Published On: Tue, Jun 5th, 2018

ಇಂದು ವಿಶ್ವ ಪರಿಸರ ದಿನ: ನಾವೇನು ಮಾಡಬೇಕು?

environmental-protection-326923_960_720

ಇಂದು ವಿಶ್ವ ಪರಿಸರ ದಿನ. ಪರಿಸರ ಸಂರಕ್ಷಣೆ, ಭೂಮಿಯ ಸಂರಕ್ಷಣೆ ಕುರಿತಂತೆ ಜಾಗೃತಿಗಾಗಿ ಹುಟ್ಟಿಕೊಂಡದ್ದು ವಿಶ್ವ ಪರಿಸರ ದಿನಾಚರಣೆ. 1972ರಲ್ಲಿ ವಿಶ್ವಸಂಸ್ಥೆ ಜೂ.5ನ್ನು ವಿಶ್ವ ಪರಿಸರ ದಿನವನ್ನಾಗಿ ಘೋಷಿಸಿದ್ದು, ಆ ನಂತರದಲ್ಲಿ ಪ್ರಪಂಚಾದ್ಯಂತ ಪರಿಸರ ಸಂರಕ್ಷಣೆಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲೂ ಇದರ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಯಲ್ಲಿ ಪ್ರತಿ ವ್ಯಕ್ತಿಯ ಪಾಲುದಾರಿಕೆಯೂ ಅಗತ್ಯವಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ರೂಢಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನದ ನೆವದಲ್ಲಿ ಪರಿಸರ ಸಂರಕ್ಷಣೆಗಾಗಿ, ನಾವೇನು ಮಾಡಬಹುದು? ಎಂಬ ಕುರಿತ ಕೆಲ ಮಾಹಿತಿ ತುಣುಕುಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ.

ಪರಿಸರ ಸಂರಕ್ಷಣೆಯ ಅಗತ್ಯ ಅರಿಯಿರಿ, ತಿಳಿಸಿರಿ: ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಹಸಿರಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಹಾಗೆ ಮಾಡುವುದರೊಂದಿ ಇದರ ಅಗತ್ಯಗಳನ್ನು ನಾವು ಇತರರಿಗೆ ತಿಳಿಹೇಳುವುದು ಕೂಡ ಮಹತ್ತರ ಕಾರ್ಯ. ಅದಕ್ಕಾಗಿ ಕುಟುಂಬದವರೊಂದಿಗೆ, ಕಚೇರಿಯಲ್ಲಿ, ನೆರೆಹೊರೆಯವರು, ಸ್ನೇಹಿತರೊಂದಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿ, ಚರ್ಚಿಸಿ. ನಿಮಗೆ ಗೊತ್ತಿರುವುದನ್ನು ಅವರಿಗೆ ಹೇಳಿ, ಅವರಿಂದ ಗೊತ್ತಿಲ್ಲದ ಮಾಹಿತಿಯನ್ನು ತಿಳಿಯಿರಿ. ಸಂರಕ್ಷಣೆಯ ಮಾಹಿತಿ ತಿಳಿವಳಿಕೆ ಪಡೆಯುವುದರೊಂದಿಗೆ ಹಂಚಿಕೊಳ್ಳುವುದು ಒಂದೊಳ್ಳೆ ಕಾರ್ಯ.

ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ: ನಾವು ಬಳಸುವ ಪ್ರತಿ ವಸ್ತು ಪರಿಸರದ ಮೇಲೆ ಹಾನಿಯಾಗದಂತೆ ನೋಡಿಕೊಳ್ಳುವುದು ಉತ್ತಮ ಕಾಳಜಿ. ಇದಕ್ಕಾಗಿ ಆಹಾರ ನಿಯಮಿತ ಬಳಕೆ. ಬೇಕಾದಷ್ಟನ್ನೇ ತಯಾರಿಸಿ ಹೆಚ್ಚುವರಿಯಾದ್ದನ್ನು ಎಸೆಯದೇ ಇರುವ ಪರಿಪಾಠ ನಮ್ಮದಾಗಬೇಕು. ಪರಿಸರ ಸ್ನೇಹಿ ಬಟ್ಟೆ, ತೊಡುಗೆಗಳು, ಪ್ಲಾಸ್ಟಿಕ್‌ ಬಳಸದೇ, ಎಲ್ಲೆಂದರಲ್ಲಿ ಬಿಸಾಕದೇ ಇರುವುದು, ಆದಷ್ಟೂ ಕಡಿಮೆ ಕಸದ ಉತ್ಪತ್ತಿ, ನೀರಿನ ನಿಯಮಿತ ಬಳಕೆ, ಹೆಚ್ಚು ರಾಸಾಯನಿಕಗಳನ್ನು ಬಳಸೇ ಇರುವುದು ಅಲ್ಲದೇ ಬಳಸಿ ಎಸೆವ ವಸ್ತುಗಳನ್ನು ಕೈಬಿಡುವುದು ಉತ್ತಮ. ಮರುಬಳಕೆಯ ಇಂಧನಗಳನ್ನು ಬಳಸುವುದು ಇತ್ಯಾದಿಗಳನ್ನು ಮಾಡಬೇಕು. ಇದಕ್ಕಾಗಿ ಮೊದಲು ಒಂದಿಷ್ಟು ತೀರ್ಮಾನಗಳನ್ನು ತೆಗೆದುಕೊಂಡು ಹಂತ ಹಂತವಾಗಿ ಎಲ್ಲವನ್ನೂ ಅಳವಡಿಸುತ್ತಾ ಹೋಗಿ. ಒಮ್ಮೆಲೇ ಎಲ್ಲವನ್ನೂ ಮಾಡುವುದು ಕಷ್ಟ ಸಾಧ್ಯವಾದೀತು. ಈ ಮೂಲಕ ನಿಮ್ಮ ಕುಟುಂಬ, ಇತರರಿಗೂ ಮಾದರಿಯಾಗಬಹುದು.

ವೃಕ್ಷ ರಕ್ಷಣೆ: ಇಂದು ಅಭಿವೃದ್ಧಿ ಹೆಸರಲ್ಲಿ ಅವ್ಯಾಹತವಾಗಿ ಮರಗಳನ್ನು ಕಡಿಯಲಾಗುತ್ತದೆ. ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ. ಆದ್ದರಿಂದ ನಾವು ವೃಕ್ಷ ರಕ್ಷಣೆಯ ತೀರ್ಮಾನಗಳನ್ನು ಕೈಗೊಳ್ಳಬಹುದು. ಸಾಧ್ಯವಾದಷ್ಟೂ ಮರಗಳನ್ನು ನೆಡುವುದು, ಸಾಧ್ಯವಾದರೆ ಸಸ್ಯಗಳ ಪೋಷಣೆ ಬಗ್ಗೆ ಗಮನ ಹರಿಸುವುದು, ನಗರದಲ್ಲಿ ವಾಸಿಸುವರಾದರೆ ವೃಕ್ಷ ರಕ್ಷಣೆಯ ಆಂದೋಲನದ ವಿವಿಧ ಚಟುವಟಿಕೆ, ಸಸಿ ನೆಡುವ ಚಟುವಟಿಕೆಯಲ್ಲಿ ವಿವಿಧ ತಂಡದೊಂದಿಗೆ ಪಾಲ್ಗೊಳ್ಳಬಹುದು. ಈ ಬಗ್ಗೆ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುವುದರೊಂದಿಗೆ ಸ್ವತಃ ಜಾಗೃತಿಯನ್ನೂ ಮೂಡಿಸಬಹದು.

ತ್ಯಾಜ್ಯದ ಸದ್ಭಳಕೆ: ನಮ್ಮ ಮನೆಗಳಲ್ಲೇ ನಿತ್ಯವೂ ಸಾಕಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರೊಂದಿಗೆ ಬಳಸಿದ ನೀರು ಕೂಡ. ಇವುಗಳನ್ನು ಸದ್ಭಳಕೆ ಮಾಡುವ ಬಗ್ಗೆ ಪರಿಣತರೊಂದಿಗೆ ಚರ್ಚಿಸಿ ಹೆಚ್ಚಿನ ವೆಚ್ಚ ಮಾಡದೇ ಸದ್ಭಳಕೆಯ ಕ್ರಮಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ ತರಕಾರಿ, ಪದಾರ್ಥ ತ್ಯಾಜ್ಯಗಳನ್ನು ಬಳಸಿಕೊಂಡು ಮನೆಯಲ್ಲೇ ಬಯೋ ಅನಿಲ ಉತ್ಪಾದನೆ ಮಾಡುವಂತಹ ಪುಟಾಣಿ ಫೈಬರ್‌ ಸ್ಥಾವರಗಳು ಇದೀಗ ಲಭ್ಯವಿವೆ. ಇದರಿಂದ ಮನೆಯಲ್ಲಿ ಎಲ್‌ಪಿಜಿ ಅನಿಲ, ಬೆಳಕಿಗೆ ಪರ್ಯಾಯವಾಗಬಹುದು. ಇದರೊಂದಿಗೆ ಬಳಸಿದ ನೀರು (ಸ್ನಾನದ ಮನೆ, ಪಾತ್ರೆ ತೊಳೆದ ನೀರು) ಇತ್ಯಾದಿಗಳನ್ನು ಮನೆಯಲ್ಲೇ ಶುದ್ಧೀಕರಿಸುವ ಕಡಿಮೆ ಖರ್ಚಿನ ಉಪಾಯಗಳೂ ಇವೆ. ಇದರಿಂದ ವಾಹನ, ಮನೆ ವಠಾರ ತೊಳೆಯಲು, ಸಸ್ಯಗಳಿಗೆ ನೀರು ಸಿಂಪಡಣೆ ಇತ್ಯಾದಿಗಳಿಗೆ ಬಳಸಬಹುದು.

ಮೋಟಾರು ವಾಹನ ಬಳಕೆ ಕಡಿಮೆಮಾಡಿ:ಮೋಟಾರು ವಾಹನಗಳನ್ನು ಬಳಸದೇ ಇರಲು ಇಂದಿನ ಕಾಲದಲ್ಲಿ ಸಾಧ್ಯವಿಲ್ಲ. ಆದರೆ ಅವುಗಳ ಬಳಕೆಗೆ ಸ್ವಯಂ ನಿಯಂತ್ರಣವನ್ನು ನಾವು ಹೇರಿಕೊಳ್ಳಬಹುದು. ಹೆಚ್ಚು ಇಂಧನ ವ್ಯಯ ಮಾಡುವ ವಾಹನಗಳಿದ್ದರೆ, ವಾಹನ ಬಳಕೆ ಕಡಿಮೆಗೊಳಿಸಬಹುದು. ಕಡಿಮೆ ದೂರದ ವ್ಯವಹಾರಕ್ಕೆ ಹೋಗುವಿರಾದರೆ ನಡೆದುಕೊಂಡೇ ಅಥವಾ ಸೈಕಲ್‌ನಲ್ಲಿ ಹೋಗಬಹುದು. ಪರಿಸರ ರಕ್ಷಣೆ ನಿಟ್ಟಿನಲ್ಲಿ ಸೈಕಲ್‌ ಸವಾರಿ ಮಹತ್ತರವಾದದ್ದು ಮತ್ತು ನಮ್ಮ ಆರೋಗ್ಯ ರಕ್ಷಣೆಗೂ ಇದು ಸಹಕಾರಿಯಾಗುತ್ತದೆ. ನಗರದಲ್ಲಿ ವಾಸಿಸುವವರಾದರೆ, ಒಬ್ಬರಿಗಾಗಿಯೇ ಕಾರು ಓಡಿಸುವುದನ್ನು ಬಿಟ್ಟು ಸಣ್ಣ ವಾಹನ ಬಳಸಬಹುದು. ಅದಕ್ಕೂ ಹೆಚ್ಚಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಪರಿಸರಕ್ಕೆ ಬಹುದೊಡ್ಡ ಉಪಕಾರವಾದೀತು.

ವಿದ್ಯುತ್‌ ಮಿತವಾಗಿ ಬಳಸಿ: ವಿದ್ಯುತ್‌ ಇಂದಿನ ತುರ್ತು ಅಗತ್ಯಗಳಲ್ಲೊಂದು. ವಿದ್ಯುತ್‌ ತಯಾರಿಕೆಗೆ ಸಾಕಷ್ಟು ಪ್ರಮಾಣದಲ್ಲಿ ಪರಿಸರದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. ಆದ್ದರಿಂದ ಹೆಚ್ಚು ಹೆಚ್ಚು ವಿದ್ಯುತ್‌ ಬಳಸಿದರೆ ಅದು ಪರಿಸರಕ್ಕೆ ಹಾನಿ ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ನಾವೇ ಕೈಗೊಳ್ಳಬಹುದು. ಮನೆಯಲ್ಲಿ ಕಡಿಮೆ ವಿದ್ಯುತ್‌ ಬಳಸುವ ಎಲ್‌ಇಡಿ ದೀಪಗಳ ಬಳಕೆ, ಬೇಕಾದ ಲೈಟ್‌ಗಳನ್ನು ಮಾತ್ರ ಉರಿಸುವುದು, ಹೆಚ್ಚು ಏರ್‌ಕಂಡೀಷರ್‌ಗಳನ್ನು ಬಳಸದೇ ಇರುವುದು, ಫ್ರಿಡ್ಜ್ ಎಲೆಕ್ಟ್ರಿಕ್‌ ಹೀಟರ್‌ ಇತ್ಯಾದಿಗಳ ಬಳಕೆ ಕಡಿಮೆ ಮಾಡುವುದು, ಎಲೆಕ್ಟ್ರಿಕ್‌ ಎಕ್ಸರ್‌ಸೈಸ್‌ ಮಷಿನ್‌ಗಳ ಬಳಕೆಯನ್ನು ಬಿಟ್ಟು ಬಿಡುವುದನ್ನು ಮಾಡಬಹುದು. ಇದರೊಂದಿಗೆ ಸಾಧ್ಯವಾದಷ್ಟೂ ಸೋಲಾರ್‌ ದೀಪಗಳ ಬಳಕೆ ಮಾಡುವುದರಿಂದ ವಿದ್ಯುತ್‌ ಬಳಕೆ ಕಡಿಮೆಮಾಡಲು ನಾವೂ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ.

ಇಂದಿನಿಂದಲೇ ಪರಿಸರದ ಸಂರಕ್ಷಣೆಯ ಕುರಿತಾಗಿ ಕಾಳಜಿ ವಹಿಸುವುದು ಅತೀ ಅಗತ್ಯ.

-ಶಾಫೀ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter