಥಿತಿಗೆ ಉದಾಹರಣೆ ಪುಣ್ಚಪ್ಪಾಡಿ ಹಾಗೂ ಕುಮಾರಮಂಗಲ ಶಾಲೆಗಳು.

ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾದ ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದಲ್ಲಿ ಇರುವ ಎರಡು ಸರ್ಕಾರಿ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಕಾಡುತ್ತಿದೆ. ೬೭ ವಿದ್ಯಾರ್ಥಿಗಳು ಇರುವ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವುದು ಒಬ್ಬರು ಶಿಕ್ಷಕರಾದರೆ, ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ ಖಾಯಂ ಶಿಕ್ಷಕರೇ ಇಲ್ಲ…!: ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ ವರ್ಷವಷ್ಟೇ ೯೦ನೇ ವರ್ಷಾಚರಣೆಯನ್ನು ನವತಿ ಸಂಭ್ರಮವಾಗಿ ಆಚರಿಸಿದೆ. ನವತಿ ಸಂಭ್ರಮದ ಸವಿನೆನಪಿನಲ್ಲಿ ಸುಂದರ ಕೊಠಡಿಯೊಂದರ ನಿರ್ಮಾಣ ಕಾರ್ಯ ರೂ.೪ಲಕ್ಷ ವೆಚ್ಚದಲ್ಲಿ ನಡೆದಿದೆ. ಉತ್ತಮ ಶೌಚಾಲಯ ವ್ಯವಸ್ಥೆಯೂ ಇದೆ. ಶಾಲಾ ಕಟ್ಟಡವೂ ಸುಂದರವಾಗಿದೆ. ಎಲ್ಲಾ ವ್ಯವಸ್ಥೆಗಳು ಇಲ್ಲಿ ಅಚ್ಚುಕಟ್ಟಾಗಿ ಇದ್ದರೂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.

ಪುಣ್ಚಪ್ಪಾಡಿ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದು, ಒಟ್ಟು ೬೭ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ನಿಯi ಪ್ರಕಾರ ಇಲ್ಲಿ ಕನಿಷ್ಠ ೩ ಶಿಕ್ಷಕರಾದರೂ ಇಲ್ಲಿ ಇರಬೇಕಾಗಿತ್ತು. ಆದರೆ ಈಗ ಇಲ್ಲಿರುವುದು ಬರೀ ಒಬ್ಬರು ಮಾತ್ರ. ಮುಖ್ಯ ಶಿಕ್ಷಕರ ಆಡಳಿತಾತ್ಮಕ ಜವಾಬ್ದಾರಿಯ ಹೊರೆಯೂ ಅವರ ಮೇಲಿದೆ. ಕಳೆದ ವರ್ಷ ಇಬ್ಬರು ಅತಿಥಿ ಶಿಕ್ಷಕರು ಇದ್ದರೂ ಈ ಬಾರಿ ಈ ತನಕ ಅತಿಥಿ ಶಿಕ್ಷಕರ ನೇಮಕ ಆಗದೇ ಇರುವುದರಿಂದ ಪ್ರಸ್ತುತ ಇಲ್ಲಿರುವ ಶಿಕ್ಷಕಿ ರಶ್ಮಿತಾ ಜೈನ್ ಅವರು ತರಗತಿಯಿಂದ ತರಗತಿಗೆ ಅಲೆದಾಡುವ ಶಿಕ್ಷಕಿಯಾಗಿದ್ದಾರೆ. ಆದರೂ ಶಿಕ್ಷಣ ಇಲಾಖೆ ಈ ಶಾಲೆಯ ವಿಚಾರದಲ್ಲಿ ಮೌನವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಹೆಚ್ಚಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಇರುವ ಪುಣ್ಚಪ್ಪಾಡಿ ಶಾಲೆಯಲ್ಲಿ ೪೬ ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿದ್ದಾರೆ. ದೇವಸ್ಯ ಎಂಬಲ್ಲಿನ ದಲಿತ ಕಾಲೋನಿಯ ಮಂದಿ ೧ ಕಿಮೀ ಹತ್ತಿರವಿರುವ ಸವಣೂರು ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸದೆ ಗ್ರಾಮ ಮೋಹದಿಂದ ೩ ಕಿಮೀ ದೂರದದಲ್ಲಿರುವ ಗ್ರಾಮದ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ದೇವಸ್ಯ ಕಾಲೋನಿಯ ೧೬ ಮಂದಿ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ.

ಪುಣ್ಚಪ್ಪಾಡಿ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಿ.ಡಿ.ಗಂಗಾಧರ ರೈ ದೇವಸ್ಯ ಅವರು ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ತಕ್ಷಣ ಶಾಲೆಗೆ ಮೂರು ಶಿಕ್ಷಕರನ್ನು ನೇಮಕಗೊಳಿಸದಿದ್ದರೆ ವಾರದೊಳಗೆ ಎಸ್‌ಡಿಎಂಸಿ ಜೊತೆ ಸೇರಿ ಪ್ರತಿಭಟನೆ ನಡೆಸುವುದಾಗಿ ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ.ಬಿ.ಕೆ ಅವರು ಎಚ್ಚರಿಸಿದ್ದಾರೆ.

ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹೇಶ್ ಕೆ, ಮತ್ತು ಸವಣೂರಿನ ‘ಬೊಳ್ಳಿ ಬೊಲ್ಪು’ ತುಳು ಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ, ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಅವರು ನಿನ್ನೆ ನಿಯೋಗದಲ್ಲಿ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಅವರು ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದ್ದಾರೆ.
ಒಬ್ಬರು ಶಿಕ್ಷಕರನ್ನು ನಾಳೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ನಿಯೋಜನೆ ಮಾಡುತ್ತೇವೆ.ಅತಿಥಿ ಶಿಕ್ಷರರ ನೇಮಕವಾದ ಬಳಿಕ ನಿಮ್ಮ ಶಾಲೆಗೂ ಕೊಡುತ್ತೇವೆ ಎಂಬ ಭರವಸೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಿಕ್ಕಿದ್ದು, ಈ ಭರವಸೆಯ ಮೇಲೆ ಮಕ್ಕಳ ಶಿಕ್ಷಣ ಭವಿಷ್ಯ ನಿಂತಿದೆ.

ಇದೇ ಗ್ರಾಮದ ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯದ್ದು ಇದಕ್ಕಿಂತಲೂ ಶೋಚನೀಯ. ೧ರಿಂದ ೭ನೇ ತನಕ ತರಗತಿ ಇರುವ ಕುಮಾರಮಂಗಲ ಶಾಲೆಯಲ್ಲಿ ೧೬ ಮಕ್ಕಳಿದ್ದಾರೆ. ಆದರೆ ಖಾಯಂ ಶಿಕ್ಷಕರು ಯಾರೂ ಇಲ್ಲ. ಕಳೆದ ವರ್ಷ ಇಲ್ಲಿ ಒಬ್ಬರು ಶಿಕ್ಷಕ ನಿಯೋಜನೆಯಲ್ಲಿದ್ದರು. ಇನ್ನೊಬ್ಬರು ಅತಿಥಿ ಶಿಕ್ಷಕರಿದ್ದರು. ಆದರೆ ಈಗ ಯಾರೂ ಇಲ್ಲ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮತ್ತು ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದ ವ್ಯಕ್ತಿ ವಾರದ ೬ ದಿನವನ್ನು ೩ ದಿನಗಳಂತೆ ಹಂಚಿಕೊಂಡು ಪಾಠ ಮಾಡಬೇಕಾದ ದುರ್ಗತಿ ಇಲ್ಲಿಯದ್ದಾಗಿದೆ. ಇಂತಹ ಸ್ಥಿತಿಯಲ್ಲಿ ಸರಕಾರಿ ಶಾಲೆಗಳ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವೇ ಎಂಬ ಪ್ರಶ್ನೆಗೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಉತ್ತರ ನೀಡಬೇಕಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter