Published On: Thu, Jun 14th, 2018

ಎಡಪದವು: ಭಾರೀ ಮಳೆಗೆ ಗುಡ್ಡ ಕುಸಿತ; ರಸ್ತೆ ಸಂಚಾರ ಅಪಾಯದಲ್ಲಿ

1406malali9 (1)

ಎಡಪದವು: ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗುರುಪುರ ಕೈಕಂಬ ಸಮೀಪದ ಮಳಲಿ ನಾಡಾಜೆ ಸಮೀಪದ ಇಂತ್ರ್‍ದೋಟ ಎಂಬಲ್ಲಿನ ಗುಡ್ಡ ಕುಸಿದು ಕಲ್ಲು ಉರುಳುವ ಸ್ಥಿತಿಯಲ್ಲಿದ್ದು, ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ, ಇಲ್ಲಿ ಹಲವಾರು ಮನೆಗಳು ಕೂಡಾ ಇರುವುದರಿಂದ ಇಲ್ಲಿನವರು ಭೀತಿಯಿಂದ ಕಾಲ ಕಳೆಯುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಸಡಿಲಗೊಂಡು ಉರುಳುತ್ತಿದೆ. ಇದರಿಂದ ಗುಡ್ಡದ ಮೇಲಿದ್ದ ಕಲ್ಲು ಮಣ್ಣು ಸಮೇತ ಜಾರಿ ಬಿದ್ದಿದ್ದು, ರಸ್ತೆಗೆ ಉರುಳುವ ಸಾಧ್ಯತೆ ಇದೆ.

ಇಲ್ಲಿ ಮಳಲಿಯಿಂದ ಕೈಕಂಬಕ್ಕೆ ನೂರಾರು ವಾಹನಗಳು, ಪಾದಾಚಾರಿಗಳು ಸಂಚರಿಸುತ್ತಿದ್ದು, ಆತಂಕ ಎದುರಿಸುತ್ತಿದ್ದಾರೆ. ಸಮೀಪದಲ್ಲಿ ಹಲವಾರು ಮನೆಗಳಿರುವುದಲ್ಲದೆ, ರಸ್ತೆಯ ಭಾಗ ಇಳಿಜಾರಾಗಿರುವುದರಿಂದ ಬಂಡೆಕಲ್ಲು ರಸ್ತೆಯಲ್ಲಿ ಉರುಳುವ ಸಾಧ್ಯತೆಯೂ ಇದೆ. ಈಚೆಗೆ ಇನ್ನಷ್ಟು ಮಳೆ ಸುರಿಯುತ್ತಿದ್ದು, ಇನ್ನೂ ಹಲವಾರು ತಿಂಗಳು ಭಾರೀ ಮಳೆಯಾಗಲಿದೆ. ಮಳೆ ಆಗುತ್ತಿದ್ದಂತೆ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಉರುಳುತ್ತಲೇ ಇದ್ದು, ಇದರ ಜೊತೆಗೆ ಮಣ್ಣು ಸಡಿಲಗೊಂಡು ಕಲ್ಲು ಕೂಡಾ ಉರುಳುವ ಸಾಧ್ಯತೆ ಇದೆ.

ಗಂಜಿಮಠ ಗ್ರಾಮ ಪಂಚಾಯತ್ ವತಿಯಿಂದ ರಸ್ತೆಗೆ ಉರುಳಿದ ಮಣ್ಣನ್ನು ಬದಿಗೆ ಸರಿಸಿ ನೀರು ಹರಿಯಲು ಜಾಗ ಮಾಡಿಕೊಡಲಾಗಿದೆ. ಆದರೂ ಕೂಡಾ ಅಪಾಯ ತಪ್ಪಿಲ್ಲ. ಈ ಕಲ್ಲನ್ನು ಒಡೆದು ಹಾಕಿ, ಸಾರ್ವಜನಿಕರ ಭಯವನ್ನು ಹೋಗಲಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter