Published On: Wed, Jun 13th, 2018

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಐದು ಕಡೆ ಭೂಕುಸಿತ!

pic

ಬೆಳ್ತಂಗಡಿ: ಇತ್ತೀಚೆಗಿನ ವರ್ಷಗಳಲ್ಲೇ ನಡೆದ ಭಾರಿ ಭೂಕುಸಿತದಿಂದ ಕಂಗೆಟ್ಟಿರುವ ಪಶ್ಚಿಮ ಘಟ್ಟ ತಪ್ಪಲಿನ ಚಾರ್ಮಾಡಿ ಹೆದ್ದಾರಿಯನ್ನು ಸಮಸ್ಥಿತಿಗೆ ತರಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹರಸಾಹಸ ಪಡುತ್ತಿರುವ ನಡುವೆಯೇ ಭಾರೀ ಮಳೆ ಮುಂದುವರಿದಿದ್ದು, ಮತ್ತೆ ಐದು ಕಡೆ ಭೂಕುಸಿತ ಸಂಭವಿಸಿದೆ.

ಸೋಮವಾರ ಚಾರ್ಮಾಡಿ ಘಾಟಿಯ ಎರಡು ಮತ್ತು ಮೂರನೇ ತಿರುವಿನ ಬಳಿ ನಡೆದ ಭೂಕುಸಿತದ ಬಳಿಕ ಇಡೀ ರಾಷ್ಟ್ರೀಯ ಹೆದ್ದಾರಿ 73ರ ಸುಮಾರು 25 ಕಿ.ಮೀ ಭಾಗದಲ್ಲಿ 13 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆಗಿತ್ತು. ವಾಹನಗಳ ಓಡಾಟಕ್ಕೆ ಹೆದ್ದಾರಿಯನ್ನು ಸಿದ್ಧಪಡಿಸುವ ಉದ್ದೇಶದಿಂದ 2 ದಿನಗಳ ಕಾಲ ಯಾವುದೇ ವಾಹನ ಓಡಾಡದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

ಕಾರ್ಯಾಚರಣೆಗೆ ಅಡ್ಡಿ: ಮಂಗಳವಾರ ರಾತ್ರಿ ಬಳಿಕ ಬುಧವಾರದವರೆಗೆ ಮತ್ತೆ ಐದು ಕಡೆ (3, 4, 6, 7 ಮತ್ತು 9ನೇ ತಿರುವು) ಗುಡ್ಡಗಳು ಮರಗಳ ಸಮೇತ ಕುಸಿದು ರಸ್ತೆ ಮೇಲೆ ಬಿದ್ದಿವೆ. 6ನೇ ತಿರುವಿನಲ್ಲಿ ರಸ್ತೆಯ ಕೆಳಭಾಗದ ತಡೆಗೋಡೆ ಕುಸಿಯುತ್ತಿದೆ. ತಡೆಗೋಡೆಯ ಕಲ್ಲುಗಳು ಬೀಳಲಾರಂಭಿಸಿದ್ದು, ತಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ. 8ನೇ ತಿರುವಿನಲ್ಲಿಯೂ ಕೆಳಭಾಗದ ತಡೆಗೋಡೆ ಕುಸಿಯುವ ಸ್ಥಿತಿ ತಲುಪಿದ್ದು, ಕುಸಿತ ಸಂಭವಿಸಿದರೆ ಘಾಟಿಯಲ್ಲಿ ವಾಹನ ಸಂಚಾರ ಸಾಧ್ಯವೇ ಇಲ್ಲ.

ಮಂಗಳವಾರ ರಾತ್ರಿ ಮಣ್ಣು ತೆಗೆಯುತ್ತಿದ್ದ ವೇಳೆ ಜೆಸಿಬಿ ಯಂತ್ರದ ಮೇಲೆ ಮಣ್ಣು ಕುಸಿದು ಬಿದ್ದಿದೆ. ರಾತ್ರಿ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿ ನಡೆಸುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿವರೆಗೆ ಕಾರ್ಯಾಚರಣೆಗೆ ಅಗತ್ಯ ಲೈಟ್ ಮತ್ತಿತರ ಸಲಕರಣೆಗಳಿವೆ, ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಹೆದ್ದಾರಿ ಇಲಾಖೆ ತಿಳಿಸಿದೆ.

ಸಂಚಾರ ನಿರ್ಬಂಧ ವಿಸ್ತರಣೆ?: ಮಂಗಳವಾರದ ಪರಿಸ್ಥಿತಿ ಗಮನಿಸಿ, ಇನ್ನೆರಡು ದಿನ (ಜೂನ್ 13, 14) ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿರುವುದು ಮತ್ತು ಭೂಕುಸಿತ ಸಂಭವಿಸುತ್ತಿರುವುದು ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಒಂದು ವೇಳೆ ಕಾರ್ಯಾಚರಣೆ ಮುಗಿದರೂ, ಮಳೆ ಮುಂದುವರಿದರೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಅಪಾಯಕಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧ ಕೆಲವು ದಿನಗಳ ಮಟ್ಟಿಗೆ ಮುಂದೂಡುವ ಸಾಧ್ಯತೆಗಳೂ ಇಲ್ಲದ್ದಿಲ್ಲ. ಈ ಬಗ್ಗೆ ಗುರುವಾರ ಸಾಯಂಕಾಲ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರಿಗಳಿಗೆ ಸಮಸ್ಯೆ: ಕಾಮಗಾರಿ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಬಂದ್ ಆಗಿದ್ದು, ಇದೀಗ ಚಾರ್ಮಾಡಿ ಘಾಟಿಯೂ ಬಂದ್ ಆಗಿರುವುದರಿಂದ ಶ್ರೀಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ ಸಹಿತ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವುದು ಕಷ್ಟವಾಗಿದೆ. ಅಲ್ಲದೆ ಹೂವು, ತರಕಾರಿ ಇನ್ನಿತರ ದಿನಬಳಕೆಯ ವಸ್ತುಗಳೂ ಇದೇ ಮಾರ್ಗದಲ್ಲಿ ದಿನನಿತ್ಯ ಬರಬೇಕಾಗಿದ್ದು, ವ್ಯಾಪಾರ ವ್ಯವಹಾರಕ್ಕೂ ಅಡಚಣೆ ಉಂಟಾಗಿದೆ. ಅಗತ್ಯ ಕೆಲಸಗಳಿಗಾಗಿ ಬೆಂಗಳೂರು ಕಡೆ ಹೋಗುವವರು ಸದ್ಯ ಮೈಸೂರು ಮಾರ್ಗ ನೆಚ್ಚಿಕೊಂಡಿದ್ದಾರೆ.

ಘಾಟಿ ಸಂಚಾರ ಇನ್ನು ಕಷ್ಟ: ಘಾಟಿಯಲ್ಲಿ ಭೂಕುಸಿತ ಹಾಗೂ ಕಾಮಗಾರಿಗಳಿಂದಾಗಿ ಬಹುತೇಕ ಕಡೆಗಳಲ್ಲಿ ಡಾಂಬರು ಕಿತ್ತುಹೋಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡದಾದ ಹೊಂಡಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಡಕಾಗಲಿದೆ. ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಅದರಿಂದಾಗಿ ರಸ್ತೆಯಲ್ಲಿರುವ ಹೊಂಡಗಳನ್ನು ಗುರುತಿಸುವುದು ಅಸಾಧ್ಯವಾಗಲಿದೆ. ಚಾರ್ಮಾಡಿ ಘಾಟಿ ಸಂಚಾರ ಮುಕ್ತವಾದ ನಂತರ ಮಳೆ ಕಡಿಮೆಯಾಗುವ ತನಕ ಈ ವ್ಯಾಪ್ತಿಯಲ್ಲಿ ಒಂದೆರಡು ಜೆಸಿಬಿ ಯಂತ್ರಗಳು ಹಾಗೂ ತುರ್ತು ಕಾಮಗಾರಿ ನಡೆಸಲು ತಾತ್ಕಾಲಿಕ ಸಿಬ್ಬಂದಿ ನೇಮಿಸಿದರೆ ಮಾತ್ರ ರಸ್ತೆ ಸಂಚಾರ ಸುಗಮವಾಗಬಹುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter